ಬುಧವಾರ, ಏಪ್ರಿಲ್ 21, 2021
32 °C
ಹಿರಿಯ ಸಂಗೀತಗಾರರ ಭೇಟಿ ಮಾಡಿದ ಕಿರಿಯ ಸಂಗೀತಗಾರರು

ಕೈವಾರದತ್ತ ಸಂಗೀತಾಸಕ್ತರ ದಂಡು

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಕೈವಾರದಲ್ಲಿ ನಡೆಯುತ್ತಿರುವ ಗುರುಪೂಜಾ ಸಂಗೀತೋತ್ಸವದ ಎರಡನೇ ದಿನವಾದ ಮಂಗಳವಾರ ಅಪಾರ ಸಂಖ್ಯೆಯಲ್ಲಿ ಸಂಗೀತಾಸಕ್ತರು ಮತ್ತು ಭಕ್ತರು ಪಾಲ್ಗೊಂಡಿದ್ದರು.

ಗ್ರಾಮದ ಎಲ್ಲೆಡೆ ಸಂಗೀತ ಮಾರ್ಧನಿಸುತ್ತಿತ್ತು. ಸಾರ್ವಜನಿಕರು ಮತ್ತು ಭಕ್ತರು ಕುಳಿತಲ್ಲಿ, ನಿಂತಲ್ಲಿ ಸಂಗೀತವನ್ನು ಆಲಾಪನೆ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಉದಯೋನ್ಮುಖ ಸಂಗೀತಗಾರರು ಖ್ಯಾತ ಸಂಗೀತಗಾರರನ್ನು ಹತ್ತಿರದಿಂದ ಕಂಡು ಅವರ ಗಾಯನ ಕೇಳಿ ಪುಳಕಿತಗೊಂಡರು.

ಮಂಗಳವಾರ ಬೆಳಿಗ್ಗೆ 5 ಗಂಟೆಗೆ ನಾದಸ್ವರದಿಂದ ಎರಡನೇ ದಿನದ ಕಾರ್ಯಕ್ರಮಗಳು ಪ್ರಾರಂಭವಾದವು. ಸಂಗೀತೋತ್ಸವದ ಸಭಾಂಗಣ ಹಾಗೂ ಹೊರಗಡೆ ಜನಜಂಗುಳಿ ತುಂಬಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಸಂಗೀತದ ಲಹರಿ ನಿರಂತರವಾಗಿ ಹರಿಯುತ್ತಿತ್ತು.

ಸಂಜೆ ಚೆನ್ನೈನ ಯು.ಪಿ.ರಾಜು, ಯು.ನಾಗಮಣಿ ಅವರು 1 ಗಂಟೆ ನುಡಿಸಿದ ಮ್ಯಾಂಡೋಲಿನ್ ವಾದನವನ್ನು ಜನರು  ಮಂತ್ರ ಮುಗ್ದರಾಗಿ ಕೇಳಿದರು. ತ್ರಿಪ್ಲಿಕೇನ್ ಕೆ.ಶೇಖರ್ ತವಿಲ್, ತಿರುಚಿಕೆ.ಮುರಳಿ ಘಟಂ ಸಾಥ್ ನೀಡಿದರು. ಸಭಾಂಗಣ ಕಿಕ್ಕಿರಿದು ತುಂಬಿತ್ತು. ಹೊರಗಡೆ ಅಳವಡಿಸಿದ್ದ ಪರದೆಯ ಮುಂದೆಯೂ ಸಾವಿರಾರು ಜನರು ಕುಳಿತಿದ್ದರು.

ಬನಸೂರಿ ಸಮೀರ್ ರಾವ್ ಮತ್ತು ಅಮಿತ್ ಎ.ನಾಡಿಗ್ ಅವರ ಕೊಳಲು ವಾದನವು ಸಹ ಸಂಗೀತಪ್ರಿಯರು ಮೆಲುಕು ಹಾಕುವಂತಿತ್ತು. ಸಂಗೀತ ಗೊತ್ತಿಲ್ಲದವರೂ ಅಲುಗಾಡದೆ ಕುಳಿತು ಆಲಿಸಿದರು. ಸಾಯಿಶಿವು ಲಕ್ಷ್ಮೀಕೇಶವ್ ಮೃದಂಗ, ಆದರ್ಶ ಶನಾಯ್ ತಬಲ ನುಡಿಸುವ ಮೂಲಕ ಕೊಳಲು ವಾದನಕ್ಕೆ ಸಾಥ್ ನೀಡಿದರು. ಒಂದೊಂದು ಕಾರ್ಯಕ್ರಮವೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಿದ್ದವು.

ಪದ್ಮಶ್ರೀ ಎ.ಕನ್ಯಾಕುಮಾರಿ ಚೆನ್ನೈ ಅವರು ಒಂದು ಗಂಟೆ ಪಿಟೀಲು ಸೋಲೋ ಮೂಲಕ ಜನರನ್ನು ಯಕ್ಷ ಲೋಕಕ್ಕೆ ಕರೆದೊಯ್ದರು. ಪಿಟೀಲು ಸೋಲೋ ಅದ್ಭುತವಾದ ಸಂಗೀತ ಕಛೇರಿ ಆಗಿತ್ತು. ಶೋತೃಗಳು ತಮ್ಮನ್ನು ತಾವೇ ಮರೆತು ಆಲಾಪನೆ ಮಾಡುತ್ತಿದ್ದರು. ಪತ್ರಿ ಸತೀಶ್ ಕುಮಾರ್ ಚೆನ್ನೈ ಮೃದಂಗ, ಜಿ.ಅಮೃತ ಬೆಂಗಳೂರು ಖಂಜಿರ ನುಡಿಸುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಜತೆಗೆ ಪಿಟೀಲು ಸೋಲೋಗೆ ಮತ್ತಷ್ಟು ಮೆರುಗು ನೀಡಿದರು.

ಆರ್.ಸಿಕ್ಕಿಲ್ ಗುರುಚರಣ್ ಚೆನ್ನೈ ಅವರ ಗಾಯನಕ್ಕೆ ಮನಸೋಲದವರೇ ಇಲ್ಲ. ವಿ.ಸಂಜೀವ್ ಚೆನ್ನೈ ಪಿಟೀಲು, ಡಾ.ತಿರುವಾರೂರು ಭಕ್ತವತ್ಸಲಂ ಚೆನ್ನೈ ಮೃದಂಗ ನುಡಿಸುವ ಮೂಲಕ ಗಾಯನಕ್ಕೆ ಮೆರಗು ನೀಡಿದರು. ಇಡೀ ದೇಶದಲ್ಲಿ ಪ್ರಸಿದ್ಧಿಯಾದ ಸಿಕ್ಕಿಲ್ ಗುರುಚರಣ್ ಅವರ ಕಾರ್ಯಕ್ರಮ ಸಿಗುವುದೇ ಅಪರೂಪ. ಸಿಕ್ಕಿದರೂ ಈ ರೀತಿ ಸಾಮಾನ್ಯ ಜನರು ಕಾರ್ಯಕ್ರಮ ನೋಡಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಉದಯೋನ್ಮುಖ ಸಂಗೀತಗಾರ ರಾಮ ಕುಮಾರ್.

ಪದ್ಮಶ್ರೀ ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಪೋನ್ ವಾದನವು ಗಾನಗಂಧರ್ವ ಲೋಕದಲ್ಲಿ ವಿಹರಿಸುವಂತೆ ಮಾಡಿತು. ಅವರಿಗೆ ಪಕ್ಕವಾದ್ಯಗಳಲ್ಲಿ ಎ.ಕನ್ಯಾಕುಮಾರಿ ಚೆನ್ನೈ ಪಿಟೀಲು, ಬಿ.ಹರಿಕುಮಾರ್ ಚೆನ್ನೈ ಮೃದಂಗ, ರಾಜೇಂದ್ರ ನಾಕೋಡ್ ತಬಲ, ಬಿ.ರಾಜಶೇಖರ್ ಮೋರ್ಸಿಂಗ್ ನುಡಿಸುವ ಮೂಲಕ ತಮ್ಮ ಪ್ರತಿಭೆ ಮೆರೆದರು.

ಬೆಂಗಳೂರಿನ ಸಾಯಿ ತೇಜಸ್ವಿನಿ ಮತ್ತು ತಂಡದ ಭರತನಾಟ್ಯ ಪ್ರೇಕ್ಷಕರ ಮನಸೂರೆಗೊಂಡಿತು. ಸಂಗೀತಕ್ಕಿಂತಲೂ ಭರತನಾಟ್ಯ ಪ್ರೇಕ್ಷಕರ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರಿತ್ತು. ಜನ ಮುಗಿಬಿದ್ದು ಭರತನಾಟ್ಯವನ್ನು ವೀಕ್ಷಿಸಿದರು.

ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ, ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಸತ್ಯನಾರಾಯಣ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಂಸದ ಎಸ್.ಮುನಿಸ್ವಾಮಿ ಹಾಗೂ ಶಾಸಕ ಎಂ.ಕೃಷ್ಣಾರೆಡ್ಡಿ ಸಂಗೀತೋತ್ಸವಕ್ಕೆ ಭೇಟಿ ನೀಡಿದ್ದರು.

ಉತ್ಸವದಲ್ಲಿ ಇಂದಿನ ಕಾರ್ಯಕ್ರಮ
ಚಿಂತಾಮಣಿ:
ಕೈವಾರದ ಗುರುಪೂಜಾ ಸಂಗೀತೋತ್ಸವದಲ್ಲಿ ಮಂಗಳವಾರ ಬೆಳಿಗ್ಗೆ 6 ರಿಂದ 8ರವರೆಗೆ ಸ್ಥಳೀಯ ಕಲಾವಿದರಿಂದ ನಾದಸ್ವರ. ಬೆಳಿಗ್ಗೆ 8-30 ಚೈತನ್ಯ ಬ್ರದರ್ಸ್ ವಿಶಾಖಪಟ್ಟಣಂ ಗಾಯನ, 9-30ಕ್ಕೆ ಸದ್ಗುರು ತಾತಯ್ಯನವರ ವಿರಚಿತ ಬೋಧನಾಕೃತಿಗಳ ಗೋಷ್ಠಿ ಗಾಯನ, 10-30 ರಿಂದ 12-30 ಗುರುಪೂರ್ಣಿಮೆ ಪ್ರಯುಕ್ತ ತಾತಯ್ಯನವರಿಗೆ ಗುರುಪೂಜೆ ಜರುಗಲಿದೆ.

ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಸಂದೇಶ ನೀಡುವರು. ಮಧ್ಯಾಹ್ನ 12-30 ರಿಂದ ಸಂಜೆ 5ರವರೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿದ್ವಾಸರಿಂದ ಗಾಯನ. ವಾಸವಿ ಸಹೋದರಿಯರು, ಪಾಮಾದಿ ನಾಗಮಣಿ ಮೋಹನ್, ಗರಕಪಾಟಿ ಜಯಲಕ್ಷ್ಮೀವೆಂಕಟ್ ಗಾಯನ.

ಸಂಜೆ 5 ರಿಂದ ರಾತ್ರಿ 12 ರವರೆಗೆ ವಿಶೇಷ ಕಾರ್ಯಕ್ರಮಗಳು: ಅನ್ನಯ್ಯಂಪಟ್ಟಿ ಗಣೇಶನ್ ಚೆನ್ನೈ-ಜಲತರಂಗ್ ವಾದನ, ಅನ್ನಯ್ಯಂಪಟ್ಟಿ ವೆಂಕಟಸುಬ್ರಮಣ್ಯಂ ಪಿಟೀಲು, ಬಿ.ಧ್ರುವರಾಜ್ ಮೃದಂಗ, ಎ.ಸೋಮಶೇಖರ್ ಘಟಂ. ವಿನಯ್ ಶರ್ಮ ಬೆಂಗಳೂರು- ಗಾಯನ, ಬಿ.ರಘುರಾಂ ಪಿಟೀಲು, ಎಂ.ಟಿ.ರಾಜಕೇಸರಿ ಮೃದಂಗ, ಸೂನಾದ್ ಆನೂರು ಖಂಜಿರ.

ಆರ್.ಕೆ.ಪದ್ಮನಾಭ -ಗಾಯನ, ಸಿ.ಎನ್.ಚಂದ್ರಶೇಖರ್ ಪಿಟೀಲು, ಸಿ.ಚೆಲುವರಾಜು ಮೃದಂಗ. ಬಳ್ಳಾರಿ ರಾಘವೇಂದ್ರ-ಗಾಯನ, ಅಚ್ಯುತರಾವ್ ಪಿಟೀಲು, ಎಚ್.ಸಿ.ಶಿವಶಂಕರಸ್ವಾಮಿ ಮೃದಂಗ.

ಚಂದನಬಾಲಾ ಮುಂಬೈ-ಗಾಯನ, ಬಿ.ಕೆ.ರಘು  ಪಿಟೀಲು, ಅನಿರುದ್ಧ ಭಟ್ ಮೃದಂಗ, ಭಾಗ್ಯಲಕ್ಷ್ಮೀ ಎಂ.ಕೃಷ್ಣ ಮೋರ್ಸಿಂಗ್.

ಸರಸ್ವತಿ ರಾಜಗೋಪಾಲನ್ ದೆಹಲಿ-ವೀಣಾವಾದನ, ಆನೂರು ಅನಂತಕೃಷ್ಣಶರ್ಮ ಮೃದಂಗ, ಸುನಾದ್ ಆನೂರು ಖಂಜಿರ, ಬಿ.ರಾಜಶೇಖರ್ ಮೋರ್ಸಿಂಗ್. ನೂಪುರ ಫೈನ್‌ಆರ್ಟ್ಸ್ ರೂಪಾ ರಾಜೇಶ್ ತಂಡದವರಿಂದ ಕೂಚುಪುಡಿ ನೃತ್ಯ.

ರಾತ್ರಿ ವಿಶೇಷ ಕಾರ್ಯಕ್ರಮಗಳು: ಮಂಜುಳಾ ಭಾಗವತಾರಿಣಿ-ಹರಿಕಥೆ, ಲಕ್ಷ್ಮಮ್ಮ ಭಾಗವತಾರಿಣಿ-ಹರಿಕಥೆ, ರಮಾದೇವಿ ಭಾಗವತಾರಿಣಿ ಮದನಪಲ್ಲಿ -ಹರಿಕಥೆ, ದಸ್ತಗೀರ್ ಸಾಬ್ ಕದಿರಿ-ಹರಿಕಥೆ, ಗೊಲ್ಲಹಳ್ಳಿ ವೆಂಕಟಮುನಿಯಪ್ಪ-ಬುರ್ರಕಥೆ ನಡೆಸಿಕೊಡುವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು