ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಗ್ಗಿಲ್ಲದೆ ಹಿಗ್ಗುತ್ತಿರುವ ನೀಲಗಿರಿ ತೋಪುಗಳು

ಖಾಸಗಿ ಜಮೀನುಗಳಲ್ಲಿ ಹೆಚ್ಚುತ್ತಿರುವ ನೀಲಗಿರಿ ತೋಪು, ಅಂತರ್ಜಲ ರಕ್ಷಣೆಯಲ್ಲಿ ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ
Last Updated 17 ಡಿಸೆಂಬರ್ 2019, 19:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸತತ ಬರಗಾಲಕ್ಕೆ ಸಿಲುಕುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಅಭಿವೃದ್ಧಿಗೆ ಒಂದೆಡೆ ಎಲ್ಲಿಲ್ಲದ ಪ್ರಯತ್ನಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಪಾತಾಳದಲ್ಲಿನ ಅಂತರ್ಜಲವನ್ನೇ ನುಂಗಿ ಹಾಕುವ ನೀಲಗಿರಿ ಮರಗಳನ್ನು ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ ಎಂಬುದು ಪ್ರಜ್ಞಾವಂತರು ಮತ್ತು ರೈತರ ಆರೋಪವಾಗಿದೆ.

ಜಿಲ್ಲೆಯಲ್ಲಿ ಸುಮಾರು 48 ಸಾವಿರ ಹೆಕ್ಟೆರ್ ಸರ್ಕಾರಿ ಅರಣ್ಯ ಪ್ರದೇಶವಿದೆ. ಆ ಪೈಕಿ ಶೇ 40 ರಷ್ಟು (ಅಂದಾಜು 20 ಸಾವಿರ ಹೆಕ್ಟೆರ್‌) ಪ್ರದೇಶದಲ್ಲಿ ನೀಲಗಿರಿ ಬೆಳೆದಿದೆ. ಇನ್ನು ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ನೀಲಗಿರಿ ಪ್ರದೇಶದ ನಿಖರ ಲೆಕ್ಕ ಈವರೆಗೆ ಯಾರಿಗೂ ದೊರೆತಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯಲ್ಲಿ ಸಹ ಯಾವುದೇ ಮಾಹಿತಿ ಇಲ್ಲ.

ಬತ್ತಿ ಬರಡಾಗುತ್ತಿರುವ ಜಿಲ್ಲೆಯಲ್ಲಿ ಆಗಾಗ ಜಲಮೂಲಗಳ ಪುನಶ್ಚೇತನದ ಬಗ್ಗೆ ಕಾರ್ಯಾಗಾರ, ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ತಜ್ಞರು, ಜನಪ್ರತಿನಿಧಿಗಳು, ಅಧಿಕಾರಿಗಳು ನೀಲಗಿರಿ ತೊಡೆದು ಹಾಕುವ ಮಾತನಾಡುತ್ತಲೇ ಬಂದಿದ್ದಾರೆ. ವಾಸ್ತವ ಮಾತ್ರ ವೈರುಧ್ಯದಿಂದ ಕೂಡಿದೆ!

ಅಂತರ್ಜಲ ಬರಡಾಗಿಸುವ ಅಕೇಶಿಯಾ ಹಾಗೂ ನೀಲಗಿರಿ ಮರ ಬೆಳೆಸುವುದನ್ನು ರಾಜ್ಯ ಸರ್ಕಾರ 2015ರಲ್ಲಿ ನಿಷೇಧಿಸಿದೆ. ಸರ್ಕಾರಿ ಜಮೀನು, ಅರಣ್ಯ ಪ್ರದೇಶದಲ್ಲಿ ಈ ಎರಡು ಸಸಿಗಳನ್ನು ನಾಟಿ ಮಾಡಿ ಬೆಳೆಸದಂತೆ ಅರಣ್ಯ ಇಲಾಖೆಯವರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಆದರೆ ಸರ್ಕಾರದ ಆದೇಶದಲ್ಲಿ ರೈತರು ನೀಲಗಿರಿ ಬೆಳೆಯುವುದಕ್ಕೆ ನಿಷೇಧ ಹೇರದ ಕಾರಣಕ್ಕೆ ಜಿಲ್ಲೆಯಲ್ಲಿ ನೀಲಗಿರಿಯ ಖಾಸಗಿ ನೆಡುತೋಪುಗಳು ಹೆಚ್ಚುತ್ತಲೇ ಇವೆ.

ಅಂತರ್ಜಲಕ್ಕೆ ಮಾರಕವಾಗಿರುವ ನೀಲಗಿರಿ ಮರಗಳನ್ನು ಬೆಳೆಸದಂತೆ ಈಗಾಗಲೇ ಸರ್ಕಾರ ಆದೇಶ ನೀಡಿದೆ. ನೀಲಗಿರಿ ಮರಗಳ ತೆರವಿಗಾಗಿ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳ ಜಿಲ್ಲಾಡಳಿತಗಳು ಕಠಿಣ ಕ್ರಮಗಳತ್ತ ಮುಂದಾಗುತ್ತಿವೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮೃದು ಧೋರಣೆ ಅನುಸರಿಸುತ್ತಿರುವ ಪರಿಣಾಮ ಜಿಲ್ಲೆಯಾದ್ಯಂತ ಸಾವಿರಾರು ಎಕರೆ ನೀಲಗಿರಿ ತೋಪುಗಳು ಇನ್ನೂ ರಾರಾಜಿಸುತ್ತಿವೆ.

ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿದ್ದರೆ, ಇಲ್ಲಿನ ಜಿಲ್ಲಾಧಿಕಾರಿ ನೀಲಗಿರಿ ವಿಚಾರದಲ್ಲಿ ಮೌನ ವಹಿಸಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬರಪೀಡಿತ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಲ್ಲಿ ದಿನೇ ದಿನೇ ಮಳೆ ಪ್ರಮಾಣ ಕುಸಿಯುವ ಜತೆಗೆ ಅಂತರ್ಜಲ ಮಟ್ಟ ತೀವ್ರರೂಪದಲ್ಲಿ ಕುಸಿಯತೊಡಗಿದೆ. ಇದಕ್ಕೆ ಕಾರಣವಾದ ಹಲವು ವಿಚಾರಗಳಲ್ಲಿ ನೀಲಗಿರಿ ಮರಗಳೂ ಸೇರಿವೆ. ಹೀಗಾಗಿ, ಈ ಹಿಂದೆ ನಡೆದ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ನೀಲಗಿರಿ ಬೆಳೆಯುವದಕ್ಕೆ ತಡೆ ಹಾಕುವುದು ಮಾತ್ರವಲ್ಲದೆ, ಈಗಾಗಲೇ ಬೆಳೆದಿರುವ ನೀಲಗಿರಿ ಮರಗಳ ತೆರವುಗೊಳಿಸಿ ಆ ಜಾಗದಲ್ಲಿ ಪರ್ಯಾಯ ಬೆಳೆ ಬೆಳೆಯಲು ರೈತರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿತ್ತು.

ಅಲ್ಲದೆ ನೀಲಗಿರಿ ತೆರವುಗೊಳಿಸಿ, ಪರ್ಯಾಯ ಬೆಳೆ ಬೆಳೆಯಲು ನರೇಗಾ ಯೋಜನೆಯಡಿ ಅವಕಾಶವಿದ್ದರೆ ಅನುದಾನ ಒದಗಿಸುವ ಕುರಿತೂ ಸಭೆಗಳಲ್ಲಿ ಚರ್ಚಿಸಲಾಗಿತ್ತು. ಆದರೆ ಇದು ಕೇವಲ ಚರ್ಚೆಗೆ ಮಾತ್ರ ಸೀಮಿತವಾಗಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇದರಿಂದಾಗಿ ಸಭೆಯಲ್ಲಿ ತೀರ್ಮಾನವಾದ ವಿಚಾರಗಳು ಕಾಗದದಲ್ಲೇ ಉಳಿದಿವೆ. ಅನುಷ್ಠಾನ ಮಾಡಲು ಅಧಿಕಾರಿಗಳು ಮುಂದಾಗದ ಕಾರಣ ನೀಲಗಿರಿ ತೆರವು ಎಂಬುದು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.

ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ನೀಲಗಿರಿ ತೆರವುಗೊಳಿಸದ ಭೂಮಿ ಮಾಲೀಕರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿರುವ ಜಿಲ್ಲಾಧಿಕಾರಿ ಅವರು, ನೀಲಗಿರಿ ತೆರವುಗೊಳಿಸದಿದ್ದಲ್ಲಿ ಅಂತಹ ಜಮೀನಿನ ಪಹಣಿ ಕಾಲಂ 9ರಲ್ಲಿ ಸರ್ಕಾರಿ ಎಂದು ನಮೂದಿಸುವ ಎಚ್ಚರಿಕೆಯನ್ನೂ ನೀಡಿದರೂ ನೀಲಗಿರಿ ಬೆಳೆಗಾರರು ಎಚ್ಚೆತ್ತುಕೊಳ್ಳುತ್ತಿಲ್ಲ.

ಶಿಡ್ಲಘಟ್ಟ, ಚಿಂತಾಮಣಿ ಸೇರಿದಂತೆ ಅನೇಕ ಕಡೆಗಳಲ್ಲಿ ನೀಲಗಿರಿ ಮರಗಳನ್ನು ಖರೀದಿಸುವ ಮಂಡಿಗಳು ತಲೆ ಎತ್ತಿದ್ದು ಅವುಗಳ ವಹಿವಾಟು ಸಹ ಜೋರಾಗಿವೆ. ಸದ್ಯ ರೈತರಿಗೆ ಪರಿಸರ ಕಾಳಜಿಗಿಂತಲೂ ಹೆಚ್ಚಾಗಿ ತಮಗೆ ಆರ್ಥಿಕವಾಗಿ ಲಾಭ ತಂದುಕೊಡುವ ಮರ ಮುಖ್ಯವಾಗುತ್ತಿದೆ. ಜತೆಗೆ ಕೃಷಿ ತ್ಯಜಿಸಿ ಪಟ್ಟಣ ಸೇರಿದವರೆಲ್ಲ ಹೆಚ್ಚಾಗಿ ನೀಲಗಿರಿ ಬೆಳೆಯಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಆತಂಕದ ವಿಚಾರವೆಂದರೆ ಅತಿಯಾಗಿ ಅಂತರ್ಜಲ ಕುಸಿದ ಪ್ರದೇಶದಲ್ಲಿ ನೀಲಗಿರಿ ಪ್ರದೇಶ ವಿಸ್ತರಣೆಯಾಗುತ್ತಿದೆ ಎನ್ನಲಾಗಿದೆ.

‘ಅಧಿಕಾರಿಗಳು ಮೊದಲು ಸರ್ಕಾರಿ ಜಮೀನುಗಳಲ್ಲಿ ಬೆಳೆದಿರುವ ನೀಲಗಿರಿಯನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ಬಳಿಕ ಖಾಸಗಿ ಜಮೀನುಗಳಲ್ಲಿನ ನೀಲಗಿರಿ ತೆರವಿಗೆ ರೈತರಲ್ಲಿ ಅರಿವು ಮೂಡಿಸಿ, ಕ್ರಮಕ್ಕೆ ಮುಂದಾಗಬೇಕು. ಆಗ ಮಾತ್ರ ನೀಲಗಿರಿ ಮುಕ್ತ ಜಿಲ್ಲೆಯ ಕನಸು ನನಸಾಗಲು ಸಾಧ್ಯ. ಆದರೆ ಅಧಿಕಾರಿಗಳಿಗೆ ನೀಲಗಿರಿ ತೆರವುಗೊಳಿಸುವಲ್ಲಿ ಇಚ್ಛಾಶಕ್ತಿ ಇಲ್ಲ. ಹೀಗಾಗಿ ಖಾಸಗಿ ಜಮೀನುಗಳಲ್ಲಿ ನೀಲಗಿರಿ ಬೆಳೆಯುವ ಪ್ರವೃತ್ತಿ ಹೆಚ್ಚುತ್ತಲೇ ಇದೆ’ ಎಂದು ನಾಯನಹಳ್ಳಿ ನಿವಾಸಿ ಅಭಿರಾಮ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT