ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಡಿಬಂಡೆ ಪಟ್ಟಣ ಪಂಚಾಯಿತಿ: ‘ಕೈ’ಗೆ ದೊರೆಯುವುದೇ ಅಧಿಕಾರ?

ಗುಡಿಬಂಡೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಆಡಳಿತ ಪಕ್ಷದ ಸದಸ್ಯರಲ್ಲೇ ಪೈಪೋಟಿ,
Published : 11 ಆಗಸ್ಟ್ 2024, 6:23 IST
Last Updated : 11 ಆಗಸ್ಟ್ 2024, 6:23 IST
ಫಾಲೋ ಮಾಡಿ
Comments

ಗುಡಿಬಂಡೆ: ಪಟ್ಟಣ ಪಂಚಾಯಿತಿಯ ಅಧಿಕಾರಕ್ಕಾಗಿ ಆಡಳಿತ ಪಕ್ಷದ ಸದಸ್ಯರಲ್ಲೇ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಮತ್ತೊಂದೆಡೆ ಮೀಸಲು ವಿರುದ್ಧ ನ್ಯಾಯಾಲಯ ಮೊರೆ ಹೋಗಲು ಸದಸ್ಯೆ ವೀಣಾ ಆಲೋಚಿಸಿದ್ದಾರೆ. 

ಗುಡಿಬಂಡ ಪಟ್ಟಣ ಪಂಚಾಯತಿಯ 2ನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. 

 ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ 11 ಸದಸ್ಯರು ಇದ್ದಾರೆ. ಕಾಂಗ್ರೆಸ್ 6, ಜೆಡಿಎಸ್ ಇಬ್ಬರು ಹಾಗೂ ಪಕ್ಷೇತರ ಮೂವರು ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಸದಸ್ಯರು ಸಹ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಪಕ್ಷೇತರ ಸದಸ್ಯರಾದ 2ನೇ ವಾರ್ಡ್‌ನ ಜಿ. ರಾಜೇಶ್, 9ನೇ ವಾರ್ಡ್‌ ಪಕ್ಷೇತರ ಸದಸ್ಯೆ ವೀಣಾ ನಿತಿನ್ ಸೇರಿದಂತೆ ಹಲವರು ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪ್ರಕಟಗೊಂಡ ನಂತರ  ಕಾಂಗ್ರೆಸ್ ಪಕ್ಷದ ಐವರು ಸದಸ್ಯರಲ್ಲಿ ತಳಮಳ ಉಂಟಾಗಿದೆ. ಶಾಸಕ ಸುಬ್ಬಾರೆಡ್ಡಿ ಅವರ ತೀರ್ಮಾನವೇ ಅಂತಿಮವಾಗಿದೆ.

ಕಳೆದ 61 ವರ್ಷದಿಂದ ಎಸ್‌ಟಿ ಮಹಿಳೆಗೆ ಅಧ್ಯಕ್ಷರಾಗುವ ಅವಕಾಶ ಸಿಕ್ಕಿಲ್ಲದ ಕಾರಣ ಮೀಸಲು ಮರು ಪರಿಶೀಲನೆಗಾಗಿ 9 ನೇ ವಾರ್ಡ್ ಸದಸ್ಯ ವೀಣಾ ನೀತಿನ್ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಡಾ. ಕೆ. ಸುಧಾಕರ್ ಸಚಿವರಾಗಿದ್ದರು. ಅವರ ರಾಜಕೀಯ ನಡೆಯಿಂದ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿತು. ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಸದಸ್ಯರು ಇಲ್ಲ. ಹೀಗಿದ್ದರೂ ಮೊದಲ 30 ತಿಂಗಳ ಅವಧಿಗೆ ಪಕ್ಷೇತರ ಸದಸ್ಯರಾದ ಇಸ್ಮಾಯಿಲ್ ಅಜಾದ್, ದಿ.ಜಿ.ಎಂ.ಅನಿಲ್ ಕುಮಾರ್, ವೀಣಾ ನಿತಿನ್, ಜೆಡಿಎಸ್ ಸದಸ್ಯರಾದ ಬಹೀರ್, ಅನುಷಾ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದ ಕಾಂಗ್ರೆಸ್ ಪಕ್ಷದ 7 ನೇ ಸದಸ್ಯೆ ಬಷೀರಾ ರಿಜ್ವಾನ್ ಬಂಡಾಯ ಎದ್ದರು.

ಸಂಸದರ ಮತವೂ ಇವರಿಗೆ ದೊರೆಯಿತು. ಕಾಂಗ್ರೆಸ್ ಅಧಿಕಾರದಿಂದ ವಂಚಿತವಾಯಿತು. ಕಾಂಗ್ರೆಸ್ ಅಭ್ಯರ್ಥಿ ಪರಾಜಿತಗೊಂಡು ಶಾಸಕರಿಗೆ ಮುಖ ಭಂಗವಾಯಿತು. ಬಿಸಿಎಂ (ಎ) ಮಹಿಳೆಗೆ ನಿಗದಿಯಾಗಿದ್ದ  ಅಧ್ಯಕ್ಷ ಸ್ಥಾನ 7ನೇ ವಾರ್ಡ್ ಸದಸ್ಯೆ ಬಷೀರಾ ರಿಜ್ವಾನ್  ಅವರಿಗೆ ದೊರೆಯಿತು. ಎರಡು ವರ್ಷಗಳ ಕಾಲ ಪಟ್ಟಣ ಪಂಚಾಯಿತಿ ಕಚೇರಿಗೆ ಶಾಸಕರು ಬರಲೇ ಇಲ್ಲ. 

23 ತಿಂಗಳ ನಂತರ ಅಧ್ಯಕ್ಷೆ ಬಹೀರಾ ರಿಜ್ವಾನ್ ವಿರುದ್ದ ಅಡಳಿತ ಪಕ್ಷದ ಸದಸ್ಯರು ಸೇರಿ 10 ಮಂದಿ ಸದಸ್ಯರು ಬಂಡಾಯ ಎದ್ದರು. ಅವಿಶ್ವಾಸ ನಿರ್ಣಯ ತಂದರು. ನಂತರ 6 ತಿಂಗಳ ಅವಧಿಗೆ ಕಾಂಗ್ರೆಸ್ ಪಕ್ಷದ ಸದಸ್ಯೆ ನಗೀನ್ ತಾಜ್ ಅಧ್ಯಕ್ಷರಾದರು.

ಶಾಸಕ ಸುಬ್ಬಾರೆಡ್ಡಿ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವ ಕಾರಣ ಬಂಡಾಯವೂ ಕಷ್ಟ ಸಾಧ್ಯ. ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎಂದು ಚರ್ಚೆಗಳು ನಡೆದಿವೆ.

1963ರಲ್ಲಿ ಗುಡಿಬಂಡೆ ಪುರಸಭೆಯ ಸ್ಥಾನ ಹೊಂದಿತ್ತು. ನಂತರ, ಜನಸಂಖ್ಯೆ ಅಧಾರದಲ್ಲಿ 1987ರಲ್ಲಿ ಮಂಡಲ ಪಂಚಾಯಿತಿಯಾಯಿತು. 1997ರಿಂದ ಪಟ್ಟಣ ಪಂಚಾಯಿತಿಯಾಗಿ ಮುಂದುವರಿದಿದೆ. 

ವೀಣಾ ನಿತಿನ್ 
ವೀಣಾ ನಿತಿನ್ 

ನ್ಯಾಯಾಲಯದ ಮೊರೆ

1990ರಿಂದ ಇಲ್ಲಿಯ ತನಕ ಗುಡಿಬಂಡೆ ಪ.ಪಂ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಮಹಿಳೆಗೆ ಮೀಸಲು ದೊರೆತಿಲ್ಲ. ಈ ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಲಾಗಿದೆ. ಈ ಬಾರಿ ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು 9ನೇ ವಾರ್ಡ್‌ ಪಕ್ಷೇತರ ಸದಸ್ಯೆ ವೀಣಾ ನಿತಿನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT