ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನಿಗೂ ಕೊರೊನಾ ವಿಘ್ನ

ಮಂಕಾದ ಗೌರಿ– ಗಣೇಶ ಮೂರ್ತಿ ವ್ಯಾಪಾರ: ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ
Last Updated 1 ಆಗಸ್ಟ್ 2020, 6:43 IST
ಅಕ್ಷರ ಗಾತ್ರ

ಚಿಂತಾಮಣಿ: ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಆದರೆ ಕೊರೊನಾದಿಂದಾಗಿ ಈ ಬಾರಿ ಗಣಪತಿಗಳಿಗೆ ಬೇಡಿಕೆಯೇ ಇಲ್ಲವಾಗಿದೆ. 7–8 ತಿಂಗಳುಗಳಿಂದ ಗಣಪತಿ ತಯಾರಿಸಿರುವ ಕಲಾವಿದರು ಬೇಡಿಕೆ ಇಲ್ಲದೆ ಚಿಂತಾಕ್ರಾಂತರಾಗಿದ್ದಾರೆ. ಗಣಪತಿ ತಯಾರಿಕೆಯನ್ನೇ ವೃತ್ತಿಯಾಗಿಸಿಕೊಂಡಿದ್ದ ಕಲಾವಿದರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.

ಪ್ರತಿವರ್ಷ ಪರಿಸರ ಸ್ನೇಹಿ ಗೌರಿ, ಗಣೇಶ ಮೂರ್ತಿ ಸೇರಿದಂತೆ ತರಹೇವಾರಿ ಗೌರಿ, ಗಣೇಶ ಮೂರ್ತಿಗಳು ನಗರದ ಅಂಗಡಿ, ಪಾದಚಾರಿ ಮಾರ್ಗಗಳಲ್ಲಿ ರಾರಾಜಿಸುತ್ತಿದ್ದವು. ಈ ಬಾರಿ ಇನ್ನೂ ಗಣೇಶ ಮೂರ್ತಿಗಳ ಸುಳಿವೇ ಇಲ್ಲ. ಗಣಪತಿ ಮಾರಾಟಕ್ಕೆ ಅನುಮತಿ ಇದೆಯೊ, ಇಲ್ಲವೊ ಎಂಬುದು ಗೊತ್ತಿಲ್ಲದೆ ಕಲಾವಿದರು ಕಂಗಾಲಾಗಿದ್ದಾರೆ. ಸಾಲ ಮಾಡಿ ಈಗಾಗಲೇ ಬಂಡವಾಳ ಹಾಕಿರುವ ಕಲಾವಿದರು ಆತಂಕಕ್ಕೆ ಒಳಗಾಗಿದ್ದಾರೆ.

ನಗರದ ಪ್ರಭಾಕರ್ ಬಡಾವಣೆಯ ರಸ್ತೆ ಸಾರಿಗೆ ಸಂಸ್ಥೆಯ ಹಿಂಭಾಗದಲ್ಲಿ ದೊಡ್ಡ ಶೆಡ್ ಹಾಕಿಕೊಂಡು ವೆಂಕಟರವಣಪ್ಪ ಕುಟುಂಬ ಗಣಪತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಗಣಪನ ತಯಾರಿಕೆಗೆ ಅಗತ್ಯವಾದ ಪೇಪರ್ ಮತ್ತಿತರ ಕಚ್ಚಾವಸ್ತುಗಳನ್ನು ತಮಿಳುನಾಡಿನಿಂದ ತರಿಸಿಕೊಳ್ಳುತ್ತಾರೆ. ತಾತನ ಕಾಲದಿಂದಲೂ ಇದೇ ವೃತ್ತಿ ನಂಬಿ ಬದುಕುತ್ತಿದ್ದಾರೆ.

‘ಪ್ರತಿ ವರ್ಷ ಗೌರಿ– ಗಣೇಶ ಹಬ್ಬ ಮುಗಿದ 2-3 ತಿಂಗಳ ನಂತರ ನಾವು ಕೆಲಸ ಪ್ರಾರಂಭಿಸುತ್ತೇವೆ. ಜನವರಿಯಿಂದ ಕೆಲಸ ಚುರುಕುಗೊಳ್ಳುತ್ತದೆ. ಕೊರೊನಾ ಬರುವುದಕ್ಕೆ ಮೊದಲೇ ನಾವು ಸಾಕಷ್ಟು ಗಣಪತಿ ತಯಾರಿಸಿದ್ದೆವು. ₹ 5ರಿಂದ ₹ 6 ಲಕ್ಷ ಸಾಲ ಮಾಡಿ ಬಂಡವಾಳ ಹಾಕಿದ್ದೇವೆ. ಪ್ರತಿವರ್ಷ ಈ ವೇಳೆಗೆ ಬಹುತೇಕ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದರು. ಈ ವರ್ಷ ಇದುವರೆಗೆ ಒಂದು ಮುಂಗಡ ಬುಕ್ಕಿಂಗ್‌ ಆಗಿಲ್ಲ’ ಎಂದು ಶ್ರೀನಿವಾಸ್ ಅಳಲು ತೋಡಿಕೊಂಡರು.

‘ಪಿಒಪಿ ಮತ್ತು ಮಣ್ಣಿನ ಗಣಪತಿ ತಯಾರಿಸುವುದಿಲ್ಲ. ಕಚ್ಚಾ ಕಡಲೆ ಹಿಟ್ಟು, ಗೆಣಸಿನ ಪುಡಿ, ಬಿಳಿ ರಂಗೋಲಿ ಪುಡಿ ಮಿಶ್ರಣ ಮಾಡಿ ಪೇಪರ್‌ ಗಣಪತಿ ತಯಾರಿಸುತ್ತೇವೆ ಯಾವುದೇ ರೀತಿಯ ರಾಸಾಯನಿಕ ಬಳಸುವುದಿಲ್ಲ. ತಾತನ ಕಾಲದಿಂದಲೂ ಗಣಪತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದೇವೆ. ಬೇರೆ ವೃತ್ತಿ ಗೊತ್ತಿಲ್ಲ. ಈ ಬಾರಿ ಏನು ಮಾಡಬೇಕು ಎಂದು ದಿಕ್ಕೇ ತೋಚುತ್ತಿಲ್ಲ’ ಎಂದು ವ್ಯಾಪಾರಿ ಗಂಗರಾಜ್ ಅಲವತ್ತುಕೊಂಡರು.

ಪರಿಸರಸ್ನೇಹಿ ಗಣಪತಿ ತಯಾರಿಸುತ್ತೇವೆ. 3 ಅಡಿಯಿಂದ 8 ಅಡಿ ಎತ್ತರದವರೆಗೆ ಗಣಪನ ಮೂರ್ತಿ ನಿರ್ಮಿಸುತ್ತೇವೆ. ₹ 5 ಸಾವಿರದಿಂದ ₹ 15 ಸಾವಿರದವರೆಗೆ ಮೂರ್ತಿಗೆ ತಕ್ಕಂತೆ ಬೆಲೆ ಇರುತ್ತದೆ. ಗಜಗಣಪ, ನಂದಿ ಗಣಪ, ಇಲಿ ಗಣಪ, ಸಿಂಹ, ಆಂಜನೇಯ, ನವಿಲು, ಗೌರಿ ಗಣಪ ಸೇರಿದಂತೆ ವಿಭಿನ್ನ ಪ್ರಾಣಿ, ಪಕ್ಷಿಗಳ ಮೇಲೆ ಕುಳಿತಿರುವ 350ರಿಂದ 400 ಬಗೆಯ ಗಣಪಗಳನ್ನು ಪ್ರತಿ ವರ್ಷ ತಯಾರಿಸುತ್ತಿದ್ದೆವು. ಈ ವರ್ಷ ಕೇವಲ 200 ಗಣಪತಿ ಸಿದ್ಧಪಡಿಸಿದ್ದೇವೆ. ಅವುಗಳಿಗೂ ಬೇಡಿಕೆ ಇಲ್ಲದಾಗಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT