ಚಿಕ್ಕಬಳ್ಳಾಪುರ: ನಂದಿಬೆಟ್ಟ ಎಂದೊಡನೆಯೇ ಎಲ್ಲರಿಗೂ ನೆನಪಾಗುವುದು ಟಿಪ್ಪೂ ಡ್ರಾಪ್. ಅದೇ ರೀತಿ ಹೈದರ್ ಡ್ರಾಪ್ ಕೂಡ ಒಂದಿದೆ. ಆದರೆ ಅದು ಇರುವುದು ಹೈದರ್ ಅಲಿ ಬೆಟ್ಟದಲ್ಲಿ.
ತಾಲ್ಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ದೇವಸ್ಥಾನದ ಹಿಂಬದಿಯಿಂದ ಸುಲ್ತಾನ್‌ಪೇಟೆ ಕಡೆಯಿಂದ ಹೊರಟರೆ ಬಲಭಾಗದಲ್ಲಿಯೇ ಇದೆ ಸಿಂಗಾಟಕದಿರೇನಹಳ್ಳಿ.
ಸಿಂಗಾಟಕದಿರೇನಹಳ್ಳಿ ಗ್ರಾಮವು ಹೈದರ್ ಅಲಿ ಬೆಟ್ಟದ ಬುಡದಲ್ಲೇ ಇದೆ. ಗ್ರಾಮವನ್ನು ಆನಿಕೊಂಡಂತಿರುವ ಬೆಟ್ಟವನ್ನು ಏರಲು ಸೂಕ್ತ ಮಾರ್ಗವಿಲ್ಲ. ಕಾಲುದಾರಿಯೂ ಇಲ್ಲ. ಗಿಡಗಂಟೆಗಳು, ಕಲ್ಲು ಬಂಡೆಗಳ ನಡುವೆಯೇ ದಾರಿ ಕಂಡುಕೊಳ್ಳುತ್ತಾ ಮತ್ತು ಸಣ್ಣ ಪುಟ್ಟ ಬಂಡೆಗಳ ಮೇಲೆ ಹೆಜ್ಜೆಯಿಡುತ್ತಾ ಹೋಗಬೇಕು.
ಬೆಟ್ಟವನ್ನು ಏರುತ್ತಾ ಸಾಗಿದಂತೆ ತುತ್ತುದಿಯಲ್ಲಿರುವ ಬೃಹತ್ ಬಂಡೆಯ ಮೇಲೆ ನಿರ್ಮಿಸಿರುವ ಕಲಾತ್ಮಕ ಮಂಟಪ ಕಾಣಿಸುತ್ತದೆ. ಈ ಬೆಟ್ಟಕ್ಕೆ ಈ ಮಂಟಪವೇ ಕಲಶಪ್ರಾಯ. ಮಂಟಪದ ಬಂಡೆಯನ್ನು ಏರುವುದು ಕೂಡ ಸುಲಭದ ಸಂಗತಿಯೇನಲ್ಲ. ಈ ಅತಿ ದೊಡ್ಡದಾದ ಬಂಡೆಯ ತುದಿಯಲ್ಲಿ ಒಂದಷ್ಟು ಕಲ್ಲುಗಳನ್ನು ಪೇರಿಸಿ ಕೋಟೆ ಗೋಡೆಯಂತೆ ನಿರ್ಮಾಣ ಮಾಡಲಾಗಿದೆ. ಮಂಟಪದಲ್ಲಿ ಹಾಗೂ ಸುತ್ತಮುತ್ತ ಕುಳಿತುಕೊಳ್ಳಲು ಒಂದಷ್ಟು ಸ್ಥಳಾವಕಾಶವಿದೆ.
ಮುಂಜಾವಿನಲ್ಲಿ ಈ ಬೆಟ್ಟದಿಂದ ಕಾಣಸಿಗುವ ಸುಂದರ ಪ್ರಾಕೃತಿಕ ನೋಟ ಮನಸ್ಸಿಗೆ ಖುಷಿ ನೀಡುತ್ತದೆ. ಈ ಬೆಟ್ಟದ ಮೇಲಿನ ಮಂಟಪದಿಂದ ಒಂದು ದಿಕ್ಕಿನಲ್ಲಿ ಜೋಡಿ ಬೆಟ್ಟಗಳಾದ ನಂದಿಬೆಟ್ಟ ಹಾಗೂ ಚನ್ನರಾಯನಬೆಟ್ಟ ಕಂಡರೆ, ಇನ್ನೊಂದು ದಿಕ್ಕಲ್ಲಿ ಕಳವಾರ ಬೆಟ್ಟ ಕಾಣುತ್ತದೆ.
ನಂದಿಬೆಟ್ಟ, ಚನ್ನರಾಯನಬೆಟ್ಟ, ಕಳವಾರಬೆಟ್ಟ ಮುಂತಾದವುಗಳ ನಡುವೆ ಇರುವ ಈ ಪುಟಾಣಿ ಬೆಟ್ಟವು ‘ಹೈದರ್ ಅಲಿ ಬೆಟ್ಟ’ ಎಂದು ನಾಮಕರಣಗೊಂಡಿದ್ದೇ ಸೋಜಿಗದ ಸಂಗತಿ. ಇಲ್ಲಿನ ಗ್ರಾಮಸ್ಥರಿಗೆ ಈ ಹೆಸರಿನ ಮೂಲದ ಬಗ್ಗೆ ಗೊತ್ತಿಲ್ಲ. ಬಹಳ ಹಿಂದಿನಿಂದಲೂ ಹೀಗೇ ಕರೆಯುತ್ತಾರೆ ಎನ್ನುತ್ತಾರೆ ಅವರು.
‘ಜೇಮ್ಸ್ ವೆಲ್ಷ್, ಈಸ್ಟ್ಇಂಡಿಯಾ ಕಂಪೆನಿಯ ಮದ್ರಾಸ್ ಆರ್ಮಿಯಲ್ಲಿ ಜನರಲ್ ಆಗಿದ್ದರು. ಇವರ ಸೇವಾವಧಿ 1790 ರಿಂದ 1848. ತನ್ನ 40 ವರ್ಷಗಳ ಮಿಲಿಟರಿ ಸೇವೆಯ ಬಗ್ಗೆ ಜೇಮ್ಸ್ ವೆಲ್ಷ್ ಬರೆದು ಮಿಲಿಟರಿ ರೆಮಿನೆಸನ್ಸಸ್ ಎಂಬ ಪುಸ್ತಕದ ರೂಪದಲ್ಲಿ ದಾಖಲಿಸಿಟ್ಟಿದ್ದಾರೆ. ಇದರಲ್ಲಿ ಹೈದರನ ಡ್ರಾಪ್ ಎಂಬ ಅಧ್ಯಾಯಯವೇ ಇದೆ’.
ಅಲ್ಲದೆ, ಬ್ರಿಟಿಷ್ ಅಧಿಕಾರಿ, ಕಾದಂಬರಿಕಾರ, ಪುರಾತತ್ವ ಶಾಸ್ತ್ರಜ್ಞ ಮೆಡೋಸ್ ಟೇಲರ್, ಟಿಪ್ಪು ಸುಲ್ತಾನನ ಬಗ್ಗೆ ಬರೆದಿರುವ ಪುಸ್ತಕದಲ್ಲಿ ಹೈದರನ ಡ್ರಾಪ್‌ನಲ್ಲಿ ನರಳಿದ ಬ್ರಿಟಿಷ್ ಅಧಿಕಾರಿಗಳ ಆಕ್ರಂದನವನ್ನು ಮನಮುಟ್ಟುವಂತೆ ತುಂಬಾ ಚೆನ್ನಾಗಿ ಬರೆದಿದ್ದಾರೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ಭಕ್ತರಹಳ್ಳಿ ಸಂತೆ ನಾರಾಯಣಸ್ವಾಮಿ.
ಜೇಮ್ಸ್ ವೆಲ್ಷ್ ಬರೆದಿರುವ ಮಿಲಿಟರಿ ರೆಮಿನೆಸನ್ಸಸ್ ಎಂಬ ಪುಸ್ತಕದಲ್ಲಿ ಈ ಬೆಟ್ಟದ ಕುರಿತಾದ ಮಾಹಿತಿ ಹೀಗಿದೆ: ‘1809 ರ ಜೂನ್ 27 ರಂದು ನಾವು ನಂದಿದುರ್ಗದ ಕಣಿವೆಯಲ್ಲಿನ ಮನೆಗೆ ಬಂದೆವು. ಧೈರ್ಯಶಾಲಿ ಮೇಜರ್ ಗೌಡಿ 1791 ರಲ್ಲಿ ತನ್ನ ಸೇನೆಯೊಂದಿಗೆ ನಂದಿದುರ್ಗದ ಕೋಟೆಯನ್ನು ಭೇದಿಸಿದ್ದ. ಈಗ 1809ರಲ್ಲಿ ಈ ಸ್ಥಳದ ನಿಯಂತ್ರಣ ನನಗೆ ಒಪ್ಪಿಸಿದ್ದಾರೆ’.
‘ಈ ಕಣಿವೆಯಲ್ಲಿ ನಮ್ಮ ಮನೆಯಿಂದ ಸುಮಾರು ಒಂದು ಮೈಲು ದೂರದಲ್ಲಿ ಒಂದು ಕಲ್ಲಿನ ಬೆಟ್ಟವಿದೆ. ಅದು ಕೆಲ ನೂರು ಗಜಗಳಷ್ಟು ಎತ್ತರವಿದೆ. ಬೆಟ್ಟದ ಪೂರ್ವ ತುದಿಯಲ್ಲಿ ಲಂಬವಾಗಿ ನಿಂತ ದೊಡ್ಡ ಕಲ್ಲುಬಂಡೆಯಿದೆ. ಅದನ್ನು ಹೈದರನ ಡ್ರಾಪ್ ಎಂದೇ ಕರೆಯುವರು. ಅದು ನೋಡಲು ಸುಂದರವಾಗಿದ್ದರೂ, ಚರಿತ್ರೆಯಲ್ಲಿ ಇದು ಮೆತ್ತಿಕೊಂಡ ರಕ್ತ ಕಲೆಗಳು ದಾಖಲಾಗಿದೆ’ ಎಂದು ಇದೆ.
‘ಈ ಬಂಡೆ ಬೆಟ್ಟದ ಮೇಲೆ ಕೂರಿಸಿದ ರೀತಿಯಿದೆ. ಬಂಡೆಯ ಬಳಿ ಹೋಗಲು ದಾರಿ ಮಾಡಲಾಗಿದೆ. ಸುತ್ತ ಗೋಡೆ ನಿರ್ಮಿಸಿದ್ದು ಪ್ರವೇಶಿಸಲು ಸಣ್ಣ ದ್ವಾರ ಇದೆ. ಒಳಗೆ ಒರಟಾದ ವಸ್ತುಗಳಿಂದ ನಿರ್ಮಿತವಾದ ಬಂಗಲೆಯಿದೆ. ಅದರಲ್ಲಿ ಯೂರೋಪಿಯನ್ ಬಂಧಿಗಳನ್ನು ಆಗ ಆಳ್ವಿಕೆ ನಡೆಸುತ್ತಿದ್ದ ಹೈದರ್ ಮತ್ತು ಟಿಪ್ಪು ಕೂಡಿಡುತ್ತಿದ್ದರು. ಬಂಧಿಗಳ ಸಂಖ್ಯೆ ಹೆಚ್ಚಾದಾಗ ಕೆಲವರನ್ನು ಬಂಡೆಯ ತುದಿಗೆ ಕರೆದೊಯ್ದು ತಳ್ಳಿಬಿಡುತ್ತಿದ್ದರು’.
‘ಸುಮಾರು 70 ರಿಂದ 80 ಅಡಿ ಎತ್ತರದಿಂದ ಬಿದ್ದು ದೇಹದ ಮೂಳೆಗಳನ್ನೆಲ್ಲಾ ಮುರಿದುಕೊಂಡು ನರಿ, ಕತ್ತೆ ಕಿರುಬ ಮತ್ತು ಚಿರತೆಗಳಿಗೆ ಆಹಾರವಾಗುತ್ತಿದ್ದರು. ನಮ್ಮ ದೇಶವಾಸಿಗಳ (ಬ್ರಿಟಿಷರ) ಹಲವರ ಹೆಸರುಗಳು ಅಲ್ಲಿನ ಗೋಡೆಗಳ ಮೇಲೆ, ಮಾಡಿನ ಮೇಲೆ ಕೊರೆದಿರುವುದನ್ನು ನೋಡಿದೆವು. ಈ ಹೈದರ್ ಮತ್ತು ಟಿಪ್ಪು ಅವರ ಇನ್ನೊಂದು ಅತ್ಯಂತ ಇಷ್ಟವಾದ ಡ್ರಾಪ್ ನಂದಿದುರ್ಗದ ಮೇಲಿದೆ. ಅದು ನನಗೆ ಈ ಸಂದರ್ಭದಲ್ಲಿ ನೆನಪಾಗುತ್ತಿದೆ. ನಂದಿದುರ್ಗದ ನೈಋತ್ಯ ಭಾಗದಲ್ಲಿ ಸುಮಾರು ಒಂದು ಸಾವಿರದಿಂದ ಒಂದು ಸಾವಿರದ ಇನ್ನೂರು ಅಡಿಗಳಷ್ಟು ಬೆಟ್ಟ ಕಡಿದಾಗಿದೆ. ಬಂಧಿಯಾಗಿದ್ದ ನಮ್ಮ ಸಿಪಾಯಿಗಳನ್ನು ಗೋಣಿ ಚೀಲದಲ್ಲಿ ಹಾಕಿ ಹೊಲಿದು ಅಲ್ಲಿಂದ ಬಿಸಾಡಿದ್ದಾರೆ. ನೂರಾರು ಸಿಪಾಯಿಗಳು ಈ ರೀತಿ ಸತ್ತಿದ್ದಾರೆ. ಅವರು ಬಿದ್ದಿರಬಹುದಾದ ಬೆಟ್ಟದ ಬುಡಕ್ಕೆ ಸಾಕಷ್ಟು ಕಷ್ಟಪಟ್ಟು ಹೋಗಿ ನಾನು ಪರಿಶೀಲನೆ ಮಾಡಿದ್ದೆ. ಆದರೆ, ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಕುರುಹುಗಳು ಸಿಗಲಿಲ್ಲ. ಕಾಲ ಎಲ್ಲವನ್ನೂ ಅಳಿಸಿ ಹಾಕಿದೆ’.
ಬ್ರಿಟಿಷ್ ಅಧಿಕಾರಿ ಜೇಮ್ಸ್ ವೆಲ್ಷ್ ಈ ಬೆಟ್ಟದ ಬಗ್ಗೆ ಬರೆದು ಎರಡು ಶತಮಾನಗಳಾಗಿವೆ. ಆತ ಹೇಳುವ ಕಟ್ಟಡದ ಸ್ಥಳದಲ್ಲಿ ಈಗ ಹಳೆಯ ಕಲ್ಲಿನ ಮಂಟಪವಿದೆ. ಬಹುಶಃ ಗೋಡೆಗಳೆಲ್ಲಾ ಹೋಗಿ ಮಂಟಪ ಮಾತ್ರ ಉಳಿದಿರಬಹುದು. 1761– 1782 ರ ಅವಧಿಯಲ್ಲಿ ಆಳ್ವಿಕೆ ನಡೆಸಿದ್ದ ಹೈದರ್ ಅಲಿಯ ಹಾಗೂ ಆತನ ಹೆಸರಿನ ಬೆಟ್ಟದ ಬಗ್ಗೆ ಬ್ರಿಟಿಷ್ ಅಧಿಕಾರಿ ಬರೆದಂತೆ, ಆನಂತರ ಎರಡು ಶತಮಾನಗಳಲ್ಲಿ ಏನೆಲ್ಲಾ ನಡೆಯಿತೋ ತಿಳಿಸುವವರು ಯಾರೂ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.