ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಪಕ್ಷೇತರರು ಅಧ್ಯಕ್ಷೆ, ಉಪಾಧ್ಯಕ್ಷೆ

ಚಿಂತಾಮಣಿ ನಗರಸಭೆ: ಮಾಜಿ ಶಾಸಕ ಸುಧಾಕರ್‌ ಬಣಕ್ಕೆ ಗೆಲುವು
Last Updated 1 ನವೆಂಬರ್ 2020, 16:50 IST
ಅಕ್ಷರ ಗಾತ್ರ

ಚಿಂತಾಮಣಿ: ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಸದಸ್ಯೆ ರೇಖಾ ಉಮೇಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಿ.ಎನ್. ಸುಹಾಸಿನಿ ಆಯ್ಕೆಯಾದರು.

ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬಣದಲ್ಲಿ ಗುರುತಿಸಿಕೊಂಡಿರುವ ರೇಖಾ ಅಧ್ಯಕ್ಷರಾಗುವ ಮೂಲಕ ಇವರ ಸುಧಾಕರ್‌ ಮೇಲುಗೈ ಸಾಧಿಸಿದ್ದಾರೆ. 6ನೇ ವಾರ್ಡ್ ಟ್ಯಾಂಕ್ ಬಂಡ್ ರಸ್ತೆ ಪಶ್ಚಿಮ ಕ್ಷೇತ್ರದ ಸದಸ್ಯೆ ಎಂ.ರೇಖಾ ಉಮೇಶ್ ಅಧ್ಯಕ್ಷರಾಗಿ ಹಾಗೂ 10ನೇ ವಾರ್ಡ್ ಎನ್.ಆರ್.ಬಡಾವಣೆಯ ಸದಸ್ಯೆ ಡಿ.ಎನ್.ಸುಹಾಸಿನಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರೇಖಾ 17 ಮತಗಳನ್ನು ಪಡೆದರು. ಜೆಡಿಎಸ್‌ ಅಭ್ಯರ್ಥಿ ಮಂಜುಳಾದೇವಿ 16 ಮತ ಪಡೆದರು.

ನಗರಸಭೆಯಲ್ಲಿ ಜೆಡಿಎಸ್ 14, ಪಕ್ಷೇತರರು 16, ಕಾಂಗ್ರೆಸ್ 1 ಸೇರಿ ಒಟ್ಟು 31 ಸದಸ್ಯರಿದ್ದಾರೆ. ಡಾ.ಎಂ.ಸಿ.ಸುಧಾಕರ್ ಬಣ ಎಂದು ಗುರುತಿಸಿಕೊಂಡಿರುವ 14 ಪಕ್ಷೇತರರು, ಪಕ್ಷೇತರ ಸದಸ್ಯ ಅಕ್ಷಯ್ ಕುಮಾರ್, ಜೆಡಿಎಸ್ ಬಂಡಾಯ ಸದಸ್ಯ ಮಹ್ಮದ್ಶಫೀಕ್ ಹಾಗೂ ಸಂಸದ ಎಸ್. ಮುನಿಸ್ವಾಮಿ ಗೆಲುವಿನ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದರು. ಜೆಡಿಎಸ್‌ನ 13, ಕಾಂಗ್ರೆಸ್‌ನ ಏಕೈಕ ಸದಸ್ಯ ಜೈಭೀಮ್ ಮುರಳಿ, ಪಕ್ಷೇತರ ಸದಸ್ಯೆ ಇಸ್ರತ್ ಉನ್ನೀಸಾ ಹಾಗೂ ಶಾಸಕ ಎಂ.ಕೃಷ್ಣಾರೆಡ್ಡಿ ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸಿದರು.

ಪರಿಶಿಷ್ಟಜಾತಿ ಮಹಿಳೆಗೆ ಮೀಸಲಾದ ಅಧ್ಯಕ್ಷೆ ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ಮಂಜುಳಾದೇವಿ ಹಾಗೂ ಪಕ್ಷೇತರ ಸದಸ್ಯೆ ಎಂ.ರೇಖಾಉಮೇಶ್ ನಾಮಪತ್ರ ಸಲ್ಲಿಸಿದ್ದರು. ಹಿಂದುಳಿದವರ್ಗ(ಬಿ) ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಮಂಜುಳಾ ಮತ್ತು ಪಕ್ಷೇತರ ಸದಸ್ಯೆ ಡಿ.ಎನ್.ಸುಹಾಸಿನಿ ನಾಮಪತ್ರ ಸಲ್ಲಿಸಿದ್ದರು. ಉಪವಿಭಾಗಾಧಿಕಾರಿ ರಘುನಂದನ್ ಚುನಾವಣಾಧಿಕಾರಿಯಾಗಿದ್ದರು. ತಹಶೀಲ್ದಾರ್ ಹನುಮಂತರಾಯಪ್ಪ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪೌರಯುಕ್ತ ಉಮಾಶಂಕರ್ ಇದ್ದರು.

ಬಿಜೆಪಿ ಅರ್ಭರ್ಥಿಗಳಿಲ್ಲ: ಸಂಸದ ಎಸ್ ಮುನಿಸ್ವಾಮಿ ಮಾತನಾಡಿ, ‘ನಗರಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲ. ಹೀಗಾಗಿ ಚಿಂತಾಮಣಿಯಅಭಿವೃದ್ಧಿಯ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಮತ ನೀಡಿದ್ದೇನೆ. 50 ವರ್ಷಗಳಿಂದಲೂ ಡಾ.ಎಂ.ಸಿ.ಸುಧಾಕರ್ ಕುಟುಂಬ ಚಿಂತಾಮಣಿಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಿದ್ದರು. ಈಗ ನಾವು ಅವರಿಗೆ ಬೆಂಬಲ ನೀಡಿದ್ದೇವೆ. ಚಿಂತಾಮಣಿ ನಗರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT