ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಬೆಂಬಲಕ್ಕೆ ನಿಂತ ರೈತ ಸಂಘ: ಎಸಿ ಕಚೇರಿ ಎದುರು ಪ್ರತಿಭಟನೆ

Last Updated 4 ಆಗಸ್ಟ್ 2021, 3:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಗ್ರಾಮೀಣ ರೈತ ಮಕ್ಕಳು, ಪರಿಶಿಷ್ಟ ಸಮುದಾಯದ, ಹಿಂದುಳಿದ ವರ್ಗಗಳ ಹಾಗೂ ಗುಡ್ಡಗಾಡು ಪ್ರದೇಶಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೋವಿಡ್ ಸಾಂಕ್ರಾಮಿಕ ರೋಗ ಅವಧಿಯ ವಿಶೇಷ ಪ್ರೋತ್ಸಾಹ ಅಂಕ ನೀಡಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.

ಶಿಕ್ಷಣ ಇಲಾಖೆ ಹಟಕ್ಕೆ ಬಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸಿದೆ. ಸರ್ಕಾರದ ಈ ನಿಲುವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಪರಿಶಿಷ್ಟ ಸಮುದಾಯಗಳು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ಈ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಶೂನ್ಯ ಕಲಿಕಾ ವರ್ಷವಾಗಿದೆ.

ಆನ್‌ಲೈನ್ ಶಿಕ್ಷಣ ಗ್ರಾಮೀಣ ಭಾಗದ ಶೇ 30ರಷ್ಟು ವಿದ್ಯಾರ್ಥಿಗಳಿಗೆ ತಲುಪಿಯೇ ಇಲ್ಲ. ಗ್ರಾಮ–ನಗರ ಹಾಗೂ ಶ್ರೀಮಂತ ಮತ್ತು ಬಡ ವಿದ್ಯಾರ್ಥಿಗಳ ನಡುವೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಾರಿ ಕಂದಕರವನ್ನು ಸೃಷ್ಟಿಸಿದೆ ಎಂದು ಪ್ರತಿಭಟನಕಾರರು ದೂರಿದರು.

ಪರೀಕ್ಷೆಯಿಂದ ಸೃಷ್ಟಿಯಾಗಿರುವ ಅಸಮಾನತೆಯನ್ನು ಸರಿಪಡಿಸಲು ಸರ್ಕಾರ ತಕ್ಷಣವೇ ಕ್ರಮವಹಿಸಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಎಲ್ಲೆಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳು ಕಡಿಮೆ ಬಂದಿದೆಯೋ ಅಲ್ಲಿ 8 ಮತ್ತು 9ನೇ ತರಗತಿಗಳ ಅವರ ಸಾಧನೆ ಆಧರಿಸಿ ವಿಶೇಷ ಅಂಕಗಳನ್ನು ನೀಡಬೇಕು. ಈ ವಿಶೇಷ ಪ್ರೋತ್ಸಾಹ ಅಂಕಗಳನ್ನು ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ವೇಳೆಯೂ ಜಾರಿಯಾಗುವ ರೀತಿಯಲ್ಲಿ ಸರ್ಕಾರ ಆಲೋಚಿಸಬೇಕು.

ಕಲಿಕೆ ಸಾಧ್ಯವಾಗದೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯಗಳನ್ನು ಸರಿಪಡಿಸಬೇಕು. ಅದಕ್ಕಾಗಿ ಸಾಂಕ್ರಾಮಿಕ ರೋಗದ ಕಾಲದ ವಿಶೇಷ ಪ್ರೋತ್ಸಾಹ ಅಂಕಗಳನ್ನು ನೀಡಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ, ಪರಿಶಿಷ್ಟ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದಲ್ಲಿ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ‌ಆದ್ಯತಾ ಪ್ರವೇಶ ವ್ಯವಸ್ಥೆ ಜಾರಿಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಲಕ್ಷ್ಮಿನಾರಾಯಣರೆಡ್ಡಿ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಎಸ್‌.ಎಂ.ರವಿಪ್ರಕಾಶ್, ಟಿ.ಕೆ.ಅರುಣ್ ಕುಮಾರ್, ಜಿ.ಎಂ.ವೆಂಕಟೇಶ್, ಎಸ್‌.ವಿ.ಶ್ರೀನಿವಾಸ್, ಎನ್.ಗಾಯತ್ರಿ, ಎಂ.ಅರುಣಾ, ಶ್ರೀರಾಮ, ಎನ್.ವಾಣಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT