ಸೋಮವಾರ, ಜನವರಿ 17, 2022
18 °C
ಮಳೆಗೆ ಕೆರೆ ಕೋಡಿ: ಹಲವು ಮನೆ ಕುಸಿತ

ಚಿಂತಾಮಣಿ: ಕೊಚ್ಚಿಹೋದ ಪಾಪಾಗ್ನಿ ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಸುರಿದ ಮಳೆಯಿಂದ ಹಲವಾರ ಕೆರೆಗಳು ತುಂಬಿ ಕೋಡಿ ಹರಿದಿವೆ.

ಗ್ರಾಮೀಣ ಭಾಗಗಳಲ್ಲಿ ಹಲವಾರು ಮನೆಗಳು ಕುಸಿದುಬಿದ್ದಿವೆ. ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ತಾಲ್ಲೂಕಿನ ಮುಂತಕದಿರೇನಹಳ್ಳಿ ಗ್ರಾಮದಲ್ಲಿ ಕೋಳಿ ಫಾರಂಗೆ ನೀರು ನುಗ್ಗಿ ಸುಮಾರು 4 ಸಾವಿರ ಕೋಳಿಗಳು ಸತ್ತು ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹಲವಾರು ಕಡೆ ಮನೆಗಳಿಗೆ ನೀರು ನುಗ್ಗಿ, ಮನೆಗಳಲ್ಲಿನ ವಸ್ತುಗಳು ನೀರು ಪಾಲಾಗಿವೆ. ತೋಟ, ಹೊಲಗಳಲ್ಲಿ ನೀರು ನಿಂತಿದ್ದು ಬೆಳೆಗಳು ನಾಶವಾಗಿವೆ.

ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾಪತಿಮ್ಮನಹಳ್ಳಿ ಸಮೀಪ ಪಾಪಾಗ್ನಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕೊಚ್ಚಿಕೊಂಡು ಹೋಗಿದ್ದ ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಆ ರಸ್ತೆಯ ಮೂಲಕ ಹೋಗಬೇಕಾಗಿದ್ದ ಅನೇಕ ಗ್ರಾಮಗಳಿಗೆ ಸಂಪರ್ಕ ಇಲ್ಲದಂತಾಗಿದೆ. ಅಂಬಾಜಿದುರ್ಗ ಹೋಬಳಿಯ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಪಾಲೇಪಲ್ಲಿ ಗ್ರಾಮದಲ್ಲಿ 19 ಮನೆಗಳು ಭಾಗಷ: ಕುಸಿದುಬಿದ್ದಿವೆ. ಬಹುತೇಕ ಬಡವರ ಮಣ್ಣಿನ ಮನೆಗಳಾಗಿವೆ.

ಕೈವಾರ ಹೋಬಳಿಯ ಹಿರೇಪಾಳ್ಯ ಗ್ರಾಮದಲ್ಲಿ 15 ಮನೆಗಳು ಕುಸಿದುಬಿದ್ದಿವೆ. ತಾಲ್ಲೂಕಿನ ಬಹುತೇಕ ಗ್ರಾಮಗಳಿಂದ ಮನೆಗಳು ಕುಸಿದ ಮಾಹಿತಿಗಳು ಲಭ್ಯವಾಗುತ್ತಿವೆ. ತಹಶೀಲ್ದಾರ್ ಹನುಮಂತರಾಯಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಗ್ರಾಮಗಳಿಗೆ ಭೇಟಿ ನೀಡಿದರು.

ಊಲವಾಡಿ ಗ್ರಾಮ ಪಂಚಾಯಿತಿಯ ಹೆಬ್ಬರಿ ಗ್ರಾಮದ ಮಧ್ಯದಲ್ಲಿರುವ ಕಲ್ಯಾಣಿ ತುಂಬಿದ್ದು ನೀರು ಸುತ್ತಮುತ್ತಲ ಮನೆಗಳಿಗೆ ನುಗ್ಗಿದೆ. ಎಸ್.ರಾಗುಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಕರಿಯಪ್ಪಲ್ಲಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು 4 ಕುರಿಗಳು ಸತ್ತುಹೋಗಿವೆ.

ಸುಮಾರು 20 ವರ್ಷಗಳಿಂದ ತುಂಬದಿದ್ದ ಮುನುಗನಹಳ್ಳಿ, ಊಲವಾಡಿ, ನಂದಿಗಾನಹಳ್ಳಿ, ಕೈವಾರ, ಮುಂಗಾನಹಳ್ಳಿ ದೊಡ್ಡಕೆರೆ ಕೋಡಿ ಹರಿಯುತ್ತಿವೆ. ತಾಲ್ಲೂಕಿನ ಏನಿಗದಲೆ ಬಳಿ ಪಾಪಾಗ್ನಿ ನದಿ ಉಕ್ಕಿ ಹರಿಯುತ್ತಿದೆ. ಅಂಬಾಜಿದುರ್ಗ ಹೋಬಳಿಯ ಗೌನಹಳ್ಳಿ ಕೆರೆ ತುಂಬಿದ್ದು ಕೋಡಿ ಹರಿಯಲು ಸಾಧ್ಯವಾಗದೆ ಕೆರೆಯ ಕಟ್ಟೆ ಒಡೆಯುವ ಸ್ಥಿತಿ ಎದುರಾಗಿತ್ತು. ಗ್ರಾಮಸ್ಥರು ಜೆಸಿಬಿಯಿಂದ ಕಟ್ಟೆಯ ರಸ್ತೆಯಲ್ಲಿ ಕಾಲುವೆ ತೆರೆದು ನೀರು ಹರಿದು ಹೋಗುವಂತೆ ಮಾಡಿದ್ದಾರೆ. ಇದರಿಂದ ನೀರು ಜಮೀನುಗಳಿಗೆ ನುಗ್ಗಿದೆ.

ಗಂಜಿ ಕೇಂದ್ರ: ತಾಲ್ಲೂಕು ಆಡಳಿತವು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಹೋಬಳಿಗೆ ಒಂದರಂತೆ ಗಂಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿದೆ. ಆನೂರು, ಕೈವಾರ, ಕೆ.ರಾಗುಟ್ಟಹಳ್ಳಿ, ಯಗವಕೋಟೆ, ಕಡದನಮರಿ, ಕೋರ್ಲಪರ್ತಿ ವಸತಿನಿಲಯಗಳಲ್ಲಿ ತಾತ್ಕಾಲಿಕವಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಕಾಳಜಿ ಕೇಂದ್ರಗಳು: ತಾಲ್ಲೂಕಿನಲ್ಲಿ 6 ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಲಾಗಿದೆ. ಮುರುಗಮಲ್ಲ ಗ್ರಾಮದ ಬಾಲಕರ ವಿದ್ಯಾರ್ಥಿನಿಲಯ, ಬಟ್ಲಹಳ್ಳಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ, ಕೆ.ರಾಗುಟ್ಟಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಶಾಲೆ, ಕೈವಾರನಹೋಬಳಿಯ ಮಸ್ತೇನಹಳ್ಳಿ ಗ್ರಾಮದ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಲಯ, ಕಸಬಾ ಹೋಬಳಿಗಾಗಿ ನಗರದ ಪೋಸ್ಟ್ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿನಿಲಯ, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು