ಮಂಗಳವಾರ, ಅಕ್ಟೋಬರ್ 27, 2020
19 °C
ಡಿಎಚ್‌ಒ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಮತ್ತು ವೈದ್ಯರೊಬ್ಬರ ನಡುವಿನ ಮೊಬೈಲ್ ಸಂಭಾಷಣೆ ವೈರಲ್

ಸಚಿವರ ಹೆಸರಲ್ಲಿ ವೈದ್ಯರಿಗೆ ಹಣಕ್ಕೆ ಬೇಡಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಕಚೇರಿಯ ಸಹಾಯಕ ಆಡಳಿತಾಧಿಕಾರಿ ಎನ್.ರಾಮಕೃಷ್ಣನ್ ಅವರು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಹೆಸರು ಉಲ್ಲೇಖಿಸಿ ವೈದ್ಯರೊಬ್ಬರಿಗೆ ಹಣ ನೀಡುವಂತೆ ಸೂಚಿಸಿದ ಮೊಬೈಲ್ ಸಂಭಾಷಣೆ ಆಡಿಯೊ ಮಂಗಳವಾರ ಬೆಳಕಿಗೆ ಬಂದಿದೆ.

ರಾಮಕೃಷ್ಣನ್ ಮತ್ತು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರ ನಡುವೆ ನಡೆದಿದೆ ಎನ್ನಲಾದ 2 ಮತ್ತು 1.13 ನಿಮಿಷಗಳ ಎರಡು ಆಡಿಯೊ ಸಂಭಾಷಣೆಗಳಲ್ಲಿ ರಾಮಕೃಷ್ಣನ್ ಅವರು, ‘ಶ್ರೀರಾಮುಲು ಮದುವೆ ಮುಗಿಸಿಕೊಂಡು ಮತ್ತೆ ಆಫೀಸಿಗೆ ಬಂದಿದ್ದಾರಂತೆ, ಡಿಎಚ್‌ಒ ಅವರು ನಿಮ್ಮ ಕಚೇರಿಯಿಂದ ₹50 ಕೊಡಿಸುವಂತೆ ತಿಳಿಸಿದ್ದಾರೆ’  ಎನ್ನುವುದರೊಂದಿಗೆ ಸಂಭಾಷಣೆ ಆರಂಭವಾಗುತ್ತದೆ.

ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಸಚಿವ ಶ್ರೀರಾಮುಲು ಅವರು, ‘ಚಿಕ್ಕಬಳ್ಳಾಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಎನ್.ರಾಮಕೃಷ್ಣನ್ ಅವರು ವೈದ್ಯರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಕುರಿತು ಮಾಧ್ಯಮವೊಂದರಲ್ಲಿ ವರದಿ ಬಂದಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ಸಂಬಂಧಿಸಿದ ಮಾಧ್ಯಮ ವರದಿ ಆಡಿಯೊ ರೆಕಾರ್ಡಿಂಗ್ ಹಾಗೂ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಶಿಸ್ತುಕ್ರಮ ಕೈಗೊಳ್ಳಲು ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಈ ರೀತಿಯ ಚಟುವಟಿಕೆಗಳನ್ನು ಸಹಿಲು ಸಾಧ್ಯವಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ’ ಎಂದು ಟ್ವಿಟ್‌ ಮಾಡಿದ್ದಾರೆ.

ಅದರ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಇಂದಿರಾ.ಆರ್ ಕಬಾಡೆ ಅವರ ರಾಮಕೃಷ್ಣನ್ ಅವರನ್ನು ಅಮಾನತುಗೊಳಿಸುವಂತೆ ಕೋರಿ ಆರೋಗ್ಯ ಇಲಾಖೆ ಆಯುಕ್ತರಿಗೆ ಅಮಾನತುಗೊಳಿಸುವಂತೆ ಕೋರಿ ಪತ್ರ ಬರೆದಿದ್ದಾರೆ. ರಾಮಕೃಷ್ಣನ್ ಅವರು ಸೋಮವಾರದಿಂದಲೇ 10 ದಿನಗಳ ರಜೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. 

ಈ ಕುರಿತು ಇಂದಿರಾ ಅವರನ್ನು ವಿಚಾರಿಸಿದರೆ, ‘ನಾನು ಒಂದು ತಿಂಗಳ ಹಿಂದಷ್ಟೇ ಇಲ್ಲಿ ಕರ್ತವ್ಯಕ್ಕೆ ಹಾಜರಾಗಿರುವೆ. ರಾಮಕೃಷ್ಣನ್ ಅವರು ವೈದ್ಯರೊಬ್ಬರ ಬಳಿ ಹಣಕ್ಕೆ ಬೇಡಿಕೆ ಇಟ್ಟ ವಿಚಾರ ನನಗೂ ಮಾಧ್ಯಮಗಳ ಮೂಲಕವೇ ತಿಳಿದಿದೆ. ರಾಮಕೃಷ್ಣನ್ ಅವರಿಗೆ ನೋಟಿಸ್‌ ಜಾರಿ ಮಾಡುವ ಜತೆಗೆ ಅಮಾನತಿಗೆ ಶಿಫಾರಸು ಮಾಡಲಾಗಿದೆ’ ಎಂದು ತಿಳಿಸಿದರು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು