ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ | ಸಿದ್ಧವಾಯಿತು ಮೊದಲ ಸರ್ಕಾರಿ ಗೋಶಾಲೆ

Published 6 ಜನವರಿ 2024, 5:59 IST
Last Updated 6 ಜನವರಿ 2024, 5:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಶಂಕುಸ್ಥಾಪನೆಗೊಂಡ ಮೊದಲ ಸರ್ಕಾರಿ ಗೋಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ಹೋಬಳಿ ನಾಗರೆಡ್ಡಿಹಳ್ಳಿ ಬಳಿಯ ಗೋಶಾಲೆ ಈಗ ಕಾರ್ಯಾರಂಭಕ್ಕೆ ಸಜ್ಜಾಗಿದೆ. 

ಅಂತೂ ಇಂತೂ ಎರಡು ವರ್ಷಗಳ ತರುವಾಯ ಕಾಮಗಾರಿ ಪೂರ್ಣವಾಗಿದೆ. ಗೋಶಾಲೆಯನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದಿ) ನಿರ್ವಹಣೆ ಮಾಡಲು ಪಶುಪಾಲನಾ ಇಲಾಖೆ ಮುಂದಾಗಿದೆ. 

ಬಿಜೆಪಿ ಸರ್ಕಾರವು ಗೋಹತ್ಯೆ ನಿಷೇಧದ ಮಸೂದೆ ಅಂಗೀಕರಿಸುವ ಸಂದರ್ಭದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತಲಾ ಒಂದು ಗೋಶಾಲೆಯನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿತ್ತು. ಆ ಪ್ರಕಾರ ನಾಗರೆಡ್ಡಿಹಳ್ಳಿ ಬಳಿ 2021ರ ಆಗಸ್ಟ್ 28ರಂದು ಗೋಶಾಲೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.  ರಾಜ್ಯದಲ್ಲೇ ಶಂಕುಸ್ಥಾಪನೆಗೊಂಡ ಮೊದಲ ಸರ್ಕಾರಿ ಗೋಶಾಲೆ ಇದು.

ಬೇರೆ ಬೇರೆ ಜಿಲ್ಲೆಗಳಲ್ಲಿ ಗೋಶಾಲೆ ಆರಂಭವಾದರೂ ಜಿಲ್ಲೆಯಲ್ಲಿ ಗೋಶಾಲೆ ಆರಂಭಕ್ಕೆ ಕಾಲ ಕೂಡಿರಲಿಲ್ಲ. ಗೋಶಾಲೆ ನಿರ್ಮಾಣವಾಗಿರುವ ಸ್ಥಳವು ಜೌಗು ಪ್ರದೇಶವಾಗಿದೆ. ಮಳೆ ಮತ್ತು ಜೌಗು ಕಾರಣ ಕಾಮಗಾರಿಗಳಿಗೆ ತೊಂದರೆ ಆಗಿತ್ತು. ಸ್ವಲ್ಪ ಮಳೆ ಬಂದರೂ ಕಾಮಗಾರಿ ಸ್ಥಗಿತವಾಗುತ್ತಿದೆ. ಜೋರಾಗಿ ಮಳೆ ಸುರಿದರೆ ವಾರಾನುಗಟ್ಟಲೆ ಕಾಮಗಾರಿಯನ್ನೇ ಕೈಗೊಳ್ಳಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ಇತ್ತು. ಚೌಗು ಪ್ರದೇಶವಾದ ಕಾರಣ ಹೆಚ್ಚುವರಿಯಾಗಿ ಹಣ ನೀಡುವಂತೆ ಪಶುಸಂಗೋಪನಾ ಇಲಾಖೆ ಸರ್ಕಾರವನ್ನು ಕೋರಿತ್ತು. ಹೀಗೆ ನಾನಾ ಅಡೆತಡೆಗಳ ನಡುವೆಯೇ ಗೋಶಾಲೆ ಕಾಮಗಾರಿ ಪೂರ್ಣವಾಗಿದೆ. ಉದ್ಘಾಟನೆಗೆ ಸಜ್ಜಾಗಿದೆ. 

ನಾಗರೆಡ್ಡಿಹಳ್ಳಿಯ ಸರ್ವೆ ನಂಬರ್ 41ರಲ್ಲಿ 10 ಎಕರೆಯಲ್ಲಿ ಗೋಶಾಲೆ ತಲೆ ಎತ್ತಿದೆ. ಗೋವುಗಳ ಶೆಡ್, ಸುತ್ತಲೂ ಕಾಂಪೌಂಡ್, ಕಾವಲುಗಾರರಿಗೆ ಮನೆ, ಮೇವು ಸಂಗ್ರಹ, ಚಿಕಿತ್ಸೆ ಮತ್ತು ಪಶು ಆಹಾರ ದಾಸ್ತಾನಿಗೆ ಕೊಠಡಿಗಳು ಹೀಗೆ ಸುಸಜ್ಜಿತವಾಗಿ ನಿರ್ಮಾಣವಾಗಿದೆ.

ಜಿಲ್ಲೆಯ ಮೊದಲ ಸರ್ಕಾರಿ ಗೋಶಾಲೆಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ (PPP Model) ನಲ್ಲಿ ನಿರ್ವಹಣೆ ಮಾಡಲುಪಶುಪಾಲನಾ ಇಲಾಖೆ ಅನುಮತಿ ಸಹ ನೀಡಿದೆ. ಗೋಶಾಲೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವ ಹಾಗೂ ಆಸಕ್ತ ಸಾರ್ವಜನಿಕರು, ಸಂಘ ಸಂಸ್ಥೆಗಳು ನಿರ್ವಹಣೆಯ ಕಾರ್ಯಭಾರ ವಹಿಸಿಕೊಳ್ಳಬಹುದು. ಗೋಶಾಲೆಯಲ್ಲಿ ಸಂಬಂಧಿತ ಚಟುಚಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಸರ್ಕಾರದಿಂದ ಆಗಿಂದಾಗ್ಗೆ ಹೊರಡಿಸುವ ಷರತ್ತುಗಳನ್ನು ಹಾಗೂ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. 

ಗೋಶಾಲೆಯಲ್ಲಿರುವ ಜಾನುವಾರುಗಳಿಗೆ ಕನಿಷ್ಠ ಮೂರು ತಿಂಗಳಿಗೆ ಅಗತ್ಯವಿರುವ ಮೇವನ್ನು ಮುಂಗಡ ದಾಸ್ತಾನು ಮಾಡಿಕೊಳ್ಳಬೇಕು. ಗೋಶಾಲೆ ನಿರ್ವಹಿಸಲು ಅಗತ್ಯ ಸಿಬ್ಬಂದಿ ಇರಬೇಕು. ಇಲಾಖೆಯ ಅಧಿಕಾರಿಗಳು, ಇಲಾಖೆಯಿಂದ ಅಧಿಕೃತ ವ್ಯಕ್ತಿ ಯಾವುದೇ ಸಮಯದಲ್ಲಿ ಭೇಟಿ ನೀಡಿ ಗೋಶಾಲೆಯ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಬಹುದು ಎಂದು ಷರತ್ತಿಗೆ ಸರ್ಕಾರ ತಿಳಿಸಿದೆ. 

ಗೋಶಾಲೆ ಜಾಗವನ್ನು ಒತ್ತುವರಿ ಆಗದಂತೆ ಕ್ರಮವಹಿಸಬೇಕು. ಗೋಶಾಲೆಯ ಜಮೀನು, ಕಟ್ಟಡ, ಉಪಕರಣ, ಜಾನುವಾರಗಳನ್ನು ಅಡಮಾನ ಇಡಬಾರದು. ಇವುಗಳ ಮೇಲೆ ಯಾವುದೇ ರೀತಿಯ ಸಾಲ ಪಡೆಯುವಂತಿಲ್ಲ. ಗುತ್ತಿಗೆ ಅವಧಿ ಮುಗಿದ ನಂತರ ಗೋಶಾಲೆಯ ಸ್ಥಳ ಕಟ್ಟಡ, ಉಪಕರಣ,  ಜಾನುವಾರಗಳನ್ನು ಜಿಲ್ಲಾ ಪ್ರಾಣಿದಯಾ ಸಂಘ (ಎಸ್‌ಪಿಸಿಎ) ಸಂಸ್ಥೆಗೆ ಹಿಂದಿರುಗಿಸಬೇಕು. 

ಗೋಶಾಲೆಯಲ್ಲಿರುವ ರಾಸುಗಳ ದಾಸ್ತಾನು ವಹಿ, ಜನನ ಮರಣ ವಹಿ, ಮೇವು ದಾಸ್ತಾನು ಪುಸ್ತಕ ಹಾಗೂ ಇತರೆ ಎಲ್ಲಾ ದಾಖಲಾತಿ ವಹಿಗಳನ್ನು ನಿರ್ವಹಿಸಬೇಕು. ಸರ್ಕಾರಿ ಗೋಶಾಲೆಯ ಜಮೀನಿನಲ್ಲಿ ಯಾವುದೇ ಕಟ್ಟಡ ಹಾಗೂ ನಿರ್ಮಾಣ ಕಾರ್ಯ ನಿಷೇಧಿಸಿದೆ. ಯಾವುದೇ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಿರ್ದೇಶನ ಪಾಲಿಸಬೇಕು. ನಿಯಮ ಹಾಗೂ ಒಪ್ಪಂದದ ಪ್ರಕಾರ ನಿರ್ವಹಣೆ ಮಾಡದಿದ್ದ ಪಕ್ಷದಲ್ಲಿ ಅಥವಾ ಗೋಶಾಲೆಯ ನಿಯಮಾವಳಿಯ ವಿರುದ್ಧ ನಡೆದುಕೊಂಡ ಪಕ್ಷದಲ್ಲಿ ಜಿಲ್ಲಾ ಪ್ರಾಣಿದಯಾ ಸಂಘದ ತೀರ್ಮಾನದಂತೆ ಗೋಶಾಲೆಯನ್ನು ಮರಳಿ ಇಲಾಖೆಯ ವಶಕ್ಕೆ ಪಡೆಯಲಾಗುವುದು.

ಜಿಲ್ಲಾ ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಚಿಕ್ಕಬಳ್ಳಾಪುರ ಕಚೇರಿಗೆ ಜ.15ರ ಒಳಗೆ ಆಸಕ್ತ ಸಂಘ ಸಂಸ್ಥೆಗಳು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಲಾಗಿದೆ.

‘ಸರ್ಕಾರದಿಂದ ಶೇ 25ರಷ್ಟು ಹಣ’

ಸಂಘ ಸಂಸ್ಥೆಗಳು ಅಥವಾ ಈಗಾಗಲೇ ಗೋಶಾಲೆ ನಿರ್ವಹಣೆಯ ಅನುಭವವುಳ್ಳ ಸಂಸ್ಥೆಗಳು ಈ ಸರ್ಕಾರಿ ಗೋಶಾಲೆ ನಿರ್ವಹಣೆಗೆ ಅರ್ಜಿ ಸಲ್ಲಿಸಬಹುದು. ಒಂದು ರಾಸಿಗೆ ದಿನಕ್ಕೆ ₹ 70 ವೆಚ್ಚ ಮಾಡಬೇಕು ಎಂದಿದೆ. ಅದರಲ್ಲಿ ಶೇ 25ರಷ್ಟು ಹಣವನ್ನು ಸರ್ಕಾರ ಭರಿಸಲಿದೆ. ಅಂದರೆ ₹ 17 ಭರಿಸಲಾಗುತ್ತದೆ ಎಂದು ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ರವಿ ‘ಪ್ರಜಾವಾಣಿ’ಗೆ ತಿಳಿಸಿದರು. ಬಿಡಾಡಿ ದನಗಳು ನ್ಯಾಯಾಲಯದಿಂದ ನಿರ್ದೇಶಿಸಲ್ಪಟ್ಟ ರಾಸುಗಳನ್ನು ಇಲ್ಲಿ ಸಾಕಲಾಗುತ್ತದೆ. ಪುಣ್ಯಕೋಟಿ ಯೋಜನೆಯಡಿ ಇಲ್ಲಿನ ರಾಸುಗಳನ್ನು ಸಾರ್ವಜನಿಕರು ದತ್ತು ಸಹ ಪಡೆಯಬಹುದು. ಇದಕ್ಕೆ ವಾರ್ಷಿಕ ₹ 11 ಸಾವಿರ ಪಾವತಿಸಬೇಕು ಎಂದು ತಿಳಿಸಿದರು. 

ಮಾಹಿತಿಗೆ ಸಂಪರ್ಕ

ಮುಖ್ಯ ಪಶು ವೈದ್ಯಾಧಿಕಾರಿ ಬಾಗೇಪಲ್ಲಿ 08150-282223

ಚಿಕ್ಕಬಳ್ಳಾಪುರ- 08151-272375

ಚಿಂತಾಮಣಿ 08154-252106

ಗೌರಿಬಿದನೂರು 08155-285301 ಗುಡಿಬಂಡೆ 08156-261031

ಶಿಡ್ಲಘಟ್ಟ 08158-256225

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT