ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಕೇಳಿದರೆ ದೂರು ನೀಡಿ

ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಎಸ್ಪಿ ಎ.ಆರ್.ಬಡಿಗೇರ ಸಲಹೆ
Last Updated 5 ಸೆಪ್ಟೆಂಬರ್ 2018, 15:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯ ಯಾವುದೇ ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿ ಮತ್ತು ನೌಕರರು ಲಂಚ ಕೇಳಿದಲ್ಲಿ ಅಥವಾ ವಿಳಂಬ ಮಾಡಿದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಯಲ್ಲಿ ಮುಕ್ತವಾಗಿ ದೂರು ನೀಡಬಹುದು’ ಎಂದು ಭ್ರಷ್ಟಾಚಾರ ನಿಗ್ರಹ ದಳದ ಕೇಂದ್ರ ವಲಯದ ಎಸ್ಪಿ ಎ.ಆರ್.ಬಡಿಗೇರ ತಿಳಿಸಿದರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ‘ನಿಯಮಗಳ ಪ್ರಕಾರ ಮಾಡಿಕೊಡಬೇಕಾದ ಕೆಲಸವನ್ನು ನಿಗದಿತ ಅವಧಿಯಲ್ಲಿ ಸಾರ್ವಜನಿಕರಿಗೆ ಮಾಡಿಕೊಡುವುದು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಕರ್ತವ್ಯ’ ಎಂದು ಹೇಳಿದರು.

‘ಯಾವುದೇ ಅಧಿಕಾರಿ ಅಥವಾ ನೌಕರರು ಸಾರ್ವಜನಿಕರಿಂದ ಹಣ ಕೇಳಿದರೆ ಮತ್ತು ಕೆಲಸ ಮಾಡಿಕೊಡದೆ ವಿಳಂಬ ಮಾಡಿದರೆ ಕೂಡಲೇ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗೆ ಸಾರ್ವಜನಿಕರು ಹಿಂಜರಿಯದೆ, ಭಯ ಪಡದೆ ದೂರು ನೀಡಬೇಕು. ದೂರುದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು. ಈ ವಿಚಾರದಲ್ಲಿ ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹದ ದಳದ ಅಧಿಕಾರಿಗಳೊಂದಿಗೆ ಸಹಕರಿಸಬೇಕು’ ಎಂದು ತಿಳಿಸಿದರು.

‘ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸುವ ಅಗತ್ಯವಿದೆ. ಲಂಚ ಕೇಳುವುದು ಮತ್ತು ಸ್ವೀಕರಿಸುವುದು ನಿಯಮಬಾಹಿರ. ಅಂತಹ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದರು.

ಸಭೆಯಲ್ಲಿ ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಸ್ಕಾಂ, ಜಿಲ್ಲಾಧಿಕಾರಿ ಕಚೇರಿ ನಗರಸಭೆ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ವಿರುದ್ಧ ದೂರುಗಳು ಕೇಳಿ ಬಂದವು. ನಗರಸಭೆ, ಪುರಸಭೆಗಳಲ್ಲಿ ಖಾತೆಗಳನ್ನು ಮಾಡಿಕೊಡದೆ ಸತಾಯಿಸಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು.

ಜಿಲ್ಲೆಯ ಹಲವು ಕಡೆಗಳಲ್ಲಿ ಜಲ್ಲಿ ಕ್ರಷರ್‌ಗಳ ಹಾವಳಿ ಹೆಚ್ಚಾಗಿದೆ. ಕೆಲವು ಅಕ್ರಮ ಕ್ರಷರ್‌ಗಳಲ್ಲಿ ಬಳಸುವ ಸ್ಫೋಟಕ ಸಾಮಗ್ರಿಗಳಿಂದ ಮಿತಿಮೀರಿದ ಶಬ್ದ ಉಂಟಾಗಿ ತೊಂದರೆಯಾಗುತ್ತಿದೆ. ಅಲ್ಲದೆ, ಮನೆಗಳು ಬಿರುಕು ಬಿಡುತ್ತಿವೆ ಹಾಗೂ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆರೋಪಿಸಿ, ಕೂಡಲೇ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಸಾರ್ವಜನಿಕರಿಂದ 17 ಅರ್ಜಿಗಳು ಸಲ್ಲಿಕೆಯಾದವು. ರೈತ ಸಂಘದ ಪದಾಧಿಕಾರಿಗಳು, ಬಾಗೇಪಲ್ಲಿ ಬಿಜೆಪಿ ಮಹಿಳಾ ಘಟಕದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಅಹವಾಲುಗಳನ್ನು ಸಲ್ಲಿಸಿದರು. ಡಿವೈಎಸ್‍ಪಿ ಪ್ರಸಾದ್, ಇನ್‌ಸ್ಪೆಕ್ಟರ್‌ ಶಿವಮರಳಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT