ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: 76 ವಿದ್ಯಾರ್ಥಿಗಳಿಗೆ ಎರಡೇ ಕೊಠಡಿ!

ಪೆದ್ದತುಂಕೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುಃಸ್ಥಿತಿ
Last Updated 11 ಮಾರ್ಚ್ 2023, 5:42 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಪೆದ್ದತುಂಕೇಪಲ್ಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಶಾಲೆಯಲ್ಲಿ ಒಟ್ಟಾರೆ 76 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದಾಗಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ಈ ವಿದ್ಯಾರ್ಥಿಗಳು ಎರಡೇ ಕೊಠಡಿಗಳಲ್ಲಿ ಕುಳಿತು ಪಾಠ, ಪ್ರವಚನ ಕೇಳುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಇದರಿಂದಾಗಿ ಗ್ರಾಮದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೆದ್ದತುಂಕೇಪಲ್ಲಿ ಗ್ರಾಮವು ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರಲಿದೆ. ತಾಲ್ಲೂಕು ಕೇಂದ್ರದಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ 150 ಕುಟುಂಬಗಳಿವೆ. ಬಹುತೇಕ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ 30ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ.

ಆದರೆ, ಗ್ರಾಮದ ಜನರು ನಗರಕ್ಕೆ ಹೋಗಿ ಬರಲು ಬಸ್ ಸೌಲಭ್ಯ ಮತ್ತು ಸಮರ್ಪಕವಾದ ರಸ್ತೆಗಳು ಇಲ್ಲ. ಹೀಗಾಗಿ ಜನರು ತಮ್ಮ ಮಕ್ಕಳನ್ನು ಗ್ರಾಮದಲ್ಲೇ ಇರುವ ಪ್ರಾಥಮಿಕ ಶಾಲೆಗೆ ಕಳುಹಿಸುತ್ತಿದ್ದಾರೆ. ಈ ಶಾಲೆಯಲ್ಲಿ 76 ವಿದ್ಯಾರ್ಥಿಗಳು
ಕಲಿಯುತ್ತಿದ್ದಾರೆ. ಒಂದನೇ ತರಗತಿಯಲ್ಲಿ 13 ವಿದ್ಯಾರ್ಥಿಗಳು, ಎರಡನೇ ತರಗತಿಯಲ್ಲಿ 12, ಮೂರನೇ ತರಗತಿಯಲ್ಲಿ 13, ನಾಲ್ಕನೇ ತರಗತಿಯಲ್ಲಿ 06, ಐದನೇ ತರಗತಿಯಲ್ಲಿ 12, ಆರನೇ ತರಗತಿಯಲ್ಲಿ 10 ಹಾಗೂ ಏಳನೇ ತರಗತಿಯಲ್ಲಿ
12 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಶಾಲೆಗೆ ತಡೆಗೋಡೆ(ಕಾಂಪೌಂಡು)ಯೇ ಇಲ್ಲ. ಗ್ರಾಮದ ಕುರಿ, ಮೇಕೆ ಮತ್ತು ದನ, ಕರುಗಳು ಶಾಲೆಯ ಕೊಠಡಿಯತ್ತ ಬರುತ್ತಿವೆ. ಮುಖ್ಯದ್ವಾರಕ್ಕೆ ಗೇಟಿನ ವ್ಯವಸ್ಥೆಯಿಲ್ಲದಿರುವುದರಿಂದ ಶಾಲಾ ಆವರಣವು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಶಾಲೆಯ ಬಳಿ ವಿದ್ಯುತ್ ದೀಪ ಅಳವಡಿಸುವ ಅಗತ್ಯವಿದೆ. ಶೌಚಾಲಯಗಳು ನಿರ್ಮಾಣದ ಹಂತದಲ್ಲಿದ್ದರೂ, ಮಕ್ಕಳ ಬಳಕೆಗೆ
ಬಾರದಾಗಿದೆ.

ಶಿಥಿಲಾವಸ್ಥೆ ತಲುಪಿದ ಕೊಠಡಿಗಳು: ಶಾಲೆಗೆ ಇರುವ ಈ ಕೊಠಿಡಿಗಳು ಸಹ ಸುಸ್ಥಿತಿಯಲ್ಲಿ ಇಲ್ಲ. ಅವು ಶಿಥಿಲಾವಸ್ಥೆಗೆ ತಲುಪಿವೆ. ಕೊಠಡಿಗಳ ಮೇಲ್ಚಾವಣಿ, ಗೋಡೆಗಳ ಪದರಗಳು ಉದುರುವ ಸ್ಥಿತಿಯಲ್ಲಿದೆ.

ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಕುರ್ಚಿಗಳು ಇಲ್ಲದಿರುವುದರಿಂದ ನೆಲದ ಮೇಲೆಯೇ ಕುಳಿತು ಪಾಠ ಕೇಳುತ್ತಿದ್ದಾರೆ. ಮಳೆಗಾಲದಲ್ಲಿ ಕೊಠಡಿಗಳು ಸೋರುತ್ತವೆ. ಇದರಿಂದ ವಿದ್ಯಾರ್ಥಿಗಳ ಗೋಳು ಕೇಳದಂತಾಗಿದೆ. ಮಳೆಗಾಲದಲ್ಲಿ ಕೊಠಡಿಯಲ್ಲಿ ಶೇಖರಣೆಯಾದ ನೀರನ್ನು ಎತ್ತಿ ಹೊರಹಾಕುವುದರಲ್ಲೇ ಕಾಲಹರಣವಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

ಗೊಂದಲಕ್ಕೆ ಸಿಲುಕುವ ವಿದ್ಯಾರ್ಥಿಗಳು

ಶಾಲೆಗೆ ಅಗತ್ಯವಿರುವಷ್ಟು ತರಗತಿವಾರು ಶಿಕ್ಷಕ ಮತ್ತು ಶಿಕ್ಷಕಿಯರು ಇದ್ದಾರೆ. ಆದರೆ, ಶಾಲೆಗೆ ಕೊಠಡಿಗಳ ಸಂಖ್ಯೆ ಕೊರತೆಯಿರುವುದರಿಂದ 76 ವಿದ್ಯಾರ್ಥಿಗಳು ಎರಡೇ ಕೊಠಡಿಗಳಲ್ಲಿ ಕುಳಿತುಕೊಳ್ಳುವಂತಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಆಯಾ ತರಗತಿಗೆ ಅಗತ್ಯವಿರುವ ವಿಷಯಗಳನ್ನು ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ. ತರಗತಿಗಳ ವಿಷಯವಾರು ಶಿಕ್ಷಕ ಮತ್ತು ಶಿಕ್ಷಕಿಯರು ಒಟ್ಟಿಗೆ ಬೋಧನೆ ಮಾಡುತ್ತಿರುವುದರಿಂದ, ವಿದ್ಯಾರ್ಥಿಗಳಿಗೆ ಯಾವುದೇ ವಿಷಯಗಳು ಅರ್ಥವಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT