ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿ : ಎಸ್.ಎಚ್.ಕೋರಡ್ಡಿ

ಗುರುವಾರ , ಜೂಲೈ 18, 2019
23 °C
‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಕಾರ್ಯಕ್ರಮ

ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿ : ಎಸ್.ಎಚ್.ಕೋರಡ್ಡಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಈ ಅನಿಷ್ಟ ಪದ್ಧತಿಯನ್ನು ಪ್ರತಿಯೊಬ್ಬರೂ ಖಂಡಿಸಿ, ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಾಲ ಕಾರ್ಮಿಕ ಪದ್ಧತಿಗೆ ಕುಟುಂಬದ ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳೇ ಮುಖ್ಯ. ಅನೇಕ ಪೋಷಕರು ಬಡತನದಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸದೆ ದುಡಿಮೆಗೆ ಕಳುಹಿಸುತ್ತಾರೆ. ಇದನ್ನು ತಡೆಗಟ್ಟಬೇಕು. ಇವತ್ತು ಸರ್ಕಾರಗಳು ಶಿಕ್ಷಣ ಉತ್ತೇಜನಕ್ಕಾಗಿ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿವೆ. ಅವುಗಳ ಪ್ರಯೋಜನ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಅಧಿಕಾರಿಗಳು ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

‘ಬಾಲ ಕಾರ್ಮಿಕ ನಿಷೇಧ ಕಾಯ್ದೆ ಪ್ರಕಾರ, 14 ವರ್ಷದೊಳಗಿನ ಮಕ್ಕಳು ಯಾವುದೇ ಉದ್ಯೋಗದಲ್ಲಿ ತೊಡಗುವುದಕ್ಕೆ ನಿಷೇಧವಿದೆ. ಆದರೂ ಜಿಲ್ಲೆಯಲ್ಲಿ ಅಪಾಯಕಾರಿ ಉದ್ದಿಮೆಗಳಲ್ಲಿ 31, ಅಪಾಯಕಾರಿ ಅಲ್ಲದ ಉದ್ದಿಮೆಗಳಲ್ಲಿ 4 ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ. ಆ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ’ ಎಂದರು.

‘ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಪೋಷಕರು ಮಕ್ಕಳನ್ನು ದುಡಿಮೆಗೆ ಕಳುಹಿಸುವ ಬದಲು ಉತ್ತಮ ಶಿಕ್ಷಣವನ್ನು ಒದಗಿಸುವ ಮೂಲಕ ಅವರ ಉಜ್ವಲ ಭವಿಷ್ಯವನ್ನು ರೂಪಿಸಬೇಕು. ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣ ಮಾಡಬೇಕಿದೆ’ ಎಂದರು.

ಬೆಂಗಳೂರಿನ ಸಿಆರ್‌ಟಿ ಉಪನ್ಯಾಸಕ ವೆಂಕಟೇಶ್‌ ಮಾತನಾಡಿ, ‘ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಾಶ ಮಾಡುವ ಉದ್ದೇಶದಿಂದ ಸರ್ಕಾರ ಮಕ್ಕಳಿಗಾಗಿ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ದೇಶದ ಅಭಿವೃದ್ಧಿಯಲ್ಲಿ ಎಲ್ಲರೂ ಭಾಗಿಯಾಗಬೇಕು’ ಎಂದು ಹೇಳಿದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ ಮಾತನಾಡಿ, ‘ಶಾಲೆಯಿಂದ ದೂರ ಉಳಿದಿರುವ ಮಕ್ಕಳನ್ನು ಗುರುತಿಸಿ ಅವರನ್ನು ಪುನಃ ಶಾಲೆಗೆ ಕರೆತರುವ ಕೆಲಸಗಳು ಹೆಚ್ಚೆಚ್ಚು ನಡೆಯಬೇಕಿದೆ. ತಪ್ಪದೇ ಶಾಲೆಗೆ ಹೋಗಬೇಕು ಎಂಬ ಮನೋಭಾವನೆ ಮಕ್ಕಳಲ್ಲಿ ಬೆಳೆಯುವಂತೆ ಮಾಡಬೇಕಿದೆ. ಸಾರ್ವಜನಿಕರು ಬಾಲ ಕಾರ್ಮಿಕರನ್ನು ಕಂಡಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಈ ಪದ್ಧತಿಯನ್ನು ತಡೆಗಟ್ಟಬಹುದು’ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಬಿ.ಬಿ.ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯಿಂದ ಆರಂಭಗೊಂಡ ಜಾಗೃತಿ ಜಾಥಾಗೆ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜ್ ಅವರು ಚಾಲನೆ ನೀಡಿದರು. ನೂರಾರು ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳ ಮೂಲಕ ಜಾಥಾ ನಡೆಸಿ ಬಾಲ ಕಾರ್ಮಿಕ ಪದ್ಧತಿ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಲ್.ಕಿರಣ್ ಅವರು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು. ತಹಶೀಲ್ದಾರ್ ನರಸಿಂಹಮೂರ್ತಿ, ವಕೀಲರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವಿನೋದ್ ಕುಮಾರ್, ಕಾರ್ಮಿಕ ನಿರೀಕ್ಷಕರಾದ ಎಚ್.ಎಂ.ಸೋಮಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !