ಬುಧವಾರ, ಜನವರಿ 29, 2020
29 °C
ಸಕಾಲದ ಸಿಗದ ಗೌರವಧನ, ಗಾಯದ ಮೇಲೆ ಬರೆ ಎಳೆದಂತೆ ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಎರಡ್ಮೂರು ತಿಂಗಳು ದುಡ್ಡು ಹೊಂಚಬೇಕಾದ ಸ್ಥಿತಿಯಿಂದ ಹೈರಾಣ

ಕಾರ್ಯಕರ್ತೆಯರಿಗೆ ಮೊಟ್ಟೆ, ತರಕಾರಿ ‘ಹೊರೆ’

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳಲ್ಲಿ ಹೆಚ್ಚುತ್ತಿರುವ ರಕ್ತಹೀನತೆ ಪ್ರಮಾಣ ತಡೆಗಟ್ಟುವುದು ಮತ್ತು ಅಪೌಷ್ಟಿಕತೆ ನಿವಾರಣೆ ನಿಟ್ಟಿನಲ್ಲಿ ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ, ಹಾಲು, ಪೌಷ್ಟಿಕಾಂಶಯುಕ್ತ ಆಹಾರ ನೀಡುತ್ತಿದೆ. ಆದರೆ ಮೊಟ್ಟೆ, ತರಕಾರಿ, ಸಿಲಿಂಡರ್ ಅನುದಾನ ವಿಳಂಬದಿಂದಾಗಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೈರಾಣಾಗುತ್ತಿದ್ದಾರೆ.

ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ವಾರ ಸಾಮಾನ್ಯ ಮಕ್ಕಳಿಗೆ ಎರಡು ದಿನ, ಅಪೌಷ್ಟಿಕ ಮಕ್ಕಳಿಗೆ ಐದು ದಿನ, ಗರ್ಭಿಣಿ ಮತ್ತು ಬಾಣಂತಿಯರಿಗೆ ಮೂರು ದಿನ ಮೊಟ್ಟೆಗಳನ್ನು ಜತೆಗೆ ರಜಾ ದಿನಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ದಿನಗಳಲ್ಲಿ ಪೌಷ್ಟಿಕಾಂಶ ಭರಿತ ಊಟ ನೀಡಲಾಗುತ್ತದೆ. ಮೇಲಾಧಿಕಾರಿಗಳ ಅಣತಿಯಂತೆ ಅಂಗನವಾಡಿ ಕಾರ್ಯಕರ್ತೆಯರು ಈ ಕಾರ್ಯವನ್ನು ಚಾಚೂ ತಪ್ಪದೆ ಮಾಡುತ್ತ ಬರುತ್ತಿದ್ದಾರೆ.

ಆದರೆ ಮೊಟ್ಟೆ, ತರಕಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬರಬೇಕಾದ ಅನುದಾನ ಮೂರ್ನಾಲ್ಕು ತಿಂಗಳುಗಟ್ಟಲೇ ವಿಳಂಬವಾಗುತ್ತಿರುವುದು ಬಡ ಕಾರ್ಯಕರ್ತೆಯರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎನ್ನುವುದು ಸಾರ್ವತ್ರಿಕ ಅಳಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಕಾಲಕ್ಕೆ ಗೌರವಧನ ಪಾವತಿಯಾಗುತ್ತಿಲ್ಲ ಎಂಬುದು ಬಹುತೇಕರ ಆರೋಪ. ಪರಿಸ್ಥಿತಿ ಹೀಗಿರುವಾಗಲೇ ಜಿಲ್ಲೆಯಲ್ಲಿರುವ ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳು ಸೇರಿದಂತೆ 88,332 ಫಲಾನುಭವಿಗಳಿಗೆ ಸಕಾಲಕ್ಕೆ ಸರ್ಕಾರದ ಸೌಲಭ್ಯ ತಲುಪಿಸುವುದು ಸಾಕಷ್ಟು ಕಾರ್ಯಕರ್ತೆಯರಿಗೆ ‘ಗಾಯದ ಮೇಲೆ ಬರೆ’ ಎಳೆದಂತಾಗುತ್ತಿದೆ. ಸ್ವಂತ ಖರ್ಚಿನಲ್ಲಿ ಮೊಟ್ಟೆ, ತರಕಾರಿ, ಸಿಲಿಂಡರ್ ಹೊಂದಿಸಿಕೊಂಡು ಕೇಂದ್ರ ನಿಭಾಯಿಸುವುದು ಏದುಸಿರು ಬಿಡುವಂತೆ ಮಾಡಿದೆ ಎನ್ನುವುದು ಪ್ರತಿಯೊಬ್ಬ ಕಾರ್ಯಕರ್ತೆಯರಲ್ಲಿ ಮಡುಗಟ್ಟಿರುವ ಅಸಮಾಧಾನ.

ಪ್ರತಿಯೊಬ್ಬ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ತಿಂಗಳು ಮೊಟ್ಟೆಗೆ ಸುಮಾರು ₹2,000, ತರಕಾರಿಗೆ ₹400 ಮತ್ತು ಸಿಲಿಂಡರ್‌ಗೆ ₹700 ಹೀಗೆ ಕನಿಷ್ಠ ಸರಾಸರಿ ₹3,000 ಸ್ವಂತ ಹಣದಿಂದ ಭರಿಸಬೇಕು. ಬಳಿಕ ಎರಡ್ಮೂರು ತಿಂಗಳು ಬಿಟ್ಟು ಇಲಾಖೆಯಿಂದ ಅನುದಾನ ಪಾವತಿಯಾದ ಬಳಿಕ ಅದಕ್ಕಾಗಿ ಅಲ್ಲಿಇಲ್ಲಿ ಮಾಡಿದ ಸಾಲ ತೀರಿಸಿ, ಋಣಮುಕ್ತರಾಗಬೇಕಾದ ಸ್ಥಿತಿ ತಲೆದೋರಿದೆ. ಒಂದೆಡೆ ಸಕಾಲಕ್ಕೆ ಸಿಗದ ಸಂಬಳ, ಇನ್ನೊಂದೆಡೆ ಮೊಟ್ಟೆ, ತರಕಾರಿಗಾಗಿ ದುಡ್ಡು ಹೊಂಚಬೇಕಾದ ಸಂಕಟ ಕೆಳಹಂತದ ಕಾರ್ಯಕರ್ತೆಯರಿಗೆ ಹೇಳಲಾಗದ, ತಾಳಲಾಗದ ನೋವು ನೀಡುತ್ತಿದೆ ಎನ್ನಲಾಗಿದೆ.

ಪ್ರಸ್ತುತ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ₹8,000 ಮತ್ತು ಸಹಾಯಕಿಯರಿಗೆ ₹4,000 ಗೌರವಧನ ನೀಡುತ್ತಿದೆ. ಅದು ಕೂಡ ಸಕಾಲಕ್ಕೆ ಸಿಗುತ್ತಿಲ್ಲ. ಜತೆಗೆ ಜಿಲ್ಲೆಯಲ್ಲಿ ಮೂರು ತಿಂಗಳಿಂದ ಮೊಟ್ಟೆ, ತರಕಾರಿ ಬಿಲ್‌ ಕೂಡ ಕಾರ್ಯಕರ್ತೆಯರಿಗೆ ಪಾವತಿಯಾಗಿಲ್ಲ. ಸಣ್ಣ ಮೊತ್ತದಲ್ಲಿ ಜೀವನ ಸಾಗಿಸುವ ಕಾರ್ಯಕರ್ತೆಯರು ಸದ್ಯ ಸರಾಸರಿ ಸುಮಾರು ₹9,000 ದಷ್ಟು ಹಣವನ್ನು ಕುಟುಂಬದವರು, ಆಪ್ತರ ಬಳಿ ಪಡೆದುಕೊಂಡು, ಕೆಲವರು ತರಕಾರಿ, ಮೊಟ್ಟೆ ಮಾರುವವರ ಬಳಿ ಸಾಲ ಪಡೆದು ಅಂಗನವಾಡಿ ನಿಭಾಯಿಸಿ ಇಲಾಖೆಯ ಅನುದಾನಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಅಂಗನವಾಡಿ ಕಾರ್ಯರರ್ತೆಯರ ಈ ಸಂಕಟ ಅರಿತಿದ್ದ ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಮೊಟ್ಟೆ ಮತ್ತು ತರಕಾರಿ ಹಣವನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಮುಂಗಡವಾಗಿ ಪಾವತಿಸುವಂತೆ ಆದೇಶಿಸಿದ್ದರು. ಇದರಿಂದ ಕಾರ್ಯಕರ್ತೆಯರು ಹರ್ಷಗೊಳ್ಳುವ ಮುನ್ನವೇ ಅವರು ವರ್ಗವಾಗುತ್ತಿದ್ದಂತೆ ಅವರ ಆದೇಶ ಕೂಡ ಬೆಲೆ ಕಳೆದುಕೊಂಡಿತು. ಕಾರ್ಯಕರ್ತೆಯರ ಸಂಕಷ್ಟು ಹಾಗೇ ಮುಂದುವರಿಯಿತು.

ಅನುದಾನ ಸಕಾಲಕ್ಕೆ ಅಂಗನವಾಡಿಗಳಿಗೆ ತಲುಪದ ಕಾರಣ ಸರ್ಕಾರ ಖಜಾನೆ- 2 ತಂತ್ರಾಂಶ ವ್ಯವಸ್ಥೆಯನ್ನು ಸರಳಗೊಳಿಸಿ, ಪ್ರತಿಯೊಂದು ಅಂಗನವಾಡಿಗಳ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಕೆಲ ತಾಂತ್ರಿಕ ದೋಷಗಳು ಮತ್ತು ವಿವಿಧ ಕಾರಣಗಳಿಂದಾಗಿ ಅದು ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

‘ಇಲಾಖೆಯ ನಿರ್ದೇಶನ ನಾವು ತಪ್ಪದೇ ಪಾಲಿಸಲೇ ಬೇಕು. ಹಣದ ಕೊರತೆ ಎಂದು ಹೇಳಿ ಮೊಟ್ಟೆ ಕೊಡದೆ ಹೋದರೆ ಮೇಲಾಧಿಕಾರಿಗಳು ನೋಟಿಸ್ ನೀಡುತ್ತಾರೆ. ವಿಧವೆಯರು, ಆರ್ಥಿಕವಾಗಿ ಕಷ್ಟದಲ್ಲಿರುವ ನೌಕರರು ಪ್ರತಿ ತಿಂಗಳು ಮೊಟ್ಟೆ, ತರಕಾರಿ, ಸಿಲಿಂಡರ್‌ಗೆ ಹಣ ಹೊಂಚಲು ಪರದಾಡುತ್ತಾರೆ. ಸದ್ಯ ಈರುಳ್ಳಿ ದರ ಗಗನಕ್ಕೇರಿದೆ. ಗಂಡನ ಬಳಿ ಮೊಟ್ಟೆ, ತರಕಾರಿಗೆ ಪದೇ ಪದೇ ದುಡ್ಡು ಕೇಳುವುದಕ್ಕೆ ನಾಚಿಕೆಯಾಗುತ್ತಿದೆ. ಒಮ್ಮೊಮ್ಮೆ ಈ ಕೆಲಸವೇ ಸಾಕು ಎನಿಸುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅಳಲು ತೋಡಿಕೊಂಡರು.

***

ಅಂಕಿಅಂಶಗಳು

1,848 - ಅಂಗನವಾಡಿ ಕೇಂದ್ರಗಳು

113 - ಮಿನಿ ಅಂಗನವಾಡಿಗಳು

1,961 - ಒಟ್ಟು ಅಂಗನವಾಡಿಗಳು

1,917 - ಅಂಗನವಾಡಿ ಕಾರ್ಯಕರ್ತೆಯರು

1,763 - ಅಂಗನವಾಡಿ ಸಹಾಯಕಿಯರು

71,796 - ಮಕ್ಕಳು

12,856 - ಗರ್ಭಿಣಿ, ಬಾಣಂತಿಯರು

88,332 - ಒಟ್ಟು ಫಲಾನುಭವಿಗಳು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು