ಗುರುವಾರ , ಜನವರಿ 23, 2020
27 °C
ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವಂತೆ ಪಿಡಿಒಗಳಿಗೆ ಶಾಸಕ ಡಾ.ಕೆ. ಸುಧಾಕರ್ ಸಲಹೆ

ನರೇಗಾ ವಿಶೇಷ ಅಭಿವೃದ್ಧಿ ಯೋಜನೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಮಹಾತ್ಮ ಗಾಂಧೀಜಿ ಅವರ ಪರಿಕಲ್ಪನೆಗಳಾದ ಆದರ್ಶ ಗ್ರಾಮ, ಗ್ರಾಮ ಸ್ವರಾಜ್ ಕನಸು ನನಸಾಗಿಸಲು ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಪಂಚಾಯಿತಿ ಸದಸ್ಯರು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಶಾಸಕ ಡಾ.ಕೆ. ಸುಧಾಕರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಹಮ್ಮಿಕೊಂಡ 100 ದಿನಗಳ ವಿಶೇಷ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರರಾಗಿರುವ ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳು ಮತ್ತು ಪಿಡಿಒ ಅವರು ಹಳ್ಳಿಗಳಲ್ಲಿ ರಸ್ತೆ ನಿರ್ಮಾಣ, ನೈರ್ಮಲ್ಯ, ಶೌಚಾಲಯ ನಿರ್ಮಾಣ, ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ, ಚರಂಡಿಗಳ ಸ್ವಚ್ಛತೆ, ಕುಡಿಯುವ ನೀರು, ಅಂತರ್ಜಲ ಪೂರಣ, ಕಲ್ಯಾಣಿಗಳ ಸ್ವಚ್ಛತೆಯಂತಹ ಕೆಲಸಗಳಿಗೆ ಆದ್ಯತೆ ನೀಡಬೇಕು. ನಿವೇಶನ, ಅನುದಾನ ಹಂಚಿಕೆಗಳು ಸೇರಿದಂತೆ ಸರ್ಕಾರದ ಎಲ್ಲ ರೀತಿಯ ಯೋಜನೆಗಳು ಕಟ್ಟಕಡೆಯ ಸಾಮಾನ್ಯ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಸಾಮಾನ್ಯರ ಜೀವನಮಟ್ಟ ಸುಧಾರಣೆಯಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎಂ. ಚಿಕ್ಕನರಸಿಂಹಯ್ಯ ಮಾತನಾಡಿ, ‘ನರೇಗಾ 100 ದಿನಗಳ ವಿಶೇಷ ಅಭಿವೃದ್ಧಿ ಅಭಿಯಾನದ ಅಡಿ ಜಿಲ್ಲೆಯಾದ್ಯಂತ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಪೋಷಕ ಕಾಲುವೆ ನಿರ್ಮಾಣ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಲಾಗುತ್ತದೆ. ಈಗಾಗಲೇ ಪೋಷಕ ಕಾಲುವೆಗಳ ಸಮೀಕ್ಷೆ ನಡೆಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ‘ಅಧಿಕಾರಿಗಳು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಲ್ಲಿಟ್ಟುಕೊಂಡು ಶಾಲೆಗಳಲ್ಲಿ ಕಾಂಪೌಂಡ್ ನಿರ್ಮಾಣ, ಸರ್ಕಾರಿ ಕೊಳವೆ ಬಾವಿಗಳಿಗೆ ನೀರು ಮರುಪೂರಣ ವ್ಯವಸ್ಥೆ ಮಾಡಬೇಕು. ಉದ್ದೇಶಿತ ಕಾಮಗಾರಿಗಳನ್ನು 100 ದಿನಗಳ ಒಳಗೆ ಪೂರ್ಣಗೊಳಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸದಸ್ಯರಾದ ಕೆ.ಸಿ.ರಾಜಾಕಾಂತ್, ಕೆ.ಎಂ.ಮುನೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಸದಸ್ಯ ತಿರುಮಳಪ್ಪ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)