ಶುಕ್ರವಾರ, ಫೆಬ್ರವರಿ 3, 2023
15 °C
ಸರ್ಕಾರದಿಂದ ₹2 ಕೋಟಿ ಅನುದಾನ: ಒಂದೂ ಸಭೆಯಲ್ಲಿ ಪಾಲ್ಗೊಳ್ಳದ ಜಿಲ್ಲಾ ಉಸ್ತುವಾರಿ ಸಚಿವ

ಚಿಕ್ಕಬಳ್ಳಾಪುರ: ಉತ್ಸವದ ಉಸಾಬರಿಗೆ ಬಾರದ ಎಂಟಿಬಿ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಜ.7ರಿಂದ ನಡೆಯುವ ‘ಚಿಕ್ಕಬಳ್ಳಾಪುರ ಉತ್ಸವ’ದಿಂದ ದೂರ ಉಳಿದರೆ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೇತೃತ್ವದ ‘ಡಾ.ಕೆ.ಸುಧಾಕರ್ ಫೌಂಡೇಶನ್  ‘ಚಿಕ್ಕಬಳ್ಳಾಪುರ ಉತ್ಸವ’ದ ‘ಹೂಡಿಕೆ’ಯ ಪ್ರಮುಖ ಜವಾಬ್ದಾರಿ ಹೊತ್ತಿದೆ. ಹೀಗಿದ್ದರೂ ಇದು ಸರ್ಕಾರಿ ಕಾರ್ಯಕ್ರಮ ಎನಿಸಿದೆ. ಉತ್ಸವದ ನೇತೃತ್ವವಹಿಸಿರುವ ಡಾ.ಕೆ.ಸುಧಾಕರ್ ಅವರೇ ಖುದ್ದಾಗಿ ‘ಇದು ಸರ್ಕಾರಿ ಕಾರ್ಯಕ್ರಮ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವಕ್ಕೆ ₹ 2 ಕೋಟಿ ನೀಡಿದ್ದಾರೆ’ ಎಂದು ಒತ್ತಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ 15 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ‘ಉತ್ಸವ’ ನಡೆಸಲಾಗುತ್ತಿದೆ ಎಂದು ಸಚಿವರು ಮತ್ತು ಜಿಲ್ಲಾಡಳಿತ ಸ್ಪಷ್ಟವಾಗಿ ಹೇಳಿದೆ.

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು, ‘ಅದು ಸರ್ಕಾರದ ಕಾರ್ಯಕ್ರಮ. ಪಕ್ಷದ ಕಾರ್ಯಕ್ರಮವಲ್ಲ’ ಎಂದಿದ್ದರು. ‘ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷಗಳು ಪೂರ್ಣಗೊಂಡ ವಿಶೇಷ ಸಂದರ್ಭ’ದ
ಕಾರ್ಯಕ್ರಮ ಎಂದು ಉತ್ಸವಕ್ಕೆ ಸಂಬಂಧಿಸಿದ ಪ್ರಕಟಣೆಗಳು, ಸಮಿತಿಗಳ ರಚನೆಯ ಪ್ರಕಟಣೆಯಲ್ಲಿ ಜಿಲ್ಲಾಡಳಿತ ತಿಳಿಸಿದೆ.

ಉತ್ಸವದ ಸಿದ್ಧತೆಗಳು ಮತ್ತು ಆಯೋಜನೆಗೆ ಸಂಬಂಧಿಸಿದಂತೆ ರಚಿಸಿರುವ ಪ್ರಚಾರ ಉಪಸಮಿತಿ, ವಸ್ತು ಪ್ರದರ್ಶನ ಉಪಸಮಿತಿ, ಊರು ಹಬ್ಬ ಉಪಸಮಿತಿ, ವೇದಿಕೆ ಉಪಸಮಿತಿ, ಮೆರವಣಿಗೆ ಉಪಸಮಿತಿ, ಸ್ವಚ್ಛತೆ ಮತ್ತು ಕುಡಿಯುವ ನೀರು ಸರಬರಾಜು ಉಪಸಮಿತಿ, ವಸತಿ, ಶಿಷ್ಟಾಚಾರ ಉಪಸಮಿತಿ, ಆಹಾರ ಮೇಳೆ ಉಪಸಮಿತಿ, ದೀಪಾಲಂಕಾರ ಉಪಸಮಿತಿಯಲ್ಲಿ
ಜಿಲ್ಲಾ ಮಟ್ಟ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಸಂಚಾಲಕರಾಗಿದ್ದಾರೆ. ಹೀಗೆ ಪೂರ್ಣವಾಗಿ ಸರ್ಕಾರಿ ಅಧಿಕಾರಿಗಳು ಉತ್ಸವದ ಭಾಗವಾಗಿದ್ದಾರೆ.

ಸುಧಾಕರ್ ಫೌಂಡೇಶನ್ ‘ಹೂಡಿಕೆ’ಯಾದರೂ ಇದು ಅಧಿಕೃತವಾಗಿ ಸರ್ಕಾರಿ ಕಾರ್ಯಕ್ರಮ. ಇಂತಿಪ್ಪ ಪ್ರಮುಖ ಸರ್ಕಾರಿ ಕಾರ್ಯಕ್ರಮದ ಯಾವ ಸಭೆಗಳಲ್ಲಿಯೂ ಇಲ್ಲಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವರು
ಪಾಲ್ಗೊಂಡಿಲ್ಲ. ಉತ್ಸವಕ್ಕೆ ಸಂಬಂಧಿಸಿದಂತೆ ನಡೆದ ಲೋಗೊ ಬಿಡುಗಡೆ, ಗೀತೆ ಬಿಡುಗಡೆ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಸಿದ್ಧತೆಗಳ ಪರಿಶೀಲನೆಗೆ ಒಮ್ಮೆಯೂ ಬಂದಿಲ್ಲ. ‘ಉತ್ಸವ’ಕ್ಕೆ ಚಾಲನೆ ನೀಡಲು ಇನ್ನು ಎರಡು ದಿನಗಳ ಮಾತ್ರ ಬಾಕಿ ಇದೆ. ಇತ್ತೀಚೆಗೆ ಬಿಜೆಪಿ ಹಮ್ಮಿಕೊಂಡಿದ್ದ ‘ಬೂತ್ ವಿಜಯ ಅಭಿಯಾನ’ಕ್ಕೂ ಗೈರಾಗಿದ್ದರು.

‘ಮೈಸೂರು ದಸರಾ’, ‘ಹಂಪಿ ಉತ್ಸವ’, ಸೇರಿದಂತೆ ರಾಜ್ಯದಲ್ಲಿ ಸರ್ಕಾರದಿಂದ ನಡೆಯುವ ‘ಉತ್ಸವ’ಗಳ  ಉಸ್ತುವಾರಿ ಸಾಮಾನ್ಯವಾಗಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರದ್ದೇ ಆಗಿರುತ್ತದೆ. ಅವರ ನೇತೃತ್ವದಲ್ಲಿಯೇ ಸಿದ್ಧತೆಗಳು, ಸಭೆಗಳು ನಡೆಯುತ್ತವೆ. ಆದರೆ ಜಿಲ್ಲೆಯಲ್ಲಿ ಮಾತ್ರ ‘ಉಸ್ತುವಾರಿ’ ಸಚಿವರು ‘ಉತ್ಸವ’ದ ಉಸಾಬರಿಗೇ ಬಂದಿಲ್ಲ.   

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಮ್ಮಿಕೊಂಡಿದ್ದ ಖಾದಿ ಉತ್ಸವದ ಉದ್ಘಾಟನಾ ಕಾರ್ಯಕ್ರಮ, ಜಿಲ್ಲಾಡಳಿತದಿಂದ ನಡೆದ ಅಂಗವಿಕಲರ ದಿನಾಚರಣೆ, ಮಂಚೇನಹಳ್ಳಿ ತಾಲ್ಲೂಕಿನ ಜರಬಂಡಹಳ್ಳಿಯಲ್ಲಿ ನಡೆದ ಸಚಿವ ಆರ್.ಅಶೋಕ ಅವರ ‘ಗ್ರಾಮ ವಾಸ್ತವ್ಯ’, ಜಿಲ್ಲಾ ಕನ್ನಡ ರಾಜ್ಯೋತ್ಸವ, ಗೌರಿಬಿದನೂರಿನಲ್ಲಿ ನಡೆದ ತಾಲ್ಲೂಕು ಆಸ್ಪತ್ರೆ ಕಟ್ಟಡ ಕಾಮಗಾರಿ ಭೂಮಿ ಪೂಜೆ, ಚಿಕ್ಕಬಳ್ಳಾಪುರದಲ್ಲಿ ಕುರುಬರ ಸಂಘದ ಹಾಸ್ಟೆಲ್ ನಿರ್ಮಾಣಕ್ಕೆ ಭೂಮಿ ಪೂಜೆ–ಇವು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಕೈಗೊಂಡ ಪ್ರವಾಸದ ವಿವರ. ಹಾಸ್ಟೆಲ್ ನಿರ್ಮಾಣ ಹೊರತುಪಡಿಸಿ ಉಳಿದ ಎಲ್ಲ ಕಾರ್ಯಕ್ರಮಗಳು ಸರ್ಕಾರಿ ಕಾರ್ಯಕ್ರಮಗಳಾಗಿವೆ.

‘ಶಿಷ್ಟಾಚಾರ’ಕ್ಕೆ ಮಾತ್ರ ಹಾಜರಿ: ಜಿಲ್ಲೆಯ ವಿರೋಧ ಪಕ್ಷಗಳ ನಾಯಕರ ಮಾತಿನಲ್ಲಿ ಹೇಳುವುದಾದರೆ ಎಂ.ಟಿ.ಬಿ.ನಾಗರಾಜ್, ‘ಶಿಷ್ಟಾಚಾರದ ಸಚಿವ’ ಎನಿಸಿದ್ದಾರೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಎಂ.ಟಿ.ಬಿ.ನಾಗರಾಜ್ ಸರ್ಕಾರಿ ಕಾರ್ಯಕ್ರಮಗಳಿಗೆ ಶಿಷ್ಟಾಚಾರಕ್ಕಾಗಿ ಮಾತ್ರ ಭಾಗಿ ಆಗುತ್ತಿದ್ದಾರೆ ಎಂದು ಜೆಡಿಎಸ್ ನಾಯಕರು ಟೀಕಿಸಿದ್ದರು.

ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯಾದ್ಯಂತ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಆಗಿತ್ತು. ಕೆರೆಗಳಿಗೆ ಹಾನಿಯಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಅ.18ರಂದು ಹಾನಿಗೆ ಒಳಗಾಗಿದ್ದ ಗೌರಿಬಿದನೂರು ತಾಲ್ಲೂಕಿನ ಕೆಂಕರೆ ಕೆರೆಯನ್ನು ವೀಕ್ಷಿಸಿದರು. ಮಳೆಹಾನಿಗೆ ಸಂಬಂಧಿಸಿದಂತೆ ಆಗ ಸಚಿವರು ಭೇಟಿ ನೀಡಿದ ಮೊದಲ ಮತ್ತು ಕೊನೆಯ ಭೇಟಿ ಇದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು