ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಡ್ಲಘಟ್ಟ | ಆಲೂಗಡ್ಡೆ ಬೆಳೆಗೆ ಮೂರು ತಲೆಮಾರಿನ ನಂಟು

ಡಿ.ಜಿ.ಮಲ್ಲಿಕಾರ್ಜುನ
Published 10 ಡಿಸೆಂಬರ್ 2023, 6:55 IST
Last Updated 10 ಡಿಸೆಂಬರ್ 2023, 6:55 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರಿನ ರೈತ ಬಿ.ಎನ್‌.ಧರ್ಮೇಂದ್ರ ಅವರಿಗೂ ಆಲೂಗಡ್ಡೆ ಬೆಳೆಗೂ ಮೂರು ತಲೆಮಾರಿನ ನಂಟು. ಅವರ ತಾತ ಮೇಲೂರಿನ ಭೀಮಣ್ಣನವರು(ಬಿ.ಮುನಿಶಾಮಯ್ಯ). ಅವರು 50–60ರ ದಶಕದಲ್ಲೇ ಸಿಮ್ಲಾ, ಜಲಂಧರ್‌ಗೆ ಹೋಗಿ ಲೋಡುಗಟ್ಟಲೆ ಆಲೂಗಡ್ಡೆಯ ಬಿತ್ತನೆ ಗೆಡ್ಡೆಗಳನ್ನು ತಂದು ನೂರಾರು ರೈತರಿಗೆ ವಿತರಿಸುತ್ತಿದ್ದರು.

ಕಾಲ ಬದಲಾದಂತೆ ತಮ್ಮ ಅನುಭವದಿಂದ, ಅನ್ವೇಷಕ ಗುಣದಿಂದ ಉತ್ಕೃಷ್ಟವಾಗಿ ಆಲೂಗಡ್ಡೆಯನ್ನು ಬೆಳೆಯುತ್ತಿರುವ ರೈತ ಬಿ.ಎನ್‌.ಧರ್ಮೇಂದ್ರ ಅದಕ್ಕಾಗಿ ಅಳವಡಿಸಿಕೊಂಡ ಪದ್ಧತಿಯೂ ವಿನೂತನವಾಗಿದೆ.

ಈ ಹಿಂದೆ ಮಳೆಗಾಲದಲ್ಲಿ ಆಲೂಗಡ್ಡೆ ಬೆಳೆ ಕೊಳೆಯುವ, ರೋಗ ಬೀಳುವ ಸಮಸ್ಯೆ ಇತ್ತು. ಅದಕ್ಕಾಗಿ ಈಗ ಹಾಸಿಗೆಯ ರೀತಿಯಲ್ಲಿ ಸುಮಾರು ಎಂಟು ಇಂಚು ಎತ್ತರದ ಸಮತಟ್ಟಾದ ಪ್ರದೇಶ ನಿರ್ಮಿಸಿ ಅದರ ಮೇಲೆ ಗಡ್ಡೆ ನಾಟಿ ಮಾಡಲಾಗುತ್ತಿದೆ. ಇದರಿಂದಾಗಿ ಬೇರುಗಳ ಸಮನಾದ ಹರಡುವಿಕೆಗೂ ಸಹಾಯಕ. ಮಳೆ ಬಿದ್ದರೂ ಕೊಳೆಯುವುದಿಲ್ಲ. ಗಾಳಿ ಬೆಳಕು ಚೆನ್ನಾಗಿ ಇರುವುದರಿಂದ ರೋಗ ಕಡಿಮೆ. ಗಿಡಕ್ಕೆ ಪೋಷಕಾಂಶಗಳು ಚೆನ್ನಾಗಿ ಸಿಗುತ್ತವೆ, ಕಡಿಮೆ ಬಿತ್ತನೆ ಗಡ್ಡೆಗಳನ್ನು ಬಳಸಿಕೊಂಡು ಹೆಚ್ಚು ಇಳುವರಿ ಪಡೆಯಬಹುದು ಎಂದು ಈ ಪದ್ಧತಿಯ ಅನುಕೂಲಗಳನ್ನು ಅವರು ವಿವರಿಸಿದರು.

ಸಾವಯವ ಗೊಬ್ಬರ, ಡ್ರಿಪ್ ಮೂಲಕ ಸಾವಯವಕ್ಕೆ ಪ್ರೇರೇಪಣೆಯಾಗುವ ಪೋಷಕಾಂಶಗಳನ್ನು ದ್ರವ ರೂಪದಲ್ಲಿ ಕೊಡುತ್ತೇವೆ. ಮಣ್ಣಿನ ರಕ್ಷಣೆಯೊಂದಿಗೆ ಅಧಿಕ ಇಳುವರಿ ಪಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ನಾವು ಬೆಳೆಯುವ ಆಹಾರ ಪೌಷ್ಟಿಕವಾಗಿರಬೇಕಾದರೆ ಮಣ್ಣಿನ ಆರೋಗ್ಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು ಎನ್ನುತ್ತಾರೆ.

ಒಂಬತ್ತು ಎಕರೆಯಲ್ಲಿ ಆಲೂಗಡ್ಡೆಯನ್ನು ಬೆಳೆದಿರುವ ಇವರು, ಸೆಪ್ಟೆಂಬರ್ ತಿಂಗಳಿನಲ್ಲಿ ಆಲೂಗಡ್ಡೆಯನ್ನು ನಾಟಿ ಮಾಡಿದ್ದಾರೆ. ಕೆ.ಎಫ್ ಬಯೋಟೆಕ್ ಮತ್ತು ಚಂಬಲ್ ಎಂಬ ಎರಡು ತಳಿಗಳನ್ನು ನಾಟಿ ಮಾಡಿದ್ದು, ಒಂದು ಎಕರೆಗೆ ಸುಮಾರು ಮೂರು ಟನ್ ಅಷ್ಟು ಹಳೆ ಪದ್ಧತಿಗಿಂತ ಹೆಚ್ಚಿಗೆ ಇಳುವರಿ ಪಡೆಯಲಿದ್ದಾರೆ. ಉತ್ತಮ ಗುಣಮಟ್ಟ, ದೊಡ್ಡದಾಗಿ ಒಂದೇ ಗಾತ್ರದಲ್ಲಿ ಬೆಳೆಯುವುದರಿಂದ ಚಿಪ್ಸ್ ತಯಾರಿಕೆಗೆ ಈ ಆಲೂಗಡ್ಡೆಗೆ ಬೇಡಿಕೆ ಇದೆ.

ಹಿಂದೆ ಅರವತ್ತರ ದಶಕದಲ್ಲಿ ಮೇಲೂರಿನ ತೋಟಗಳಲ್ಲಿ ಕೆಲಸಕ್ಕೆಂದು ಆಳುಗಳು ಸುತ್ತಮುತ್ತಲ ಹಳ್ಳಿಗಳಿಂದ ಸಾಲುಗಟ್ಟಿ ಹೋಗುತ್ತಿದ್ದರು. ಭಕ್ತರಹಳ್ಳಿಯಿಂದ ಮೇಲೂರಿಗೆ ಕೆಲಸಕ್ಕೆಂದು ಹೋಗುತ್ತಿದ್ದ ಜನರಿದ್ದ ವಸತಿ ಪ್ರದೇಶವನ್ನು ಭೀಮಣ್ಣ ಕಾಲೋನಿ ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಈ ಬೆಡ್ ಪದ್ಧತಿಯಲ್ಲಿ ಆಲೂಗಡ್ಡೆ ಬೆಳೆಯಲು ಬಹುಮುಖ್ಯ ಕಾರಣ ಕೂಲಿ ಆಳುಗಳ ಸಮಸ್ಯೆ. ಸಾಮಾನ್ಯವಾಗಿ ವಾರದಲ್ಲಿ ಎರಡು ಬಾರಿ ಔಷಧಿ ಸಿಂಪಡಿಸಬೇಕು. ಹತ್ತು ಎಕರೆಗೆ ಒಮ್ಮೆ ಔಷಧಿ ಸಿಂಪಡಿಸಲು ಹದಿನೈದು ಮಂದಿ ಕೆಲಸಗಾರರು ಬೇಕು. ಈಗ ಇವರು ಯಂತ್ರವನ್ನು ಬಳಸುವುದರಿಂದ ಒಬ್ಬ ವ್ಯಕ್ತಿಯಿಂದಲೇ ಔಷಧಿ ಸಿಂಪಡಿಸಲು ಸಾಧ್ಯವಿದೆ.

ದಾಳಿಂಬೆ, ದ್ರಾಕ್ಷಿ: ಇವರು ಆರು ಎಕರೆಯಲ್ಲಿ ನಾಲ್ಕು ವರ್ಷಗಳಿಂದ ದಾಳಿಂಬೆ ಬೆಳೆಯುತ್ತಿದ್ದಾರೆ. ಅದಕ್ಕೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಈ ಬೆಳೆಯಲ್ಲಿ ಬ್ಯಾಕ್ಟೀರಿಯಾ ನಿರ್ವಹಣೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆ ಬಹಳ ಮುಖ್ಯ. ಈ ಬೆಳೆಯಲ್ಲಿ ಗಿಡಗಳ ನಡುವೆ ಅಂತರ ಹೆಚ್ಚಿದ್ದಷ್ಟೂ ಅನುಕೂಲಗಳು ಹೆಚ್ಚಿದೆ ಎಂಬುದು ಅವರ ಅನುಭವದ ಮಾತು.

ಸುಮಾರು ಇಪ್ಪತ್ತೈದು ವರ್ಷಗಳಿಂದ 12 ಎಕರೆಯಲ್ಲಿ ಬೀಜರಹಿತ ದ್ರಾಕ್ಷಿ ತಳಿ ಶರದ್, ಸೋನ ಮತ್ತು ಕೃಷ್ಣ ಶರದ್ ಬೆಳೆಯುತ್ತಿದ್ದಾರೆ. ಇದಲ್ಲದೆ 120 ಕುರಿ, ಮೂರು ನಾಟಿ ಹಸು, ಎರಡು ಹಳ್ಳಿಕಾರ್ ಎತ್ತುಗಳು, ಹತ್ತು ಮೇಕೆಗಳನ್ನು ಸಾಕಿದ್ದಾರೆ. ಜಾನುವಾರುಗಳನ್ನು ಸಾಕುವ ಮುಖ್ಯ ಉದ್ದೇಶ ಅತ್ಯುತ್ತಮ ಗೊಬ್ಬರ ಶೇಖರಣೆ ಮಾಡಿ ತೋಟಕ್ಕೆ ಬಳಕೆ ಮಾಡುವುದು ಎಂದು ಅವರು ಹೇಳಿದರು.

‘ರೈತನನ್ನು ಅನ್ನದಾತರೆನ್ನುತ್ತಾರೆ. ಪರರಿಗೆ ನೀಡುವ ಶಕ್ತಿ ಇರುವವರನ್ನು ಬೇಡುವವರನ್ನಾಗಿ ಮಾಡಬಾರದು. ಸರ್ಕಾರ ನಮಗೆ ಸಹಾಯಧನ ನೀಡುವ ಅಗತ್ಯವಿಲ್ಲ. ಆದರೆ ಸರ್ಕಾರ ರೈತರಿಗೆ ಸಹಕಾರ ನೀಡಲಿ, ಮಾರುಕಟ್ಟೆಯ ದಾರಿಯನ್ನು ತೋರಿಸಲಿ, ಬೆಂಬಲ ಬೆಲೆ ನೀಡಲಿ ಸಾಕು’ ಎನ್ನುತ್ತಾರೆ ರೈತ ಮೇಲೂರು ಬಿ.ಎನ್‌.ಧರ್ಮೇಂದ್ರ.

ದಾಳಿಂಬೆ ಬೆಳೆಯ ಬಳಿ ರೈತ ಬಿ.ಎನ್‌.ಧರ್ಮೇಂದ್ರ
ದಾಳಿಂಬೆ ಬೆಳೆಯ ಬಳಿ ರೈತ ಬಿ.ಎನ್‌.ಧರ್ಮೇಂದ್ರ

ಬೆಳೆ ದೃಢೀಕರಣ ನಡೆಯಲಿ ಪ್ರತಿಯೊಂದು ಗ್ರಾಮ ಪಂಚಾಯಿಯಲ್ಲೂ ಆಯಾ ವ್ಯಾಪ್ತಿಯ ರೈತರು ತಾವು ಬೆಳೆಯುವ ಬೆಳೆಯನ್ನು ಧೃಡೀಕರಿಸಿ ಧೃಡೀಕರಣ ಪತ್ರ ಪಡೆಯುವಂತಾಗಬೇಕು. ಪ್ರತಿಯೊಂದು ಪಂಚಾಯಿತಿಯ ಮಾಹಿತಿ ಪಡೆಯುವ ಮೂಲಕ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಯಾವ ಯಾವ ಬೆಳೆ ಎಷ್ಟೆಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಬಹಳಷ್ಟು ಜನ ಒಂದೇ ಬೆಳೆ ಬೆಳೆದು ಹಣ ಕಳೆದುಕೊಳ್ಳುವುದು ತಪ್ಪುತ್ತದೆ. ಹೊಸದಾಗಿ ಬೆಳೆ ಬೆಳೆಯುವವರಿಗೆ ಈ ಮಾಹಿತಿಯಿಂದ ಬೆಳೆಯ ಆಯ್ಕೆ ಸುಲಭವಾಗುತ್ತದೆ. ಈ ಕೆಲಸ ಸರ್ಕಾರದಿಂದ ಆದಾಗ ಬೆಲೆ ಕುಸಿಯುವುದು ತಪ್ಪುತ್ತದೆ. ತಂತ್ರಜ್ಞಾನ ಬಳಸಿ ಮೊಬೈಲ್‌ ಮೂಲಕವೂ ಮಾಹಿತಿ ನೀಡಬಹುದು. ನಿಗದಿತ ಬೆಲೆಗೆ ರೈತರ ಉತ್ಪನ್ನ ಖರೀದಿಸಿ ಮಾರುವ ಮೂಲಕ ಆದಾಯ ಗಳಿಕೆ ಉದ್ಯೋಗ ನೀಡುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು ಎನ್ನುತ್ತಾರೆ ರೈತ ಬಿ.ಎನ್‌.ಧರ್ಮೇಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT