ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರಾವತಿ, ವಂಡಮಾನ್‌ನಿಂದ ಗ್ರಾಮಕ್ಕೆ ನೀರು ಹರಿಸುವ ಯೋಜನೆ ಜಾರಿಗೆ ಒತ್ತಾಯ

Published 26 ಮೇ 2024, 5:53 IST
Last Updated 26 ಮೇ 2024, 5:53 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಗುಡಿಬಂಡೆ, ಬಾಗೇಪಲ್ಲಿ ಪಟ್ಟಣಕ್ಕೆ ಹಾಗೂ 128 ಗ್ರಾಮಕ್ಕೆ ನೀರು ಸರಬರಾಜು ಮಾಡಲು ಉದ್ದೇಶಿಸಿದ್ದ ಪರಗೋಡು ಚಿತ್ರಾವತಿ ಜಲಾಶಯದ ಯೋಜನೆ ಹಾಗೂ ಬಿಳ್ಳೂರಿನ ವಂಡಮಾನ್ ಜಲಾಶಯದಿಂದ 98 ಗ್ರಾಮಕ್ಕೆ ನೀರು ಸರಬರಾಜು ಮಾಡಲು ಉದ್ದೇಶಿಸಿದ ಈ ಎರಡು ಯೋಜನೆ ಸ್ಥಗಿತವಾಗಿದೆ.

ನೀರು ಸರಬರಾಜು ಮಾಡುವ ಯೋಜನೆಗೆ ಸರ್ಕಾರ ಅನುದಾನ ನೀಡಬೇಕು. ಜನರ ಕುಡಿಯುವ ನೀರಿಗೆ ಹಾಗೂ ಕೃಷಿಗೆ ಬಳಕೆಗೆ ಮಾಡಲು ಕಾರ್ಯಯೋಜನೆ ರೂಪಿಸುವಂತೆ ಜನರ ಒತ್ತಾಯಿಸಿದ್ದಾರೆ.

ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳಲ್ಲಿ ನೀರಿನಲ್ಲಿ ಪ್ಲೋರೈಡ್ ಹೆಚ್ಚಾಗಿದೆ. ರೋಗದಿಂದ ಮುಕ್ತಗೊಳಿಸಲು ಪರಗೋಡು ಬಳಿ ಚಿತ್ರಾವತಿಗೆ ಜಲಾಶಯ ಹಾಗೂ ಬಿಳ್ಳೂರಿನ ಬಳಿ ವಂಡಮಾನ್ ಜಲಾಶಯ ನಿರ್ಮಿಸಲು ಹೋರಾಟ ಮಾಡಲಾಗಿತ್ತು. ಚಿತ್ರಾವತಿ ಬ್ಯಾರೇಜು ನಿರ್ಮಾಣ ಮಾಡಲು ಸತತವಾಗಿ 66 ದಿನ ಜನರು ಅನಿರ್ದಿಷ್ಟ ಹೋರಾಟ ನಡೆಸಿದ್ದರು.

ಇದುವರೆಗೂ ಚಿತ್ರಾವತಿ ಹಾಗೂ ವಂಡಮಾನ್ ಬ್ಯಾರೇಜುಗಳಲ್ಲಿ ಅನುದಾನ ಸಿಗದೆ ಹೂಳು ತೆಗೆದಿಲ್ಲ. ಸುತ್ತಲೂ ಕಳೆ ಹಾಗೂ ಮುಳ್ಳಿನ ಗಿಡಗಳು ಆವರಿಸಿಕೊಂಡಿದೆ. ಚಿತ್ರಾವತಿ ಜಲಾಶಯದಿಂದ ಬಾಗೇಪಲ್ಲಿ ಪಟ್ಟಣಕ್ಕೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಗುಡಿಬಂಡೆ ಪಟ್ಟಣಕ್ಕೆ, ಬಾಗೇಪಲ್ಲಿ ತಾಲ್ಲೂಕಿನ 128 ಗ್ರಾಮಗಳಿಗೆ ಹಾಗೂ ಗುಡಿಬಂಡೆ ತಾಲ್ಲೂಕಿನ 98 ಗ್ರಾಮಗಳ ಕೆರೆಗಳಿಗೆ ನೀರು ಹರಿಸುವ ಯೋಜನೆ ಸ್ಥಗಿತ ಆಗಿದೆ.

ರಾಜ್ಯ ಜಲ ಮಂಡಳಿಯಿಂದ ಓವರ್ ಹೆಡ್‌ಟ್ಯಾಂಕ್‌, ಪೈಪ್‌ಲೈನ್ ಟ್ಯಾಂಕ್‌ ನಿರ್ಮಾಣ ಮಾಡಲಾಗಿದೆ. ನೀರು ಸರಬರಾಜಿಗೆ ಪಂಪ್, ಮೋಟಾರ್, ಪೈಪ್‌ ಅಳವಡಿಸಲಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ನಿರ್ವಹಣೆ ಹಾಗೂ ನೀರು ಸರಬರಾಜು ಮಾಡಿಲ್ಲ. ಇದರಿಂದ ಕೆಲ ದುಷ್ಕರ್ಮಿಗಳು ಪಂಪ್, ಮೋಟಾರ್, ಪೈಪುಗಳನ್ನು ದೋಚಿದ್ದಾರೆ. ಪರಿಕರಗಳು ತುಕ್ಕು ಹಿಡಿಯುತ್ತಿವೆ.

ಮಳೆಯಾಧಾರಿತ ಕೃಷಿ, ತರಕಾರಿಗಳನ್ನು ಹೆಚ್ಚಾಗಿ ರೈತರು ಬೆಳೆಯುತ್ತಾರೆ. ಅಂತರ್ಜಲ ಮಟ್ಟ ಕುಸಿತ ಆಗಿ, ಕೆರೆ, ಕುಂಟೆ, ಕಾಲುವೆಗಳು, ತೆರೆದ ಬಾವಿಗಳು, ಕೊಳವೆಬಾವಿಗಳು ಬತ್ತಿಹೋಗಿದೆ. ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ನನೆಗುದಿಗೆ ಬಿದ್ದಿರುವುದರಿಂದ, ಬಾಗೇಪಲ್ಲಿ, ಗುಡಿಬಂಡೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಬರ ಉಂಟಾಗಿದೆ.

ನೀರು ಸರಬರಾಜು ಮಾಡಲು ಪರಗೋಡು ಬಳಿ ಚಿತ್ರಾವತಿ, ಬಿಳ್ಳೂರಿನ ಬಳಿ ವಂಡಮಾನ್ ಬ್ಯಾರೇಜ್‌ ನಿರ್ಮಿಸಲಾಗಿದೆ. ಅಂದಿನ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದರು. ನಂತರ ಸರ್ಕಾರ, ಜನಪ್ರತಿನಿಧಿಗಳು ಅಭಿವೃದ್ಧಿಪಡಿಸಿಲ್ಲ ಎಂದು ವೈದ್ಯ ಡಾ.ಅನಿಲ್ ಕುಮಾರ್ ದೂರಿದರು.

ಬಿಳ್ಳೂರಿನ ಕೂಗಳತೆಯಲ್ಲಿ ಆಂಧ್ರಪ್ರದೇಶದ ಸರ್ಕಾರ ಯೋಜನೆ ಮಾಡಿ ಗ್ರಾಮಗಳ ಜನರಿಗೆ ನೀರು ಸರಬರಾಜು ಮಾಡಿದೆ. ಆ ಭಾಗದ ಹೊಲ ಗದ್ದೆಗಳಿಗೆ ನೀರು ಸರಬರಾಜು ಮಾಡಿದ್ದಾರೆ. ಆದರೆ ನಮ್ಮ ರಾಜ್ಯ ಸರ್ಕಾರ ಬಿಳ್ಳೂರಿನ ವಂಡಮಾನ್ ಬ್ಯಾರೇಜಿನಿಂದ ನಾರೇಮದ್ದೇಪಲ್ಲಿ, ಬಿಳ್ಳೂರು, ಸೋಮನಾಥಪುರ, ಜಾಕವೇಲು ಪಂಚಾಯಿತಿಗಳ ಗ್ರಾಮಗಳಿಗೆ ನೀರು ಹರಿಸುವ ಯೋಜನೆ ಸ್ಥಗಿತ ಮಾಡಿದ್ದಾರೆ. ಕೂಡಲೇ ವಂಡಮಾನ್, ಚಿತ್ರಾವತಿಗಳಿಂದ ಗ್ರಾಮಗಳಿಗೆ ಪೈಪ್‌ಪೈನ್ ಮೂಲಕ ನೀರು ಹರಿಸಬೇಕು ಎಂದು ಚಿಂತಕ ಎಂ.ಎಸ್.ನರಸಿಂಹಾರೆಡ್ಡಿ ಒತ್ತಾಯಿಸಿದರು.

ನೀರು ಹರಿಸುವ ಯೋಜನೆಗೆ ಸರ್ಕಾರ ಕೂಡಲೇ ಅನುದಾನ ನೀಡಬೇಕು. ಇಲ್ಲವಾದರೆ ತಾಲ್ಲೂಕು ಕಚೇರಿ ಮುಂದೆ ಅನಿರ್ದಿಷ್ಟ ಕಾಲ ಪ್ರತಿಭಟನೆ ಮಾಡಲಾಗುವುದು ಎಂದು ಹೋರಾಟಗಾರ ಚನ್ನರಾಯಪ್ಪ ಹೇಳಿದರು.

ಮಳೆಯಿಂದ ಮಾತ್ರ ಕೃಷಿ, ಕುಡಿಯುವ ನೀರು ಸಿಗುತ್ತದೆ. ಚಿತ್ರಾವತಿ, ವಂಡಮಾನ್ ಬ್ಯಾರೇಜಿನಿಂದ ನೀರು ಹರಿಸುವ ಯೋಜನೆಗಳಿಗೆ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ನೀರಾವರಿ ವೇದಿಕೆ ರಾಜ್ಯಾಧ್ಯಕ್ಷ ಡಾ.ಮಧುಸೀತಪ್ಪ ತಿಳಿಸಿದರು.

ಬಿಳ್ಳೂರಿನ ಬಳಿ ಇರುವ ವಂಡಮಾನ್ ಬ್ಯಾರೇಜಿನ ಬಳಿ ನಿರ್ಮಿಸಿರುವ ನೀರಿನ ಪಂಪ್‌ಹೌಸ್ ಮುಚ್ಚಿರುವುದು
ಬಿಳ್ಳೂರಿನ ಬಳಿ ಇರುವ ವಂಡಮಾನ್ ಬ್ಯಾರೇಜಿನ ಬಳಿ ನಿರ್ಮಿಸಿರುವ ನೀರಿನ ಪಂಪ್‌ಹೌಸ್ ಮುಚ್ಚಿರುವುದು

ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಸಂಬಂಧಪಟ್ಟ ಅಧಿಕಾರಿಗಳ ಜತೆ ಭೇಟಿನೀಡಿ ಪರಿಶೀಲನೆ ಮಾಡಲಾಗುವುದು.

-ಎಸ್.ಎನ್.ಸುಬ್ಬಾರೆಡ್ಡಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT