ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಕೊರೊನಾ ಜತೆ ಹೋರಾಡುತ್ತಲೇ ಬದುಕಬೇಕು: ಸುಧಾಕರ್

ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ 19 ಪ್ರಾಥಮಿಕ ಹಂತದ ಪರೀಕ್ಷೆ ನಡೆಸುವ ಎರಡು ಟ್ರ್ಯೂ ನ್ಯಾಟ್ ಯಂತ್ರಗಳಿಗೆ ಚಾಲನೆ
Last Updated 16 ಮೇ 2020, 14:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಹೇಳಿರುವ ಪ್ರಕಾರ ಕೊರೊನಾ ವೈರಾಣು ಸೋಂಕು ಅಂತ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ, ಅದರ ವಿರುದ್ಧ ಹೋರಾಡುತ್ತಲೇ ನಾವು ಬದುಕಬೇಕಿದೆ’ಎಂದು ಜಿಲ್ಲಾ ಉಸ್ತುವಾರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಹೊಸದಾಗಿ ಅಳವಡಿಸಿದ ಕೋವಿಡ್–19 ಪ್ರಾಥಮಿಕ ಹಂತದ ಪರೀಕ್ಷೆ ನಡೆಸುವ ಎರಡು ಟ್ರ್ಯೂ ನ್ಯಾಟ್ ಯಂತ್ರಗಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಈಗಾಗಲೇ ಲಾಕ್‌ಡೌನ್ ಪರಿಣಾಮ ಇಡೀ ವಿಶ್ವ, ಭಾರತ, ರಾಜ್ಯದ ಆರ್ಥಿಕ ಸ್ಥಿತಿ ಆರು ತಿಂಗಳು ಹಿಂದಕ್ಕೆ ಹೋಗಿದೆ. ನಾವು ಇವತ್ತು ಕೋವಿಡ್‌ ಜತೆಗೆ ಬದುಕಬೇಕಾಗಿರುವುದರಿಂದ ನಾಲ್ಕನೇ ಹಂತದ ಲಾಕ್‌ಡೌನ್ ಮೊದಲಿನಂತೆ ಇರುವುದಿಲ್ಲ. ಹಂತಹಂತವಾಗಿ ಲಾಕ್‌ಡೌನ್ ಸಲಡಿಕೆ ಅನಿವಾರ್ಯ’ಎಂದು ಹೇಳಿದರು.

‘ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆಗೆ ಆರಂಭದಲ್ಲಿ ಕೇವಲ ಎರಡು ಪ್ರಯೋಗಾಲಯಗಳು ಮಾತ್ರ ಇದ್ದವು. ಕಳೆದ ಎರಡು ತಿಂಗಳಲ್ಲಿ 40 ಪ್ರಯೋಗಾಲಯ ಸ್ಥಾಪಿಸಲಾಗಿದೆ. ಈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ ಪ್ರಯೋಗಾಲಯಗಳ ಸಂಖ್ಯೆಯನ್ನು 60ಕ್ಕೆ‌ ಏರಿಕೆ ಮಾಡಿ, ನಿತ್ಯ 10 ಸಾವಿರಕ್ಕೂ ಅಧಿಕ ಮಾದರಿಗಳ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ’ಎಂದರು.

‘ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಶಂಕಿತ ವ್ಯಕ್ತಿಗಳಿಂದ ಪಡೆದ ಗಂಟಲು ದ್ರವ ಮಾದರಿಗಳನ್ನು ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಪರೀಕ್ಷೆಗೆ ಕಳುಹಿಸಿ ಕಾಯಿಲೆ ದೃಢಪಡಿಸಿಕೊಳ್ಳಲಾಗುತ್ತಿತ್ತು. ಇದೀಗ ಟ್ರ್ಯೂ ನ್ಯಾಟ್ ಯಂತ್ರಗಳ ಸಹಾಯದಿಂದ ನಮ್ಮಲ್ಲೂ ಪ್ರಾಥಮಿಕ ಹಂತದಲ್ಲೇ ಸೋಂಕು ಪತ್ತೆ ಹಚ್ಚಿ ತ್ವರಿತ ಚಿಕಿತ್ಸೆ ನಡೆಸಲು ಅನುಕೂಲವಾಗಲಿದೆ’ಎಂದು ಹೇಳಿದರು.

ನಂತರ ಸಚಿವರು ಹೆಬ್ಬಾಳ ನಾಗವಾರ ಕೆರೆಗಳ ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ತುಂಬಿಸುತ್ತಿರುವ ನಗರ ಹೊರವಲಯದ ಕಂದವಾರ ಕೆರೆಗೆ ಭೇಟಿ ನೀಡಿ, ಪಂಪ್‌ಹೌಸ್‌ ಪರಿಶೀಲಿಸಿದರು.

‌ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ:ಬಳಿಕ ಸಚಿವ ಸುಧಾಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಡಿಕಲ್ ಹೋಬಳಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ₹7.85 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

₹ 3 ಕೋಟಿ ವೆಚ್ಚದಲ್ಲಿ ಶೆಟ್ಟಿಗೆರೆ ಗ್ರಾಮದಿಂದ ಪಿಲ್ಲಗುಂಡ್ಲಹಳ್ಳಿ, ಬಂಡಹಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-7 ಸೇರುವ ರಸ್ತೆ ಅಭಿವೃದ್ಧಿ, ₹2.25 ಕೋಟಿಯಲ್ಲಿ ಪಿ.ಜಿ.ರಸ್ತೆಯಿಂದ ಮಂಡಿಕಲ್ ರಸ್ತೆ ಅಭಿವೃದ್ಧಿ, ಹಾಗೂ ₹2.60 ಕೋಟಿ ವೆಚ್ಚದ ಪೆರೇಸಂದ್ರ-ಸಾದಲಿ ರಸ್ತೆಯಿಂದ ಕೋರೇನಹಳ್ಳಿ, ಯಲಗಲಹಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-7 ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸುಧಾಕರ್ ಅವರು ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿ಼ಯಾ ತರನ್ನಮ್, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಕೆ.ವಿ.ನಾಗರಾಜ್, ಎಂ.ಎಫ್.ಸಿ ನಾರಾಯಣಸ್ವಾಮಿ, ಚನ್ನಕೃಷ್ಣಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT