ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆ: 50ಕ್ಕೂ ಹೆಚ್ಚು ಹಳ್ಳಿಗಳಿಗೆ ಸರ್ಕಾರಿ ಬಸ್ ಇಲ್ಲ!

Published 19 ಜೂನ್ 2023, 5:35 IST
Last Updated 19 ಜೂನ್ 2023, 5:35 IST
ಅಕ್ಷರ ಗಾತ್ರ

ಜೆ.ವೆಂಕಟರಾಯಪ್ಪ

ಗುಡಿಬಂಡೆ: ಗುಡಿಬಂಡೆ ತಾಲ್ಲೂಕಿನ ಹಲವು ಗ್ರಾಮಗಳಿಗೆ ಇಂದಿಗೂ ಸರ್ಕಾರಿ ಬಸ್ ಸೇವೆ ಇಲ್ಲ. ತಾಲ್ಲೂಕಿನ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಇವತ್ತಿಗೂ ಸರ್ಕಾರಿ ಸಾರಿಗೆ ಸೌಲಭ್ಯ ಮರೀಚಿಕೆಯಾಗಿದೆ.

ಜಿಲ್ಲೆಯಲ್ಲಿ ಅತಿ ಚಿಕ್ಕ ತಾಲ್ಲೂಕು ಗುಡಿಬಂಡೆ. 8 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 108 ಗ್ರಾಮಗಳಿವೆ. ಅದರಲ್ಲಿ 50 ಗ್ರಾಮಗಳ ಸಂಪರ್ಕಕ್ಕೆ ಸಾರಿಗೆ ಸೌಕರ್ಯವೇ ಇಲ್ಲ. 

ಗುಡಿಬಂಡೆಯಿಂದ ಚಿಕ್ಕಬಳ್ಳಾಪುರ, ಬೀಚಗಾನಹಳ್ಳಿ, ಮಂಡಿಕಲ್ಲು, ಪೋಲಂಪಲ್ಲಿ ಮಾರ್ಗಗಳಿಗೆ 37 ಬಸ್‌ಗಳು, ಬಾಗೇಪಲ್ಲಿ ಕಡೆಯ ಹಂಪಸಂದ್ರ, ದಪ್ಪರ್ತಿ, ಚಂಡೂರು ಮಾರ್ಗವಾಗಿ 30 ಬಸ್‌ಗಳು, ಗೌರಿಬಿದನೂರು ಕಡೆಗೆ 17 ಬಸ್‌ಗಳು ಓಡಾಡುತ್ತಿವೆ. ಬಾಗೇಪಲ್ಲಿ ಡಿಪೊ ಮೂಲಕ ಗುಡಿಬಂಡೆಯಿಂದ ಅಂತರರಾಜ್ಯವಾದ ತಿರುಪತಿಗೆ ಕೇವಲ ಒಂದೇ ಒಂದು ಬಸ್ ಇದೆ. ಅದೇ ರೀತಿ ತುಮಕೂರು ಜಿಲ್ಲಾ ಕೇಂದ್ರಕ್ಕೂ ಒಂದೇ ಬಸ್ಸಿನ ಸೌಲಭ್ಯವಿದೆ. 

ಪಕ್ಕದ ತಾಲ್ಲೂಕು ಕೇಂದ್ರಗಳಾದ ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಬಾಗೇಪಲ್ಲಿಯಲ್ಲಿ ಕರ್ನಾಟಕ ರಸ್ತೆ ಸಾರಿಗೆಯ ಡಿಪೊಗಳಿವೆ. ಬಸ್ ಸೇವೆಗಳು ತಕ್ಕ ಮಟ್ಟಿಗೆ ಇದೆ. ಆದರೆ, ಜನಪ್ರತಿನಿಧಿಗಳು ಮತ್ತು ಇಲಾಖೆಯ ನಿರ್ಲಕ್ಷ್ಯದಿಂದ ತಾಲ್ಲೂಕಿನಲ್ಲಿ ಇವತ್ತಿಗೂ ಸಾರಿಗೆ ಡಿಪೊ ನಿರ್ಮಾಣವಾಗಿಲ್ಲ. ಒಂದು ವೇಳೆ ಗುಡಿಬಂಡೆಯಲ್ಲೂ ಒಂದು ಡಿಪೊ ಇದ್ದಿದ್ದರೆ, ಕೆಲವೊಂದಿಷ್ಟು ಹಳ್ಳಿಗಳಿಗೆ ಬಸ್ ಸೌಲಭ್ಯ ಸಿಗುತ್ತಿತ್ತು ಎಂಬುದು ಸ್ಥಳೀಯರ ಮಾತು. 

ಸರ್ಕಾರಿ ಸಾರಿಗೆಯ ಬಸ್‌ಗಳಿಲ್ಲದೆ ಗ್ರಾಮೀಣ ಜನರು, ವಿದ್ಯಾರ್ಥಿಗಳು ನಿತ್ಯದ ಕೆಲಸ ಕಾರ್ಯಗಳಿಗಾಗಿ ಹೋಗಿ ಬರಲು ಪರದಾಡುವಂತಾಗಿದೆ. ಗುಡಿಬಂಡೆ ಗ್ರಾಮೀಣ ಪ್ರದೇಶ, ಇತರೆ ಜಿಲ್ಲಾ ಕೇಂದ್ರಗಳು, ಅಂತರರಾಜ್ಯ ಮತ್ತು ರಾಜ್ಯದ ಪ್ರವಾಸಿ ಮತ್ತು ಧಾರ್ಮಿಕ ತಾಣಗಳಿಗೆ ಗುಡಿಬಂಡೆ ಮಾರ್ಗವಾಗಿ ಬಸ್ ಸೇವೆಯನ್ನು ಒದಗಿಸುವಂತೆ ಒತ್ತಾಯಿಸಿ ಹಲವು ಹೋರಾಟಗಳು ನಡೆದಿವೆ. ಹೋರಾಟ ನಡೆದ ಸಂದರ್ಭದಲ್ಲಿ ಒಂದು ವಾರ ಬಸ್‌ ಸೇವೆ ಕಲ್ಪಿಸಿದಂತೆ ಮಾಡಿ, ಆ ನಂತರ ಈ ಮಾರ್ಗಗಳಲ್ಲಿ ಹಣ ಗಳಿಕೆ ಆಗುತ್ತಿಲ್ಲ ಎಂಬ ನೆಪ ಹೇಳಿ ಸಾರಿಗೆ ಬಸ್ ಸೇವೆಯನ್ನು ಅನ್ಯ ಮಾರ್ಗಗಳಿಗೆ ಬದಲಾವಣೆ ಮಾಡಲಾಗಿದೆ ಎಂದು ನಾಗರಿಕರು ದೂರುವರು.

ಬಸ್ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಜನಸಾಮಾನ್ಯರು ಆರೋಗ್ಯ ಚಿಕಿತ್ಸೆ, ಅಗತ್ಯ ಕೆಲಸಗಳಿಗಾಗಿ ತಾಲ್ಲೂಕು ಕಚೇರಿಗಳಿಗೆ ತೆರಳಲು ದ್ವಿಚಕ್ರ ವಾಹನಗಳು ಹಾಗೂ ಆಟೊಗಳನ್ನೇ ನೆಚ್ಚಿಕೊಳ್ಳುವಂತಾಗಿದೆ. ಈ ಕುರಿತು ಜಿಲ್ಲಾ ಸಾರಿಗೆ ನಿಯಂತ್ರಕರು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಲ್ಲೋಡು ಗ್ರಾಮದ ಎಂ.ಎನ್. ಆದಿನಾರಾಯಣಪ್ಪ ಅಸಮಾಧಾನ ವ್ಯಕ್ತಪಡಿಸುವರು.

ಪಕ್ಕದ ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡ ಕಂಬಾಲಹಳ್ಳಿ ಗ್ರಾಮವು ತಾಲ್ಲೂಕು ಕೇಂದ್ರಕ್ಕೆ 20 ಕಿ.ಮೀ ದೂರದಲ್ಲಿದೆ. ಇಷ್ಟು ದೂರವಿರುವ ಹಳ್ಳಿಗೆ ಒಂದೇ ಒಂದು ಸಾರಿಗೆ ಬಸ್ ಸೇವೆ ಇಲ್ಲ. ಹೀಗಾಗಿ ಗ್ರಾಮಸ್ಥರು ತಮ್ಮ ಆರೋಗ್ಯಕ್ಕಾಗಿ ಮೂರು ಕಿ. ಮೀ ದೂರದ ಎಲ್ಲೋಡು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿನ ಪ್ರಾಥಮಿಕ ಅರೋಗ್ಯ ಘಟಕವನ್ನೇ ಅವಲಂಬಿಸಿದ್ದಾರೆ. ಆದರೆ, ಪ್ರೌಢಶಾಲೆಗೆ ಹೋಗಿ, ಬರಲು ವಿದ್ಯಾರ್ಥಿಗಳಿಗೆ ಹರಸಾಹಸವಾಗಿದೆ. ಇನ್ನು ಮಳೆಗಾಲದಲ್ಲಿ ಈ ಗ್ರಾಮಕ್ಕೆ ಹೋಗಲು ಕಾಲುನಡಿಗೆಯೇ ಗತಿ ಎಂದು ಎಲ್ಲೋಡು ಗ್ರಾಮದ ದಲಿತ ಮುಖಂಡರಾದ ಅಶ್ವಥಮ್ಮ ಅಂಜಿನಪ್ಪ ತಿಳಿಸುವರು.

ಗುಡಿಬಂಡೆ ತಾಲ್ಲೂಕು ಕೇಂದ್ರವು ಸಾರಿಗೆ ಸಂಪರ್ಕದಿಂದ ಬಹುದೂರ ಉಳಿದಿದೆ.‌ ಸ್ಥಳೀಯವಾಗಿ ಸಾರಿಗೆ ಡಿಪೊ ಸ್ಥಾಪನೆ ಮಾಡಿದರೆ ಸುಧಾರಣೆ ತರಲು ಸಾಧ್ಯ. ಡಿಪೊ ಸ್ಥಾಪನೆಗಾಗಿ 2013ರಲ್ಲಿ ಆಗಿನ ಸರ್ಕಾರ 10 ಎಕರೆ ಜಮೀನು ಮಂಜೂರು ಮಾಡಿದೆ. ಅದರೆ ಇಲಾಖೆಯ ಇಚ್ಛಾಶಕ್ತಿ ಕೊರತೆಯಿಂದ ಬಹುದಿನಗಳ ಬೇಡಿಕೆ ನನೆಗುದಿಗೆ ಬಿದ್ದಿದೆ ಎಂದು ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ ಮುಖಂಡ ಜಿ.ವಿ.ಗಂಗಪ್ಪ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT