ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆ: ರಾಗಿ ಮಾರಾಟಕ್ಕೆ ರೈತರ ಹರಸಾಹಸ

ಗುಡಿಬಂಡೆಯ ರಾಗಿ ಖರೀದಿ ಕೇಂದ್ರದಲ್ಲಿ ಫಸಲು ಪರೀಕ್ಷೆಯಿಂದ ಸಮಸ್ಯೆ
Last Updated 5 ಫೆಬ್ರುವರಿ 2023, 5:46 IST
ಅಕ್ಷರ ಗಾತ್ರ

ಗುಡಿಬಂಡೆ: ರೈತರಿಗೆ ನೆರವಾಗಲಿ ಎಂಬ ಕಾರಣಕ್ಕೆ ರಾಗಿ ಬೆಳೆಯನ್ನು ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಮಾಡುತ್ತಿರುವುದು ರೈತರಿಗೆ ಖುಷಿಯ ವಿಚಾರವೇ ಆಗಿದೆ. ಆದರೆ, ರಾಗಿ ಖರೀದಿ ಕೇಂದ್ರದಲ್ಲಿ ರೈತರು ತರುವ ರಾಗಿಯ ಫಸಲನ್ನು ತಪಾಸಣೆ ಮಾಡುತ್ತಿರುವುದರಿಂದ ರೈತರು ತಾವು ಬೆಳೆದ ರಾಗಿಯನ್ನು ಮಾರಲು ಹರಸಾಹಸ ಪಡುವಂತಾಗಿದೆ.

ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯ ಬಳಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿದ್ದು, ಒಂದು ಕ್ವಿಂಟಲ್‌ಗೆ ₹3,578 ದರ ನಿಗದಿ ಮಾಡಲಾಗಿದೆ. ಇದರ ಜತೆಗೆ ಉಚಿತವಾಗಿ ಗೋಣಿ ಚೀಲವನ್ನು ಸರಬರಾಜು ಮಾಡಲಾಗಿದ್ದು, ರೈತರು ಮನೆಯಿಂದ ತಮ್ಮ ಸ್ವಂತ ಚೀಲದಲ್ಲಿ ರಾಗಿ ತಂದು ಮಾರಾಟ ಕೇಂದ್ರದಲ್ಲಿ ಇಲಾಖೆ ನೀಡುವ ಚೀಲಕ್ಕೆ ರಾಗಿ ತುಂಬಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟಕ್ಕೆ ಜನವರಿ ಅಂತ್ಯಕ್ಕೆ ತಾಲ್ಲೂಕಿನ 1,764 ರೈತರು ನೋಂದಣಿ ಮಾಡಿಕೊಂಡಿದ್ದು, ಫೆಬ್ರುವರಿ ಒಂದರಿಂದಲೇ ರಾಗಿ ಖರೀದಿ ಕೇಂದ್ರ ಆರಂಭವಾಗಿದೆ. ಆದರೆ, ಕೇಂದ್ರದಲ್ಲಿ ರಾಗಿ ಫಸಲು ಪರೀಕ್ಷೆ ಮಾಡುತ್ತಿರುವುದರಿಂದ ಪ್ರತಿನಿತ್ಯ 20 ರಿಂದ 30 ರೈತರಿಂದ ಮಾತ್ರವೇ ರಾಗಿ ಖರೀದಿಸಲಾಗುತ್ತಿದ್ದು, ಇದಕ್ಕಾಗಿ ರೈತರು ಸುಮಾರು ಎಂಟು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಬಂದಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.

ತಾಲ್ಲೂಕಿನ ರೈತರಿಂದ 25,400 ಕ್ವಿಂಟಲ್ ರಾಗಿಯನ್ನು ಖರೀದಿ ಮಾಡಬೇಕಾಗಿದ್ದು, ಮಾ. 31ರ ತನಕ ಖರೀದಿಸಲಾಗುವುದು. ಖರೀದಿ ನಂತರ ಸಕಾಲಕ್ಕೆ ರೈತರ ಖಾತೆಗಳಿಗೆ ನೇರವಾಗಿ ಹಣ ಸಂದಾಯವಾಗುವಂತೆ ಕ್ರಮ ವಹಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬೀಜ ನಿಗಮದ ಜಿಲ್ಲಾ ವ್ಯವಸ್ಥಾಪಕ ದಂಡೇಗೌಡ ತಿಳಿಸಿದ್ದಾರೆ.

‘ತಾಲ್ಲೂಕಿನ ಕೆಲ ರೈತರ ಪಹಣಿಯಲ್ಲಿ ರಾಗಿ ಬೆಳೆ ಬದಲಾಗಿ ಜೋಳ, ಭತ್ತ, ನೆಲಗಡಲೆ, ತೊಗರಿ, ದ್ರಾಕ್ಷಿ, ದಾಳಿಂಬೆ, ಸಪೋಟ ಹೀಗೆ ಇತರೆ ಬೆಳೆಗಳೆಂದು ತಪ್ಪು ತಪ್ಪಾಗಿ ನಮೂದಾಗಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಶೀಘ್ರವೇ ದೋಷ ಸರಿಪಡಿಸಿ ರೈತರಿಂದ ರಾಗಿ ಖರೀದಿಗೆ ಅವಕಾಶ ಕಲ್ಪಿಸಬೇಕು’ ಎಂದು ರೈತ ಮುಖಂಡ ಹಳೇ ಗುಡಿಬಂಡೆ ರಾಮನಾಥರೆಡ್ಡಿ ಅಗ್ರಹಿಸಿದ್ದಾರೆ.

ರಾಗಿ ಖರೀದಿ ಕೇಂದ್ರದ ಮಾರಾಟ ಅಧಿಕಾರಿ ವೆಂಕಟರಮಣಪ್ಪ ಮಾತನಾಡಿ, ‘ನೋಂದಾಯಿಸಿಕೊಂಡ ರೈತರಿಗೆ ನಾವೇ ಕೆರೆ ಮಾಡಿ ರಾಗಿ ತರುವಂತೆ ಸೂಚಿಸುತ್ತೇವೆ. ಅಂದಿನ ದಿನ ರೈತರು ರಾಗಿ ಕೇಂದ್ರಕ್ಕೆ ತಮ್ಮ ಫಸಲನ್ನು ತರಬೇಕು. ಗುಣಮಟ್ಟ ಕಾಪಾಡಲು ರಾಗಿಯ ಗುಣಮಟ್ಟ ಪರೀಕ್ಷಿಸುತ್ತಿರುವುದರಿಂದ ಸ್ವಲ್ಪ ತಡವಾಗುತ್ತಿದೆ. ರೈತರು ಸಹಕರಿಸಬೇಕು’ ಎಂದು ರೈತರಲ್ಲಿ ವಿನಂತಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT