ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈವಾರ ತಾತಯ್ಯ ರಥೋತ್ಸವ ಸಂಭ್ರಮ

ಸದ್ಗುರು ಮೂಲ ಬೃಂದಾವನ ಅಲಂಕಾರ l ನೆರೆಯ ರಾಜ್ಯಗಳಿಂದಲೂ ಭಕ್ತರ ಆಗಮನ
Last Updated 20 ಮಾರ್ಚ್ 2022, 3:01 IST
ಅಕ್ಷರ ಗಾತ್ರ

ಕೈವಾರ (ಚಿಂತಾಮಣಿ ತಾಲ್ಲೂಕು): ತ್ರಿಕಾಲ ಜ್ಞಾನಿ ಕೈವಾರದ ಯೋಗಿ ನಾರೇಯಣ ಯತೀಂದ್ರರ ರಥೋತ್ಸವ ಶನಿವಾರ ಶ್ರದ್ಧಾ, ಭಕ್ತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ಯೋಗಿ ನಾರೇಯಣ ಯತೀಂದ್ರರ ಮಠದಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸದ್ಗುರುಗಳ ಮೂಲ ಬೃಂದಾವನವನ್ನು ಅಲಂಕರಿಸಲಾಗಿತ್ತು. ಬೃಂದಾವನದ ಮುಂಭಾಗದಲ್ಲಿ ಯತೀಂದ್ರರ ಉತ್ಸವ ಮೂರ್ತಿಗೆ ಅಭಿಷೇಕ, ವೇದ ಘೋಷದೊಂದಿಗೆ ಅಷ್ಟಾವಧಾನ ಸೇವೆಯನ್ನು ಸಮರ್ಪಿಸಲಾಯಿತು.

ಪೂಜಾ ಕೈಂಕರ್ಯದಲ್ಲಿ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ದಂಪತಿ ಉಪಸ್ಥಿತರಿದ್ದರು. ಧರ್ಮಾಧಿಕಾರಿಯ ನೇತೃತ್ವದಲ್ಲಿ ಸಾಮೂಹಿಕ ನಾಮ ಸಂಕೀರ್ತನೆಯನ್ನು ಸಮರ್ಪಿಸಲಾಯಿತು.

ಯೋಗಿ ನಾರೇಯಣ ಯತೀಂದ್ರರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಕರೆದುಕೊಂಡು ಬಂದು ಅಲಂಕೃತ ರಥದಲ್ಲಿ ಕೂರಿಸಲಾಯಿತು. ರಥವನ್ನು ಹೂಗಳಿಂದ ಸಿಂಗರಿಸಲಾಗಿತ್ತು. ರಥ ಶಾಂತಿ ಮತ್ತು ಪೂಜೆ ಸಲ್ಲಿಸಲಾಯಿತು. ರಥದಲ್ಲಿ ಅರ್ಚಕರು ಮತ್ತೊಮ್ಮೆ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಕ್ಷೇತ್ರದ ಧರ್ಮಾಧಿಕಾರಿ ಮತ್ತು ಟ್ರಸ್ಟ್ ಸದಸ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.

ಸಾವಿರಾರು ಭಕ್ತರು ಕೈಜೋಡಿಸಿ ರಥವನ್ನು ಎಳೆದು ಕೃತಾರ್ಥರಾದರು. ಭಕ್ತರು ಬಾಳೆಹಣ್ಣು ಮತ್ತು ದವನವನ್ನು ತೇರಿಗೆ ಸಮರ್ಪಿಸಿದರು. ಭಕ್ತರು ಭಜನೆ ಮಾಡುತ್ತಾ ಭಕ್ತಿಯ ಪರಕಾಷ್ಠೆಯಲ್ಲಿ ಮಿಂದೆದ್ದರು. ಸುತ್ತಮುತ್ತಲಿನ ಗ್ರಾಮಗಳ ಜನರು, ರಾಜ್ಯದ ವಿವಿಧ ಭಾಗದ ಜನರು ಸೇರಿದಂತೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿ ಭಾಗಗಳಿಂದರೂ ಭಕ್ತರು ಆಗಮಿಸಿದ್ದರು. ಮಠ ಹಾಗೂ ದೇವಸ್ಥಾನದಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿದರು.

ಬೇಸಿಗೆಯ ಬೇಗೆ ತಣಿಸಲು ಸುತ್ತಮುತ್ತಲಿನ ಗ್ರಾಮಸ್ಥರು ತಮಟೆ ವಾದ್ಯದ ಮೂಲಕ ಟ್ರ್ಯಾಕ್ಟರ್‌ಗಳಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿಯನ್ನು ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಉಚಿತವಾಗಿ ನೀರಿನ ಪ್ಯಾಕೆಟ್‌ಗಳನ್ನು ಹಂಚುತ್ತಿದ್ದರು. ಮಠದಿಂದ ಅನ್ನ ದಾಸೋಹ ಏರ್ಪಡಿಸಲಾಗಿತ್ತು.

ಟ್ರಸ್ಟ್ ಸಮಿತಿಯ ಉಪಾಧ್ಯಕ್ಷ ಜೆ. ವಿಭಾಕರ ರೆಡ್ಡಿ, ಖಜಾಂಚಿ ಆರ್.ಪಿ.ಎಂ. ಸತ್ಯನಾರಾಯಣ, ನಿರ್ದೇಶಕರಾದ ಬಾಲಕೃಷ್ಣ ಭಾಗವತರ್, ಬಿ.ಎಸ್. ಶ್ರೀನಿವಾಸ್, ಡಾ.ಎಂ.ವಿ. ಶ್ರೀನಿವಾಸ್, ಕೆ. ನರಸಿಂಹಪ್ಪ, ಗಣೇಶ ಚಂದ್ರಪ್ಪ, ಕೆ.ಎಂ. ತ್ಯಾಗರಾಜ್, ಕೆ.ವಿ. ಸುರೇಶ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

ರಥೋತ್ಸವದ ಅಂಗವಾಗಿ ಗ್ರಾಮದ ಜೋಡಿರಸ್ತೆ ಹಾಗೂ ಬಸ್ ನಿಲ್ದಾಣದಲ್ಲಿ ವಿವಿಧ ಆಟಿಕೆಗಳು, ಬರಗು ಬತ್ತಾಸು ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಬಸ್‌ನಿಲ್ದಾಣವನ್ನು ಗ್ರಾಮದ ಹೊರವಲಯಕ್ಕೆ ಸ್ಥಳಾಂತರಿಸಲಾಗಿತ್ತು. ಗ್ರಾಮದ ಎಲ್ಲಾ ದಾರಿಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು.

ಸಂಕೀರ್ತನಾ ಯೋಜನೆಯ ಸಂಚಾಲಕ ಬಾಲಕೃಷ್ಣ ಭಾಗವತರ್ ನೇತೃತ್ವದಲ್ಲಿ ಸಾಮೂಹಿಕ ಸಂಕೀರ್ತನೆಯನ್ನು ಸಮರ್ಪಿಸಲಾಯಿತು. ನಾದಸುಧಾರಸ ವೇದಿಕೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕದಿರಿಯ ದಸ್ತಗಿರಿ ಸಾಬ್ ಮತ್ತು ತಂಡದಿಂದ ಹರಿಕಥೆ, ಎಚ್. ವೆಂಕಟಮುನಿಯಪ್ಪ ಮತ್ತು ತಂಡದಿಂದ ಬುರ್ರಕಥೆಯನ್ನು ಏರ್ಪಡಿಸಲಾಗಿತ್ತು. ವಿವಿಧ ಭಜನಾ ತಂಡಗಳಿಂದ ರಾತ್ರಿಯಿಡೀ ಅಖಂಡ ಭಜನೆ ನಡೆಯಿತು. ರಾತ್ರಿ ತಾತಯ್ಯನವರ ಮುತ್ತಿನ ಪಲ್ಲಕ್ಕಿ ಉತ್ಸವ ವಿದ್ಯುತ್ ದೀಪಗಳಿಂದ ವಿಜೃಂಭಣೆಯಿಂದ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT