ಶಿಡ್ಲಘಟ್ಟ: ಬರವಣಿಗೆ ಅಂದವಾಗಿ ಮೂಡಲು ಬರೆಯುವ ಬಳಪ, ಪೆನ್ಸಿಲ್ ಅಥವಾ ಪೆನ್ನನ್ನು ಮೂರು ಬೆರಳಿಂದ ಹಿಡಿಯುವುದು, ಅಂಗೈನ ಹಿಂಭಾಗ ಮತ್ತು ಮಣಿಕಟ್ಟಿನ ಮುಂಭಾಗಕ್ಕೆ ಗಟ್ಟಿ ಮೇಲ್ಮೈನ ಆಧಾರವಿರುವುದು ತುಂಬಾ ಮುಖ್ಯ. ಬರವಣಿಗೆ ಕಲಿಯುವ ಆರಂಭದ ಹಂತದಲ್ಲಂತೂ ಇದು ಅತಿ ಮುಖ್ಯ.
ಈ ಉದ್ದೇಶದಿಂದ ತಾಲ್ಲೂಕಿನ ಹುಜುಗೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಅವರದೇ ಸ್ವಂತದ್ದಾದ ಬೋರ್ಡ್ ಮಾಡಿಕೊಡಲಾಗಿದೆ. ಶಾಲೆಯ ಎರಡು ಕೋಣೆಗಳಲ್ಲಿಯೂ ಮಕ್ಕಳ ಅಳತೆಗೆ ತಕ್ಕಂತೆ, ರೂಪಿಸಿರುವ ವಿಶೇಷವಾದ ಹಸಿರು ಬೋರ್ಡ್ ಇಲ್ಲಿನ ವಿಶೇಷತೆ. ಪುಟ್ಟ ಕೈಗಳಲ್ಲಿ ಬಳಪವನ್ನಿಡಿದು ಮಕ್ಕಳು ಬರೆಯುತ್ತಾ ಕಲಿಕೆಗೆ ಮುನ್ನಡಿ ಇಡುತ್ತಾರೆ.
ಮಕ್ಕಳು ಪುಟ್ಟ ಚೇರಿನ ಮೇಲೆ ಕುಳಿತು ತಮಗಾಗಿಯೇ ಮಾಡಿಸಿರುವ ಹಸಿರು ಬೋರ್ಡಿನ ಮೇಲೆ ಮುದ್ದಾದ ಅಕ್ಷರಗಳನ್ನು ಮೂಡಿಸುವುದು, ಅಲ್ಲೇ ಕೈಗೆಟಕುವಂತಿರುವ ಪುಸ್ತಕಗಳಲ್ಲಿ ಒಂದನ್ನು ತೆಗೆದುಕೊಂಡು ಓದುವುದಾಗಲಿ, ಶಿಕ್ಷಕರು ಬಂದು ಪಾಠ ಮಾಡುವಾಗ, ಹಾಗೇ ತಿರುಗಿ ಕೇಳುವುದಾಗಲೀ ನೋಡುವಾಗ “ಸಂತಸದ ಕಲಿಕೆ” ಅನುಭವಕ್ಕೆ ಬರುತ್ತದೆ.
ಮಕ್ಕಳು ಈ ಬೋರ್ಡನ್ನು ತುಂಬಾ ಖುಷಿಯಿಂದ ಬಳಸುತ್ತಿದ್ದಾರೆ. ಪೇಪರ್ ಬಳಕೆ ಕಡಿಮೆಯಾಗಿದೆ. ಇಂಗ್ಲಿಷ್, ಕನ್ನಡ ಬರವಣಿಗೆಯ ಅಂದ ಹೆಚ್ಚುತ್ತಿದೆ. ಮಕ್ಕಳು ತಾವು ಕುಳಿತಲ್ಲಿಯೇ ಬರೆಯಲು, ಇಷ್ಟ ಪಟ್ಟ ಪುಸ್ತಕ ತೆಗೆದುಕೊಂಡು ಓದಲು, ತಮ್ಮ ಬ್ಯಾಗುಗಳನ್ನು ತಮ್ಮ ಮುಂದೆಯೇ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಕಬೋರ್ಡುಗಳನ್ನು ಸಹ ನಿರ್ಮಿಸಿಕೊಡಲಾಗಿದೆ. ಇಷ್ಟ ಪಟ್ಟ ಪುಸ್ತಕ ಸಮಯ ಸಿಕ್ಕಾಗಲೆಲ್ಲಾ ಓದಲಿಕ್ಕಾಗಿಯೇ ಇಲ್ಲಿನ ಗ್ರಂಥಾಲಯವೂ ಸದಾ ತೆರೆದೇ ಇರುತ್ತದೆ, ಮಕ್ಕಳ ಕೈಗೆಟಕುವಂತಿರುತ್ತವೆ. ಭಾಷೆ, ಸರಳ ಗಣಿತದ ಹಲವು ಚಟುವಟಿಕೆಗಳು ಮಕ್ಕಳು ಖುಷಿಯಿಂದ ತೊಡಗಿಕೊಂಡು ಕಲಿಯಲು ಈ ಹಸಿರು ಬೋರ್ಡುಗಳು ಸಹಕಾರಿ ಎಂಬುದು ಇಲ್ಲಿನ ಶಿಕ್ಷಕರ ಅನುಭವ. ಜೊತೆಗೆ ಶಾಲೆಯ ಅಂದ ಹೆಚ್ಚಿಸಲು ಇಡೀ ಶಾಲೆಗೆ ಬಣ್ಣವನ್ನೂ ಬಳಿಸಿದ್ದಾರೆ.
ಸಂಖ್ಯೆಯ ದೃಷ್ಟಿಯಲ್ಲಿ ನೋಡಿದರೆ 1 ರಿಂದ 5 ರವರೆಗೆ ಓದುವ ಕೇವಲ 24 ಮಕ್ಕಳು, ಇಬ್ಬರು ಶಿಕ್ಷಕರು ಇದ್ದಾರೆಂದು ಅನ್ನಿಸಿದರೂ, ಇಲ್ಲಿ ನಡೆಯುತ್ತಿರುವ ಶೈಕ್ಷಣಿಕ ಪ್ರಯೋಗಗಳು ಇಡೀ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಗೆ ಕೈದೀವಿಗೆಯಂತಿವೆ.
ಮಕ್ಕಳು ಓದಿದ್ದನ್ನು ಅರ್ಥೈಸಿಕೊಳ್ಳುವುದು ಎಂದಾಗ ಓದುವ ಪುಸ್ತಕಗಳು ಹೆಚ್ಚು ಆಕರ್ಷಕವಾಗಿರಬೇಕು ಎಂಬುದೊಂದು ನಂಬಿಕೆ. ಅದರಂತೆ ಮಕ್ಕಳಿಗಾಗಿಯೇ ಹೊರತಂದಿರುವ ಹಲವು ಕನ್ನಡದ ಪುಸ್ತಕಗಳು, ಅದರಲ್ಲೂ ಆಕರ್ಷಕ ವಿನ್ಯಾಸ, ಮೋಹಕ ಚಿತ್ರಗಳು, ಸರಳ ಭಾಷೆಯಲ್ಲಿ ಹೇಳುವ ಕತೆಗಳು ಈ ಪುಸ್ತಕಗಳು ಈಗ ಈ ಶಾಲೆಯ ಮಕ್ಕಳಿಗೆ ಲಭ್ಯವಿವೆ.
ಶಿಕ್ಷಣ ಇಲಾಖೆ ನೀಡಿರುವ ಗಣಿತದ ಕಿಟ್ ಗಳು, ಶಿಕ್ಷಕರೇ ರೂಪಿಸಿರುವ ಭಾಷೆ ಮತ್ತು ಗಣಿತ ಕಲಿಕಾ ಮಾದರಿಗಳ ಮೂಲಕ ಮಕ್ಕಳು ಅತ್ಯಂತ ಸುಲಭವಾಗಿ ಸ್ವತಂತ್ರವಾಗಿ ಓದಲು, ಓದಿದ್ದನ್ನು ಅರ್ಥೈಸಲು ಸಾಧ್ಯವಾಗುತ್ತಿದೆ.
“ಹಲವು ವರ್ಷಗಳಿಂದ ಹಲವು ಶಾಲೆಗಳಲ್ಲಿ ಕೆಲಸ ಮಾಡಿದ ಅನುಭವದಿಂದ ಮಕ್ಕಳು ಬರೆಯುವ ಬೋರ್ಡ್ ಕಲ್ಪನೆ ನನ್ನಲ್ಲಿ ಹುಟ್ಟಿತು. ಅದನ್ನು ಸಾಕಾರಗೊಳಿಸಲು, ಶಾಲೆಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಲು ಕೆಲವು ದಾನಿಗಳು ನೆರವಿಗೆ ಬಂದರು. ಈಗ ಶಾಲೆಗೆ ಬಣ್ಣ ಬಳಿಸಿದ್ದು, ಗ್ರೀನ್ ಬೋರ್ಡ್, ಪುಸ್ತಕಗಳ ಕಪಾಟುಗಳು, ಮಕ್ಕಳ ಪುಸ್ತಕಗಳು ಬಂದಿವೆ. ಶಾಲೆಯ ಗೇಟ್, ಮಕ್ಕಳು ಆಡಲು ಉಯ್ಯಾಲೆ ಮತ್ತು ಜಾರುವಬಂಡಿ, ಸ್ಮಾರ್ಟ್ ಬೋರ್ಡ್ ಮುಂತಾದ ಕೆಲವು ಕೆಲಸಗಳು ನಡೆಯಲಿವೆ. ನಮ್ಮ ಶಾಲೆಗೆ ಸಹಾಯ ಮಾಡುತ್ತಿರುವ ಗೆಳೆಯರ ತಂಡದ ಬೇಡಿಕೆ ಏನೆಂದರೆ ಈ ಶಾಲೆಯ ಮಕ್ಕಳು ಹೆಚ್ಚೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬೇಕು ಮತ್ತು ವಿಮರ್ಶಾತ್ಮಕ ಚಿಂತನೆಗಳನ್ನು ಮಕ್ಕಳಲ್ಲಿ ಮೂಡಿಸಬೇಕು ಎಂಬುದಾಗಿದೆ” ಎಂದು ಶಿಕ್ಷಕ ಎಂ.ಜೆ.ರಾಜೀವಗೌಡ ತಿಳಿಸಿದರು.
ಶಾಲೆಯ ಮಕ್ಕಳು ಉತ್ತಮ ವಿದ್ಯಾವಂತರಾದರೆ ನನ್ನ ಹಳ್ಳಿಗೇ ಲಾಭ. ಅದಕ್ಕಾಗಿಯೇ ಶಾಲೆಯನ್ನು ಉತ್ತಮಗೊಳಿಸುವ ಎಲ್ಲ ಪ್ರಯತ್ನಗಳಲ್ಲೂ ಭಾಗಿಯಾಗುತ್ತಿರುತ್ತೇನೆ ಗಜೇಂದ್ರ, ಎಸ್‌ಡಿಎಂಸಿ ಅಧ್ಯಕ್ಷ--ಹುಜಗೂರು ರಾಮಣ್ಣ, ಗ್ರಾಮದ ಹಿರಿಯರು
ನಾವು ಗುಂಡಾಗಿ ಬರೆಯಲು ಈ ಹೊಸ ಬೋರ್ಡ್‌ಗಳಿಂದ ಸಾಧ್ಯವಾಗಿದೆ. ಬರೆಯದಿದ್ದಾಗ ಕಥೆ ಪುಸ್ತಕಗಳನ್ನು ಓದುತ್ತೇವೆ, ಇಲ್ಲವೇ ಗಣಿತದ ಆಟ ಆಡುತ್ತೇವೆನಿಖಿಲ್, ಪ್ರಜ್ವಲ್, ವಿದ್ಯಾರ್ಥಿಗಳು
ವಿವಿಧ ಚಟುವಟಿಕೆ
ಸರ್ಕಾರಿ ಶಾಲೆಗಳಲ್ಲಿಯೇ ಓದಿ ಉನ್ನತ ವ್ಯಾಸಂಗ ಮುಗಿಸಿ ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿರುವ ಕೆಲ ಗೆಳೆಯರು ಕನ್ನಡದ ಸರ್ಕಾರಿ ಶಾಲೆಗಳಿಗೆ ಸಹಾಯ ಮಾಡಲು ಗುಂಪೊಂದನ್ನು ಕಟ್ಟಿಕೊಂಡಿದ್ದಾರೆ. ಈ ಗುಂಪಿನ ಸಹಕಾರದಿಂದ ತಾಲ್ಲೂಕಿನ ಹುಜಗೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಭೌತಿಕ ಸ್ವರೂಪವೇ ಬದಲಾಗಿದೆ. ಶಾಲೆಯ ಸುತ್ತ ಕಾಂಪೌಂಡ್ ಹಾಕಿಸಿ ಸ್ಥಳ ಉಳಿಸಲು ಶ್ರಮಿಸಿದ್ದೇವೆ. ಈಗ 300ಕ್ಕೂ ಹೆಚ್ಚು ಮಹಾಗನಿ ಸಸಿ ನೆಟ್ಟು ಹನಿನೀರಾವರಿ ಮಾಡಿಸಿದ್ದೇವೆ.-ಹುಜಗೂರು ರಾಮಣ್ಣ, ಗ್ರಾಮದ ಹಿರಿಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.