ಗುರುವಾರ , ಜನವರಿ 28, 2021
15 °C
ವಿದ್ಯಾರ್ಥಿಗಳಿಗೆ ಕ್ಷೇತ್ರಶಿಕ್ಷಣಾಧಿಕಾರಿ, ಶಿಕ್ಷಕರ ಕಿವಿಮಾತು

ಭಯ ಬೇಡ, ಜಾಗೃತಿ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಎಸ್ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ನೇರ ತರಗತಿಗಳಿಗೆ ಹಾಗೂ 6 ದ 9ರವರೆಗಿನ ತರಗತಿಗೆ ವಿದ್ಯಾಗಮ ಆರಂಭಕ್ಕೆ ಸರ್ಕಾರ ಆದೇಶ ನೀಡಿರುವುದರಿಂದ ತಾಲ್ಲೂಕು ಶಿಕ್ಷಣ ಇಲಾಖೆ ಹಾಗೂ ಪಿಯುಸಿ ಕಾಲೇಜುಗಳ ಪ್ರಾಂಶುಪಾಲರು ಕೋವಿಡ್ -19 ಮಾರ್ಗಸೂಚಿಯನ್ವಯ ಶಾಲಾ-ಕಾಲೇಜುಗಳನ್ನು ಆರಂಭಿಸಿದರು.

ತಾಲ್ಲೂಕಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು-73, ಅನುದಾನರಹಿತ-15 ಹಾಗೂ ಸರ್ಕಾರಿ ಪ್ರೌಢಶಾಲೆಗಳು-21, ಅನುದಾನಿತ-4 ಹಾಗೂ 13 ಅನುದಾನರಹಿತ ಪ್ರೌಢಶಾಲೆಗಳು ಏಕಕಾಲಕ್ಕೆ ವಿದ್ಯಾಗಮ ಆರಂಭ ಮಾಡಿದವು. ಉಳಿದಂತೆ ತಾಲ್ಲೂಕಿನ ಸರ್ಕಾರಿ, ಖಾಸಗಿ ಪಿಯು ಕಾಲೇಜುಗಳಲ್ಲಿ ಪಿಯುಸಿ ನೇರ ತರಗತಿಗಳಲ್ಲಿ ಮಾರ್ಗಸೂಚಿಯಂತೆ ಪಾಠಪ್ರವಚನಗಳು ನಡೆಯಿತು.

ತಾಲ್ಲೂಕಿನ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ. ವರದಿಯನ್ನು ಶಾಲಾ ಮುಖ್ಯಶಿಕ್ಷಕರಿಗೆ ನೀಡಿದಂತೆ ನೆಗಟಿವ್ ಬಂದವರು ಶಿಕ್ಷಕ-ಶಿಕ್ಷಕಿಯರು 6ರಿಂದ 9 ರವರಿಗೂ ವಿದ್ಯಾಗಮ ಆರಂಭಿಸಿದ್ದಾರೆ. ಉಳಿದಂತೆ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಲಾ ಕೊಠಡಿಗಳಲ್ಲಿ ಹಾಗೂ ಶಾಲಾವರಣದಲ್ಲಿ ಒಂದು ಡೆಸ್ಕ್ ಗೆ ಇಬ್ಬರನ್ನು ಕೂರಿಸಿ, ಪಾಠಪ್ರವಚನಗಳನ್ನು ಆರಂಭಿಸಿದ್ದಾರೆ.

ಸಂಭ್ರಮ: ಶಾಲಾ–ಕಾಲೇಜುಗಳಿಗೆ ಆಗಮಿಸಿದ ವಿದ್ಯಾರ್ಥಿಗಳಲ್ಲಿ ಮಂದಹಾಸ ಬೀರಿದೆ. ಶಾಲಾ ಕಾಲೇಜುಗಳ ಮುಖ್ಯದ್ವಾರದಲ್ಲಿ ತಳಿರು ತೋರಣಗಳಿಂದ ಸಿಂಗರಿಸಿದ್ದರು.

ಶಿಕ್ಷಕ-ಶಿಕ್ಷಕಿಯರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಗುಲಾಬಿ ಹೂವುಗಳನ್ನು ನೀಡಿ ಶಾಲೆ-ಕಾಲೇಜುಗಳಿಗೆ ಸ್ವಾಗತಿಸಿದರು. ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳುವಂತೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರೀಕ್ಷೆ ಮಾಡಲಾಯಿತು.

ಆತಂಕ ಬೇಡ, ಜಾಗೃತಿ ಇರಲಿ: ‘ಕೊರೊನಾ ಮಾರ್ಗಸೂಚಿಯಂತೆ ಸರ್ಕಾರಿ, ಖಾಸಗಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 9 ರವರಿಗೂ ವಿದ್ಯಾಗಮ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿಯವರಿಗೆ ನೇರ ತರಗತಿಗಳನ್ನು ಆರಂಭಿಸಲಾಗಿದೆ. ಪೋಷಕರಿಂದ ಒಪ್ಪಿಗೆ ಪ್ರಮಾಣ ಪತ್ರ ತರಿಸಿಕೊಳ್ಳಲಾಗಿದೆ. ಕೊಠಡಿಗಳನ್ನು, ಶಾಲಾ ಆವರಣದಲ್ಲಿ ಸ್ಯಾನಿಟೈಜ್ ಮಾಡಲಾಗಿದೆ. ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಶೇ 80ರಷ್ಟಿದೆ. ಕೊರೊನಾ ಬಗ್ಗೆ ಭಯ ಬೇಡ. ಜಾಗೃತಿಯಿಂದ ಇರಬೇಕು’ ಎಂದು ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಸಿದ್ದಪ್ಪ ತಿಳಿಸಿದರು.

‘ತಾಲ್ಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಟವರ್‌ಗಳು ಸಿಗಲ್ಲ. ಆನ್‌ಲೈನ್‌ನಲ್ಲಿ ಪಾಠಗಳು ಅರ್ಥವಾಗುವುದಿಲ್ಲ. ನೇರ ತರಗತಿಗಳಿಂದ ಉಪನ್ಯಾಸಕರಿಂದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಅರ್ಥೈಸಬಹುದು. ಪಟ್ಟಣದ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಕೊರೊನಾ ಮಾರ್ಗಸೂಚಿಯಂತೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೇರ ತರಗತಿಗಳನ್ನು ಆರಂಭಿಸಲಾಗಿದೆ’ ಎಂದು ನ್ಯಾಷನಲ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್.ವಿ.ಶಿವಕುಮಾರ್ ತಿಳಿಸಿದರು.

ಪಾಠಗಳು ಅರ್ಥವಾಗಿದೆ: ‘10 ತಿಂಗಳಿಂದ ಶಾಲೆ ತರಗತಿಗಳು ಇರಲಿಲ್ಲ. ಮನೆಗಳಲ್ಲಿ ಇದ್ದು ಮಾನಸಿಕವಾಗಿ ಬಳಲಿದ್ದೇವೆ. ಆನ್‌ಲೈನ್ ತರಗತಿಗಳಿಗೆ ಮೊಬೈಲ್ ಟವರ್ ಹಾಗೂ ಮೊಬೈಲ್‌ಗಳು ಇರಲಿಲ್ಲ. ಸರಿಯಾಗಿ ಪಾಠ ಕೇಳಲು ಆಗಿಲ್ಲ. ನೇರ ತರಗತಿಗಳಿಂದ ಪಾಠಗಳು ಅರ್ಥವಾಗಿದೆ’ ಎಂದು ಯಲ್ಲಂಪಲ್ಲಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ವೈಷ್ಣವಿ ತಿಳಿಸಿದರು.

ಮಾರ್ಗಸೂಚಿ ಅನುಸರಿಸಿ: ‘ಸರ್ಕಾರದ ಸುರಕ್ಷತಾ ಕ್ರಮಗಳು ಪ್ರತಿಯೊಬ್ಬರು ಅನುಸರಿಸಬೇಕಾಗಿದೆ. ವಿದ್ಯಾರ್ಥಿಗಳು ಗುಂಪು ಕೂಡಬಾರದು. ಅಂತರದಲ್ಲಿ ಇರಬೇಕು. ಪೋಷಕರು ಸಹ ಮಕ್ಕಳ ಆರೋಗ್ಯದ ಬಗ್ಗೆ ತೀವ್ರ ನಿಗಾ ಇಡಬೇಕು. ವಿದ್ಯಾರ್ಥಿಗಳಿಗೆ ಆರೋಗ್ಯದ ಜೊತೆ ಶಿಕ್ಷಣವು ಮುಖ್ಯವಾಗಿದೆ’ ಎನ್ನುತ್ತಾರೆ ತಾಲ್ಲೂಕು ಕ್ಷೇತ್ರ ಸಂಪನ್ಮೂಲದ ಸಮನ್ವಯ ಅಧಿಕಾರಿ ಆರ್.ವೆಂಟರಾಮಪ್ಪ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.