ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ತಿದ್ದುಪಡಿ ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹ

ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರಿಂದ ವಿವಿಧ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನೆ
Last Updated 30 ಜೂನ್ 2020, 13:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಭೂಸುಧಾರಣೆ, ಎಪಿಎಂಸಿ, ಅಗತ್ಯ ವಸ್ತುಗಳು, ವಿದ್ಯುತ್ ಹೀಗೆ ಹಲವು ಕಾಯ್ದೆಗಳಿಗೆ ಸುಗ್ರಿವಾಜ್ಞೆ ಮೂಲಕ ತಂದ ತಿದ್ದುಪಡಿಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮಂಗಳವಾರ ತಾಲ್ಲೂಕಿನ ಗೊಲ್ಲಹಳ್ಳಿ, ಆವಲಗುರ್ಕಿ, ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ‘ಪ್ರಧಾನಿ ನರೇಂದ್ರ ಮೋದಿ ಜನ ವಿರೋಧಿ, ರೈತ, ಕೃಷಿ ಕೂಲಿ ಕಾರ್ಮಿಕರ ವಿರೋಧಿ ಧೋರಣೆ ಹೊಂದಿದ್ದಾರೆ. ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕೃಷಿ ಕ್ಷೇತ್ರವನ್ನು ಕಾರ್ಪೋರೆಟ್‌ ಕಂಪೆನಿಗಳು, ಬಂಡವಾಳಶಾಹಿಗಳ ಕೈಗೆ ಹಸ್ತಾಂತರಿಸುವ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಲಾಕ್‍ಡೌನ್‍ನಿಂದಾಗಿ ರೈತರು, ಕೃಷಿ ಕೂಲಿಕಾರರು ಹಾಗೂ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬರೂ ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಸೆಣಸುತ್ತಿರುವಾಗ, ಕೇಂದ್ರ ಸರ್ಕಾರ ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಬಂಡವಾಳಶಾಹಿಗಳ ಪರ ಲಾಬಿಗೆ ಮುಂದಾಗಿದೆ’ ಎಂದು ಹೇಳಿದರು.

‘ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಸುರಕ್ಷಾ ಸಾಧನಗಳಿಲ್ಲದೆ ಜೀವನದ ಹಂಗು ತೊರೆದು ಸೋಂಕಿತರನ್ನು ಉಪಚರಿಸುತ್ತಿರುವವರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ವಲಸೆ ಕಾರ್ಮಿಕರ ಗೋಳು ಹೇಳತೀರದಾಗಿದೆ. ಇಷ್ಟಾದರೂ ಕಾರ್ಮಿಕ ವಿರೋಧ ನೀತಿಗಳನ್ನು ಹೇರಲಾಗುತ್ತಿದೆ’ ಎಂದು ತಿಳಿಸಿದರು.

‘ಸಂಕಷ್ಟಕ್ಕೆ ಸಿಲುಕಿದ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಕೇಂದ್ರ ಸರ್ಕಾರ ಘೋಷಿಸಿದ ಪ್ಯಾಕೇಜ್ ಯಾರೊಬ್ಬರಿಗೂ ತಲುಪಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಕಾಮಗಾರಿಗಳನ್ನು ಸಹ ಸಮರ್ಪಕವಾಗಿ ಜಾರಿಗೊಳಿಸುವ ಕೆಲಸವಾಗುತ್ತಿಲ್ಲ. ಇಂತಹ ಕಷ್ಟ ಕಾಲದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಹಿತ ಕಾಯುವ ಬದಲು ಕಾಯ್ದೆಗಳ ತಿದ್ದುಪಡಿಗೆ ಮುತುವರ್ಜಿ ವಹಿಸಿದ್ದು ಸಂಶಯಕ್ಕೆ ಎಡೆಮಾಡಿದೆ’ ಎಂದರು.

‘ರಾಜ್ಯ ಸರ್ಕಾರ ರೈತ ಸಮುದಾಯಕ್ಕೆ ಕಂಟಕವಾಗುವ ರೀತಿಯಲ್ಲಿ ಎಪಿಎಂಸಿ ಕಾಯ್ದೆ ಮತ್ತು ಭೂಸುಧಾರಣೆ ಕಾಯ್ದೆಗಳಿಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಲು ಮುಂದಾಗಿದೆ. ರೈತರು, ಗ್ರಾಹಕರ ಹಿತಾಸಕ್ತಿ, ದೇಶದ ಆಹಾರ ಸ್ವಾವಲಂಬನೆ ಕಡೆಗಣಿಸಿ ಸರ್ಕಾರ ತೆಗೆದುಕೊಳ್ಳುತ್ತಿರುವ ಇಂತಹ ತೀರ್ಮಾನಗಳಿಂದ ಮುಂಬರುವ ದಿನಗಳಲ್ಲಿ ರೈತರು ಬೀದಿಗೆ ಬೀಳಲಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಯಥೇಚ್ಛವಾಗಿ ದಾಸ್ತಾನು ಇರುವ ಆಹಾರ ಪದಾರ್ಥಗಳನ್ನು ಪ್ರತಿ ತಿಂಗಳಿಗೆ ಪ್ರತಿ ವ್ಯಕ್ತಿಗೆ 15 ಕೆ.ಜಿ.ಯಂತೆ ವಿತರಣೆ ಮಾಡಬೇಕು. ರೈತರು, ಕೃಷಿ ಕೂಲಿಕಾರರು, ಕಸಬುದಾರರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲ ವಸೂಲಾತಿ ನಿಲ್ಲಿಸಬೇಕು. ಇಂಧನ ಬೆಲೆ ಇಳಿಸಬೇಕು. ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಬೇಕು‘ ಎಂದು ತಿಳಿಸಿದರು.

’ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋನೆಯ ನೆರವನ್ನು ₹18 ಸಾವಿರಕ್ಕೆ ಹೆಚ್ಚಿಸಬೇಕು. ನರೇಗಾ ಕೆಲಸದ ದಿನಗಳ ಮಿತಿಯನ್ನು 200 ದಿನಗಳಿಗೆ ಏರಿಕೆ ಮಾಡಬೇಕು. ದಿನಗೂಲಿಯನ್ನು ಹೆಚ್ಚಿಸಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ನೀಡಬೇಕು‘ ಎಂದು ಆಗ್ರಹಿಸಿದರು.

‘ಸುಗ್ರಿವಾಜ್ಞೆಗಳ ಮೂಲಕ ವಿವಿಧ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರಾಷ್ಟ್ರವ್ಯಾಪಿ ಹೋರಾಟ ನಡೆಯಲಿವೆ’ ಎಂದು ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ಬೈರಪ್ಪ, ಮಂಜುನಾಥ್, ಕುಮಾರ್, ವೆಂಕಟರೆಡ್ಡಿ, ವೆಂಕಟೇಶ್‌, ಮುನಿಯಪ್ಪ, ಗೋಪಮ್ಮ, ಗೌರಮ್ಮ, ಪ್ರಕಾಶ್, ನ್ಯಾತಪ್ಪ, ರಾಮಕೃಷ್ಣಪ್ಪ, ಚಾಂದ್‌ ಬಾಬು, ಕೆ.ಆರ್.ಮಂಜುಳಾ, ವೆಂಕಟರಾಯಪ್ಪ, ಅನಸೂಯಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT