ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈತಿಕ ಮಾರ್ಗದಲ್ಲಿ ಚುನಾವಣೆ ಪ್ರಕ್ರಿಯೆ

ವಕೀಲರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಸೋತ ಬಣದವರ ಆರೋಪ
Last Updated 17 ಜುಲೈ 2019, 19:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ವಕೀಲರ ಸಂಘದ ಜಿಲ್ಲಾ ಘಟಕ ಕಾರ್ಯಕಾರಿ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆ ಸಂಪೂರ್ಣ ಕಾನೂನು ಬಾಹಿರವಾಗಿ, ಅಕ್ರಮ ಮಾರ್ಗದಲ್ಲಿ ನಡೆಸಲಾಗಿದೆ’ ಎಂದು ವಕೀಲರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರಕಾಶ್ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘದ ಅಧ್ಯಕ್ಷರು ವಕೀಲಿಕೆ ಮಾಡುವವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟು, ಹೊರಗಿನವರು, ವಕೀಲಿಕೆ ವೃತ್ತಿ ಮಾಡದವರನ್ನು ಹೆಸರನ್ನು ಪಟ್ಟಿಯಲ್ಲಿ ಸೇರಿಸಿ, ತಮ್ಮ ಇಷ್ಟಾನುಸಾರ ವಾಮಮಾರ್ಗದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿದ್ದಾರೆ’ ಎಂದು ಆಪಾದಿಸಿದರು.

‘ಕಾರ್ಯಕಾರಿ ಮಂಡಳಿ ಅವಧಿ ಕೊನೆಗೊಳ್ಳುವ 75 ದಿನಗಳಿಗಿಂತ ಮುಂಚಿತವಾಗಿ ಚುನಾವಣೆ ಪ್ರಕ್ರಿಯೆಗಳು ಆರಂಭಗೊಳ್ಳಬೇಕು. ಆದರೆ ಇಲ್ಲಿ ಎಲ್ಲ ಪ್ರಕ್ರಿಯೆಗಳನ್ನು ತರಾತುರಿಯಲ್ಲಿ ಕೊನೆಯ ಕ್ಷಣದಲ್ಲಿ ಮಾಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಅರ್ಹ 39 ಮತದಾರರ ಹೆಸರು ಕೈಬಿಟ್ಟಿರುವುದಕ್ಕೆ ಆಕ್ಷೇಪಣೆ ಸಲ್ಲಿಸಿದರೂ ಚುನಾವಣಾ ಅಧಿಕಾರಿ ಯಾವುದೇ ಕ್ರಮಕೈಗೊಳ್ಳಲಿಲ್ಲ’ ಎಂದು ಹೇಳಿದರು.

‘ಖಾಸಗಿ ಶಾಲೆಗಳು ಮತ್ತು ಸರ್ಕಾರಿ ನೌಕರರು, ಪೆಟ್ರೋಲ್ ಬಂಕ್ ನಡೆಸುವವರನ್ನು ಸಂಘದ ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿದೆ. ವಕೀಲಿಕೆ ಮಾಡುವವರ ಹೆಸರನ್ನು ದುರುದ್ದೇಶದಿಂದ ತೆಗೆದು ಹಾಕಲಾಗಿದೆ. ಈ ತಾರತಮ್ಯ ಕುರಿತು ಪ್ರಶ್ನಿಸಿದರೆ ಅಧ್ಯಕ್ಷರು ನನ್ನ ಇಷ್ಟದಂತೆ ಮಾಡುವೆ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಈವರೆಗೆ ಸದಸ್ಯತ್ವ ಶುಲ್ಕದ ಲೆಕ್ಕದ ಮಾಹಿತಿ ಕೂಡ ನೀಡಿಲ್ಲ’ ಎಂದು ತಿಳಿಸಿದರು.

‘ಸಂಘದ ಪದಾಧಿಕಾರಿಗಳು ಸರಿಯಾಗಿ ಮಹಾಸಭೆ ನಡೆಸಲಿಲ್ಲ. ಲೆಕ್ಕ ಪರಿಶೋಧನೆ ಮಾಡಿಸಿಲ್ಲ. ರಾಜ್ಯ ಘಟಕದಿಂದ ಬಂದ ಅನುದಾನ ಮತ್ತು ಹಿರಿಯ ವಕೀಲರು ನೀಡಿದ ದೇಣಿಗೆ ಬಗ್ಗೆ ಮಾಹಿತಿ ನೀಡಿಲ್ಲ. ವಿವೇಚನಾ ರಹಿತವಾಗಿ ಅಕ್ರಮ ಮಾರ್ಗದಲ್ಲಿ ಚುನಾವಣೆ ನಡೆಸಿದ್ದಾರೆ. ಅನ್ಯಾಯ ನಡೆದಿರುವುದು ಕಂಡುಬಂದರೂ ಚುನಾವಣೆ ಅಧಿಕಾರಿ ಯಾವುದೇ ಕ್ರಮಕೈಗೊಳ್ಳಲಿಲ್ಲ’ ಎಂದು ಆರೋಪಿಸಿದರು.

ಹಿರಿಯ ವಕೀಲ ಬಿ.ಎಚ್.ಮಹಮ್ಮದ್ ದಾವೂದ್ ಮಾತನಾಡಿ, ‘ಸಂಘದ ಬೈಲಾ ಉಲ್ಲಂಘಿಸಿ 15 ದಿನಗಳಲ್ಲಿ ತರಾತುರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿದ್ದಾರೆ. ಸುಮಾರು 20 ವರ್ಷಗಳಿಂದ ವಕೀಲ ವೃತ್ತಿಯಲ್ಲಿರುವವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ಮತದಾನದಿಂದ ವಂಚಿತರಾಗುವಂತೆ ಮಾಡಿದ್ದಾರೆ. ಮತದಾರರ ಪಟ್ಟಿ ಸರಿಪಡಿಸುವ ಭರವಸೆ ನೀಡಿದ ಚುನಾವಣಾಧಿಕಾರಿ ಆ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಳ್ಳಲಿಲ್ಲ’ ಎಂದು ಹೇಳಿದರು. ‌

‘ಮತದಾರರ ಪಟ್ಟಿಯಲ್ಲಿ ಹೊಸದಾಗಿ 40 ಸದಸ್ಯರ ಹೆಸರು ಸೇರಿಸಲಾಗಿದೆ. ಆ ಹೊಸಬರ ಮುಖವನ್ನು ಇಲ್ಲಿ ಯಾರು ಕೂಡ ನೋಡಿಲ್ಲ. ಬೇಕಾದವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಈ ಅವ್ಯವಹಾರದ ಬಗ್ಗೆ ಚುನಾವಣಾಧಿಕಾರಿ ಪ್ರಶ್ನಿಸಲಿಲ್ಲ. ಹೀಗಾಗಿ ನೂನ್ಯತೆಗಳ ನಡುವೆ ಚುನಾವಣೆ ನಡೆದಿದೆ. ಮತದಾರರ ತೀರ್ಪಿಗೆ ನಾವು ತಲೆ ಬಾಗಿದ್ದೇವೆ’ ಎಂದು ತಿಳಿಸಿದರು.

ವಕೀಲರಾದ ಗೋವಿಂದರೆಡ್ಡಿ, ಕೆ.ಎಂ.ಮುನೇಗೌಡ, ರಾಮಮೂರ್ತಿ, ಮಟಮಪ್ಪ, ನಾರಾಯಣಸ್ವಾಮಿ, ಪಾಪಿರೆಡ್ಡಿ, ಹರಿಕೃಷ್ಣ, ಹರೀಶ್, ವೆಂಕಟೇಶ್, ರಘುರಾಮ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT