ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯಲು ಶುದ್ಧ ನೀರನ್ನೇ ಬಳಸಿ

ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ವಾಕಿಂಗ್ ಮ್ಯಾರಾಥಾನ್‌ ಆಯೋಜನೆ
Last Updated 29 ಜನವರಿ 2019, 14:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ಕುಡಿಯುವ ನೀರಿನಲ್ಲಿ ಪ್ಲೊರೈಡ್ ಅಂಶ ಇರುವುದು ಧೃಡಪಟ್ಟಿದೆ. ಪ್ಲೊರೈಡ್ ಮಕ್ಕಳು ಮತ್ತು ಗರ್ಭಿಣಿಯರ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಎಂ.ರವಿಶಂಕರ್ ತಿಳಿಸಿದರು.

ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಜಿಲ್ಲಾ ಆರೊಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ಬನ್ನಿ ನಡೆಯೋಣ, ಫ್ಲೋರೋಸಿಸ್ ಬಗ್ಗೆ ತಿಳಿಯೋಣ’ ಎಂಬ ವಾಕಿಂಗ್ ಮ್ಯಾರಾಥಾನ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಿನನಿತ್ಯ ಸೇವಿಸುವ ನೀರಿನಲ್ಲಿ ಅಗತ್ಯಕ್ಕಿಂತ ಫ್ಲೋರೈಡ್ ಅಂಶ ಅಧಿಕವಾಗಿದ್ದರೆ ಫ್ಲೋರೋಸಿಸ್ ಕಾಯಿಲೆ ಉಂಟಾಗುತ್ತದೆ. ಇದು ದಂತ ಮತ್ತು ಮೂಳೆಗಳ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ. ಕುಡಿಯುವ ನೀರಿನ ಮೂಲಕ ಈ ರೋಗ ಹರಡುತ್ತದೆ. ಆದ್ದರಿಂದ ಇದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುತ್ತಿದೆ. ಜನರು ಶುದ್ಧ ನೀರನ್ನೇ ಕುಡಿಯಬೇಕು’ ಎಂದು ಹೇಳಿದರು.

‘ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿ ತಾಲ್ಲೂಕುಗಳಲ್ಲಿ ನೀರಿನಲ್ಲಿ ಪ್ಲೋರೋಸಿಸ್ ಅಂಶ ಹೆಚ್ಚಾಗಿರುವುದು ಕಂಡುಬಂದಿದೆ. ಆದ್ದರಿಂದ ಜನರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ವಿಜಯ್ ಕುಮಾರ್ ಮಾತನಾಡಿ, ‘ಪ್ರತಿಯೊಬ್ಬರು ಶುದ್ಧ ಕುಡಿಯುವ ನೀರು ಸೇವಿಸಬೇಕು. ಮುಖ್ಯವಾಗಿ ಗರ್ಭಿಣಿಯರು ಮತ್ತು ಮಕ್ಕಳು ಫ್ಲೋರೈಡ್ ಅಂಶ ಅಧಿಕವಾಗಿರುವ ನೀರನ್ನು ಸೇವಿಸಬಾರದು. ದಿನನಿತ್ಯ ಆಹಾರದಲ್ಲಿ ವಿಟಮಿನ್, ಕ್ಯಾಲ್ಸಿಯಂ ಹಾಗೂ ಮೆಗ್ನೀಷಿಯಂ ಹೆಚ್ಚು ಇರುವ ಅಂದರೆ ನೆಲ್ಲಿಕಾಯಿ, ನಿಂಬೆ, ಕಿತ್ತಳೆ, ಮೋಸಂಬಿ, ಹುಣಸೇಹಣ್ಣು, ಸೀಬೆ, ಹಾಲು, ಬೆಲ್ಲ, ಹಸಿರು ಸೊಪ್ಪು, ನುಗ್ಗೇಕಾಯಿ, ಕಾಳುಗಳು, ಹಸಿರು ತರಕಾರಿಗಳನ್ನು ಹೆಚ್ಚಾಗಿ ಬಳಸಬೇಕು’ ಎಂದು ತಿಳಿಸಿದರು.

‘ಅಂತರ್ಜಲ ಭೂಮಿಯ ಆಳಕ್ಕೆ ಹೋದಷ್ಟು ನೀರಿನಲ್ಲಿ ಫ್ಲೋರೈಡ್, ಆರ್ಸೆನಿಕ್ ಸೇರಿದಂತೆ ರಾಸಾಯನಿಕ ಅಂಶಗಳು ಹೆಚ್ಚು ಸೇರಿಕೊಳ್ಳುತ್ತವೆ. ಹೀಗಾಗಿ ಆಳವಾದ ಬಾವಿ ಹಾಗೂ ಕೊಳವೆಬಾವಿ ನೀರು ಬಳಸುವಾಗ ಎಚ್ಚರವಿರಲಿ. ಹೆಚ್ಚು ಪ್ಲೋರೈಡ್ ಅಂಶ ಇರುವ ಕಡೆಗಳಲ್ಲಿ ಜನರು ಕರಿ ಉಪ್ಪು, ಅಡಿಕೆ, ತಂಬಾಕು ತಿನ್ನುವುದು ತ್ಯಜಿಸಬೇಕು. ಫ್ಲೋರೈಡ್ ಅಂಶವಿರುವ ಟೂಥ್‌ಫೆಸ್ಟ್‌ ಬಳಸಬಾರದು’ ಎಂದು ಹೇಳಿದರು.

ಇದಕ್ಕೂ ಮುನ್ನ ವಿದ್ಯಾರ್ಥಿಗಳು, ವೈದ್ಯರು ಬಿ.ಬಿ.ರಸ್ತೆಯಲ್ಲಿ ಅಗಲಗುರ್ಕಿ ಗೇಟ್‌ನಿಂದ ಜಿಲ್ಲಾ ಆಸ್ಪತ್ರೆ ವರೆಗೆ ವಾಕಿಂಗ್ ಮ್ಯಾರಾಥಾನ್‌ ನಡೆಸಿದರು. ನಗರಸಭೆ ಆಯುಕ್ತಉಮಾಕಾಂತ್, ಜಿಲ್ಲಾ ಫ್ಲೋರೋಸಿಸ್ ಸಮಾಲೋಚಕ ವಿನೋದ್ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಹೇಶ್, ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ರಮೇಶ್, ಆರ್.ಸಿ.ಎಚ್ ಅಧಿಕಾರಿ ಡಾ.ಚನ್ನಕೇಶವರೆಡ್ಡಿ, ಮಕ್ಕಳ ತಜ್ಞ ಡಾ.ಪ್ರಕಾಶ್ ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT