ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ | ವಿಜೃಂಭಣೆಯ ಈದ್‌: ಬೃಹತ್ ಮೆರವಣಿಗೆ

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ
Published : 16 ಸೆಪ್ಟೆಂಬರ್ 2024, 15:35 IST
Last Updated : 16 ಸೆಪ್ಟೆಂಬರ್ 2024, 15:35 IST
ಫಾಲೋ ಮಾಡಿ
Comments

ಚಿಂತಾಮಣಿ: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮ ದಿನ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಸೋಮವಾರ ನಗರ ಹಾಗೂ ತಾಲ್ಲೂಕಿನಾದ್ಯಂತ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಿದರು.

ಮೆಕ್ಕಾ-ಮದೀನಾವನ್ನು ಹೋಲುವ ಸ್ಥಬ್ದಚಿತ್ರಗಳನ್ನು ರಚಿಸಿ ಸಂತಸದಿಂದ ಕಣ್ತುಂಬಿಸಿಕೊಂಡರು. ಹೊಸ ಬಟ್ಟೆಧರಿಸಿ ಈದ್ ಶುಭಾಶಯಗಳನ್ನು ವಿನಿಮಯಿಸುತ್ತಿದ್ದ ದೃಶ್ಯಗಳು ಎಲ್ಲೆಡೆ ಕಂಡುಬಂದವು.

ದೊಡ್ಡಪೇಟೆಯ ಜಾಮಿಯಾ ಮಸೀದಿಯಲ್ಲಿ ಜಮಾವಣೆಗೊಂಡರು. ಅಲ್ಲಿಂದ ಫಾತೇಹಖಾನಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಯುವಕರು ಬಿಳಿಬಣ್ಣದ ಕುರ್ತಾಧರಿಸಿ, ಕೈಯಲ್ಲಿ ಹರಿರು ಝಂಡಾ ಬೀಸುತ್ತಾ, ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಚಿಣ್ಣರು ಮೈಸೂರು ಹುಲಿ ಟಿಪ್ಪು ಸುಲ್ತಾನ್ ವೇಷ ಧರಿಸಿ ಗಮನಸೆಳೆದರು. ಮೆಕ್ಕಾ ಮದೀನಾ ಸ್ಥಬ್ದಚಿತ್ರವನ್ನು ಹಾಗೂ ವಿವಿಧ ವೇಷಭೂಷಣಗಳನ್ನು ಹೊತ್ತ ಮೆರವಣಿಗೆ ನೆಕ್ಕುಂದಿಪೇಟೆ, ಮಹಬೂಬ್‌ನಗರ, ದೊಡ್ಡಪೇಟೆ, ಅಜಾದ್‌ಚೌಕ, ಎಂ.ಜಿ.ರಸ್ತೆ, ಬಾಗೇಪಲ್ಲಿ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ಬಾಗೇಪಲ್ಲಿ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕಣ್ಣು ಹರಿದಷ್ಟು ದೂರ ಕಾಣುತ್ತಿದ್ದ ಬೃಹತ್ ಮೆರವಣಿಗೆಯಲ್ಲಿ ಹಿರಿಯರು, ಕಿರಿಯರು ಎನ್ನದೆ ಎಲ್ಲ ವಯಸ್ಸಿನ ವ್ಯಕ್ತಿಗಳು ಭಾಗವಹಿಸಿದ್ದರು. ಹೆಣ್ಣುಮಕ್ಕಳು ರಸ್ತೆಯ ಎರಡು ಬದಿಯಲ್ಲಿ ನಿಂತು ಮೆರವಣಿಗೆಯ ಉತ್ಸಾಹವನ್ನು ಕಣ್ತುಂಬಿಸಿಕೊಂಡರು. ಸಾವಿರಾರು ಜನ ಭಾಗವಹಿಸಿದ್ದ ಮೆರವಣಿಗೆ ಶಾಂತಿಯುತವಾಗಿ ಈದ್ಗಾ ಮೈದಾನ ಸೇರಿತು. ಮಕ್ಕಾ ಮದೀನಾ ಸ್ಥಬ್ದ ಚಿತ್ರ ಸೇರಿದಂತೆ ವಿವಿಧ ಸ್ಥಬ್ದಚಿತ್ರಗಳ ಮೆರವಣಿಗೆಯ ಆಕರ್ಷಣೆಯಾಗಿತ್ತು.

ಈದ್ಗಾ ಮೈದಾನದಲ್ಲಿ ಧರ್ಮಗುರುಗಳು ಉಪನ್ಯಾಸ ನೀಡಿ, ‘ಈದ್ ಮಿಲಾದ್ ಶಾಂತಿ ಸಂದೇಶವನ್ನು ಸಾರುವ ಹಬ್ಬವಾಗಿದೆ. ಹಜರತ್ ಮಹಮದ್ ಪೈಗಂಬರ್ ಅವರು ಶಾಂತಿಪ್ರಿಯರು, ಸದ್ಗುಣಭರಿತ ವ್ಯಕ್ತಿತ್ವವನ್ನು ಹೊಂದಿದ್ದು ದಾನ ಧರ್ಮ, ಪುಣ್ಯ ಕಾರ್ಯಗಳಿಗೆ ಪ್ರೇರಣೆ ನೀಡುವಂತಹ ಮಹಾತ್ಮರಾಗಿದ್ದರು’ ಎಂದು ತಿಳಿಸಿದರು.

‘ಇಸ್ಲಾಂ ಧರ್ಮವು ಶಾಂತಿಯ ಸಂದೇಶವನ್ನು ನೀಡುತ್ತದೆ. ಇಸ್ಲಾಂ ಧರ್ಮದಲ್ಲಿ ಹಿಂಸೆಗೆ ಸ್ಥಳವೇ ಇಲ್ಲ. ಮುಸ್ಲಿಮರು ಶಾತಿಯುತವಾಗಿ ಎಲ್ಲ ಸಮುದಾಯಗಳೊಂದಿಗೆ ಸಹಬಾಳ್ವೆ ನಡೆಸಬೇಕು. ಶಾಂತಿ ಸಂದೇಶವನ್ನು ಸಾರಿದ ಮಹ್ಮದ್ ಪೈಗಂಬರ್ ಅವರ ಜೀವನ ಚರಿತ್ರೆಯನ್ನು ವ್ಯಾಸಂಗ ಮಾಡಬೇಕು. ಅವರ ಜೀವನ ಚರಿತ್ರೆಯನ್ನು ಓದದೆ ಧರ್ಮ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಬಾರದು’ ಎಂದು ಸಲಹೆ ನೀಡಿದರು.

ನಗರ ಹಾಗೂ ತಾಲ್ಲೂಕಿನ ವಿವಿಧ ಮದರಸಾಗಳಲ್ಲಿ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಹಾಡು, ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಾದವರಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು.

ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಡಿವೈಎಸ್ಪಿ ಪಿ.ಮುರಳೀಧರ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವೃತ್ತಗಳಲ್ಲಿ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಕಾವಲು ವ್ಯವಸ್ಥೆ ಮಾಡಲಾಗಿತ್ತು.

ಜಾಮಿಯಾ ಮಸೀದಿಯ ಅಧ್ಯಕ್ಷ ಮೂನ್ ಸ್ಟಾರ್ ಗೌಸ್ ಪಾಷಾ, ಉಪಾಧ್ಯಕ್ಷ ಸಮೀವುಲ್ಲಾ, ಕಾರ್ಯದರ್ಶಿ ಮಹಮದ್ ಇನಾಯತ್ ಉಲ್ಲಾ, ಖಜಾಂಚಿ ಮುಜೀರ್ ಅಹಮದ್, ಮುಖಂಡ ಶೇಖ್ ಸಾಧಿಕ್ ರಜ್ವಿ, ಅಕ್ಮಲ್‌ಖಾನ್, ಟಿಪ್ಪು, ಸಿಕಂದರ್ ಬಾಬು, ಜಮೀರ್‌ಪಾಷಾ, ಪರ್ವೀಜ್, ಅಲ್ತಾಫ್ ಪಾಷಾ, ಮೌಲಾ ಭಾಗವಹಿಸಿದ್ದರು.

ಚಿಂತಾಮಣಿಯ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಈದ್‌ ಹಬ್ಬದ ಅಂಗವಾಗಿ ಹಣ್ಣು ಹಂಪಲು ವಿತರಿಸಲಾಯಿತು
ಚಿಂತಾಮಣಿಯ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಈದ್‌ ಹಬ್ಬದ ಅಂಗವಾಗಿ ಹಣ್ಣು ಹಂಪಲು ವಿತರಿಸಲಾಯಿತು

ಹಣ್ಣು ಹಂಪಲು ವಿತರಣೆ

ಈದ್ ಅಂಗವಾಗಿ ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೀಲರ್ಸ್ ಅಸೋಸಿಯೇಷನ್ ವತಿಯಿಂದ ಸಿಹಿ ತಿಂಡಿ ಹಾಗೂ ಹಣ್ಣುಹಂಪಲು ವಿತರಿಸಲಾಯಿತು. ರೀಲರ್ಸ್ ಅಸೋಸಿಯೇಷನ್ ಸದಸ್ಯ ರಿಯಾಜ್ ಖಾನ್ ಸಿ.ಕೆ.ಶಬ್ಬೀರ್‌ ಸೈಯದ್ ಖಿಜರ್ ಅತ್ತರ್‌ ಬೇಗ್ ಇಲಿಯಾಜ್‌ ಖಾನ್ ಇಮ್ರಾನ್ ಮಹಬೂಬ್ ಎಸ್.ಆರ್.ರಿಯಾಜ್ ಕೈವಾರ ಬಾಬು ಜಮೀರ್ ಖಾನ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT