ಶುಕ್ರವಾರ, ಡಿಸೆಂಬರ್ 4, 2020
24 °C

ಚಿಕ್ಕಬಳ್ಳಾಪುರಈಜಲು ಹೋದ ನಾಲ್ವರು ಬಾಲಕರು ಸಾವು

ಸಿ.ಎಸ್. ವೆಂಕಟೇಶ್ Updated:

ಅಕ್ಷರ ಗಾತ್ರ : | |

Prajavani

ಚೇಳೂರು (ಚಿಕ್ಕಬಳ್ಳಾಪುರ):ಆಂಧ್ರ ಗಡಿ ಭಾಗದಲ್ಲಿರುವ ಊದವಾರಪಲ್ಲಿ ಗ್ರಾಮದಲ್ಲಿ ಬುಧವಾರ ಕುಂಟೆಯಲ್ಲಿ (ಸಣ್ಣ ಕೆರೆ) ಈಜಲು ಹೋಗಿದ್ದ ನಾಲ್ವರು ಬಾಲಕರು ಮೃತಪಟ್ಟಿದ್ದಾರೆ.

ಮೃತಪಟ್ಟ ಬಾಲಕರನ್ನು ವರುಣ್‌, ಸಂತೋಷ್‌, ಬದ್ರಿನಾಥ್‌ ಮತ್ತು ಮಹೇಶ್‌ ಎಂದು ಗುರುತಿಸಲಾಗಿದ್ದು, ಎಲ್ಲರೂ 12 ವರ್ಷ ವಯಸ್ಸಿನವರು. ಈ ಪೈಕಿ ವರುಣ್‌ ಮತ್ತು ಸಂತೋಷ್‌ ಇಬ್ಬರೂ ಸಹೋದರರು.

ಬುರುಡಗುಂಟೆ ಗ್ರಾಮ ಪಂಚಾಯಿತಿಯ ಸಾಲಮಾಕಲಪಲ್ಲಿ ಗ್ರಾಮದ ವರುಣ್ ಮತ್ತು ಸಂತೋಷ ಊದವಾರಪಲ್ಲಿ ಗ್ರಾಮದ ತಮ್ಮ ಅತ್ತೆ ಅನಸೂಯಮ್ಮ ಅವರ ಮನೆಗೆ ಬಂದಿದ್ದರು. ಆಂಧ್ರ ಪ್ರದೇಶದ ಪಿ.ಟಿ.ಎಂ. ಮಂಡಲ್ ವಡ್ಡಿವಾಂಡ್ಲಪಲ್ಲಿ ಗ್ರಾಮದ ಬದ್ರಿನಾಥ್ (13) ಕೂಡ ಸಜ್ಜಲವಾರಪಲ್ಲಿ ಗ್ರಾಮದ ಸಂಬಂಧಿ ಮನೆಗೆ ಬಂದಿದ್ದ. 

ಅನಸೂಯಮ್ಮ ಅವರ ಮಗ ಮಹೇಶ ಈ ಮೂವರು ಬಾಲಕರನ್ನು ಜತೆಯಲ್ಲಿ ಕರೆದುಕೊಂಡು ಮನೆಗಳಲ್ಲಿದ್ದ ಜಾನುವಾರುಗಳನ್ನು ಮೇಯಿಸಲು ಹೋಗಿದ್ದ.  ಸಜ್ಜಲವಾರಪಲ್ಲಿ ಗ್ರಾಮದ ಬಳಿಯಿರುವ ಕೊತ್ತಕುಂಟೆಯಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದ ನೀರು ಸಂಗ್ರಹವಾಗಿತ್ತು. ಕುಂಟೆ ದಡದಲ್ಲಿ ಜಾನುವಾರು ಕಟ್ಟಿಹಾಕಿ, ನಾಲ್ವರೂ ಈಜಾಡಲು ನೀರಿಗೆ ಇಳಿದಿದ್ದರು.

ಮಧ್ಯಾಹ್ನ ಜಾನುವಾರುಗಳಿಗೆ ನೀರು ಕುಡಿಸಲು ಕುಂಟೆಗೆ ಬಂದ ಗ್ರಾಮಸ್ಥರಿಗೆ ನೀರಿನಲ್ಲಿ ತೇಲುತ್ತಿದ್ದ ಬಾಲಕನ ಶವ ಕಂಡಿದೆ. ಆತ ಗ್ರಾಮದವರಿಗೆ ಸುದ್ದಿ ಮುಟ್ಟಿಸಿದ. ಗ್ರಾಮಸ್ಥರು ಬಾಲಕನ ಶವವನ್ನು ಹೊರತೆಗೆದರು. ಅಗ್ನಿಶಾಮಕ ದಳದ ಸಿಬ್ಬಂದಿ ಸಂಜೆಯ ವೇಳೆಗೆ ಉಳಿದ ಮೂವರು ಬಾಲಕರ ಶವಗಳನ್ನು ಹೊರ ತೆಗೆದಿದ್ದಾರೆ. 

‘ಕುಂಟೆಯಲ್ಲಿ ಹೂಳು ಹೆಚ್ಚಾಗಿದ್ದರಿಂದ ಬಾಲಕರು ಅದರಲ್ಲಿ ಸಿಲುಕಿ ಮೃತಪಟ್ಟಿರಬಹುದು’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಸರ್ಕಲ್ ಇನ್‌ಸ್ಪೆಕ್ಟರ್‌ ಕೆ.ಎಂ.ನಯಾಜ್ ಬೇಗ್ , ರೆವಿನ್ಯೂ ಅಧಿಕಾರಿ ಎನ್. ರಮಾನಂದ್ ಸ್ಥಳದಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.