ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಿ ಯೋಜನೆ; ಸ್ತಬ್ಧಚಿತ್ರ ರೂಪಿಸಿ’

ಚಿಕ್ಕಬಳ್ಳಾಪುರ ಉತ್ಸವ; ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್ ಸೂಚನೆ
Last Updated 1 ಜನವರಿ 2023, 6:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸರ್ಕಾರಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಈ ಪ್ರಯುಕ್ತ ಇಲಾಖಾವಾರು ಸರ್ಕಾರಿ ಯೋಜನೆಗಳ ಕುರಿತು ಸ್ತಬ್ಧ‌ಚಿತ್ರಗಳನ್ನು ರೂಪಿಸಿ ಮೆರವಣಿಗೆ ಹಾಗೂ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಸೂಚಿಸಿದರು.

‘ಚಿಕ್ಕಬಳ್ಳಾಪುರ ಉತ್ಸವ’ದ ಅಂಗವಾಗಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜ.7 ರಿಂದ ಜ.14 ರವರೆಗೆ ಉತ್ಸವ ನಡೆಯಲಿದೆ. ಈ ವೇಳೆ ಜನರಿಗೆ ಇಲಾಖಾವಾರು ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ದೊರೆಯಬೇಕು. ಪರಿಸರ ಸ್ನೇಹಿಯಾಗಿ, ಆಕರ್ಷಕವಾಗಿ ಹಾಗೂ ಉತ್ತಮ ರೀತಿಯಲ್ಲಿ ಸ್ತಬ್ಧಚಿತ್ರಗಳನ್ನು ತಯಾರಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಐತಿಹಾಸಿಕ ಸ್ಥಳಗಳ ಸ್ತಬ್ದಚಿತ್ರಗಳ ಮಾದರಿಗಳನ್ನು ತಯಾರಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎಸ್.ಮಹೇಶ್ ಕುಮಾರ್ ‘ನಮ್ಮ ಕ್ಲಿನಿಕ್’ ಯೋಜನೆ ಕುರಿತ ಮಾದರಿ ತಯಾರಿಸಲಾಗುವುದು. ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಚಿಕ್ಕಬಳ್ಳಾಪುರ ಉತ್ಸವದಲ್ಲಿ ಜ.2ರಂದು ಹೊನಲು ಬೆಳಕಿನ ಪಂದ್ಯಾವಳಿಗಳು ನಡೆಯಲಿವೆ. ವಾಲಿಬಾಲ್, ಕಬಡ್ಡಿ, ಥ್ರೋಬಾಲ್, ಹಗ್ಗ ಜಗ್ಗಾಟ ಅಂಕಣಗಳನ್ನು ನಗರದ ಜೂನಿಯರ್ ಕಾಲೇಜಿನ ಆವರಣದಲ್ಲಿ ಸಿದ್ದಪಡಿಸಲಾಗುತ್ತಿದೆ.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಸಿಇಒ ಪರಿಶೀಲನೆ: ನಗರದ ಹೊರಹೊಲಯದ ಸೂಲಾಲಪ್ಪದಿನ್ನೆಯ ಕೆ.ವಿ.ಕ್ಯಾಂಪಸ್ ಬಳಿ ವೇದಿಕೆ ಕಾರ್ಯಕ್ರಮ ಆಯೋಜಿಸಲು ಸಿದ್ದಪಡಿಸುತ್ತಿರುವ ಸ್ಥಳವನ್ನು ಜಿ.ಪಂ ಸಿಇಒ ಶಿವಶಂಕರ್ ಪರಿಶೀಲಿಸಿದರು. ಈ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟುಗಳು, ಖ್ಯಾತ ಸಿನಿಮಾ ಕಲಾವಿದರು ಭಾಗವಹಿಸಲಿದ್ದಾರೆ.

ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಶಿವಕುಮಾರ್, ಜಿಲ್ಲಾ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ತೇಜಸ್ ಉಪಸ್ಥಿತರಿದ್ದರು.

ವಾಹನ ನಿಲುಗಡೆ ಸಮಿತಿ ಸಭೆ

ಉತ್ಸವದ ಸಮಯದಲ್ಲಿ ವಾಹನ ನಿಲುಗಡೆ ವಿಚಾರವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಡಿವೈಎಸ್‌ಪಿ ವಿ.ಕೆ. ವಾಸುದೇವ್, ಉತ್ಸವವನ್ನು ಮೊದಲ ಬಾರಿ ಆಚರಿಸಲಾಗುತ್ತಿದೆ. ಜನದಟ್ಟಣೆ ಮತ್ತು ವಾಹನಗಳ ದಟ್ಟಣೆ ಹೆಚ್ಚಾಗುವ ಸಂಭವ ಇದೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಮತ್ತು ವಾಹನಗಳ ಸಂಚಾರ, ನಿಲುಗಡೆ ವ್ಯವಸ್ಥೆಯನ್ನು ಮಾಡಲು ಸೂಕ್ತ ಸ್ಥಳಗಳನ್ನು ಗುರುತಿಸಲು ಪರಿಶೀಲಿಸಬೇಕು ಎಂದರು. ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT