ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರುದ್ದೇಶದಿಂದ ಕಲ್ಯಾಣ ಮಂಟಪ ನಿರಾಕರಣೆ: ಪ್ರಕರಣ ದಾಖಲು

ದೇಗುಲ ಸಮಿತಿ ವ್ಯವಸ್ಥಾಪಕರ ವಿರುದ್ಧ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ
Last Updated 7 ನವೆಂಬರ್ 2022, 5:28 IST
ಅಕ್ಷರ ಗಾತ್ರ

ಗುಡಿಬಂಡೆ: ಮುಜರಾಯಿ ಇಲಾಖೆಗೆ ಸೇರಿದ ಇಲ್ಲಿನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಸ್ಥಾನದ ಕಲ್ಯಾಣ ಮಂಟಪವನ್ನು ಪರಿಶಿಷ್ಟ ಜಾತಿಯವರ ವಿವಾಹಕ್ಕೆ ನೀಡಲು ನಿರಾಕರಿಸಿದ ಆರೋಪದ ಮೇಲೆ ದೇವಾಲಯದ ಸಮಿತಿ ವ್ಯವಸ್ಥಾಪಕ ಮಾಚಾವಲಹಳ್ಳಿ ವೆಂಕಟರಾಯಪ್ಪ ಅವರ ಮೇಲೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಗುಡಿಬಂಡೆ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.

ಟ್ರಸ್ಟ್ ವ್ಯವಸ್ಥಾಪಕರು ದುರುದ್ದೇಶದಿಂದ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬದ ಮದುವೆಗೆ ಕಲ್ಯಾಣ ಮಂಟಪ ನೀಡಲು ನಿರಾಕರಿಸಿರುವುದು ತಿಳಿದುಬಂದಿದೆ. ದೂರು ದಾಖಲಿಸಿಕೊಳ್ಳಲು ಗುಡಿಬಂಡೆ ಪೋಲಿಸ್‌ರಿಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಸಿಗ್ಬತುಲ್ಲಾ ತಿಳಿಸಿದ್ದಾರೆ. ದೂರು ದಾಖಲಿಸುವಂತೆ ಪೊಲೀಸರಿಗೆ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕರು ಸಹ ತಿಳಿಸಿದ್ದಾರೆ.

ತಾಲ್ಲೂಕಿನ ಬ್ರಾಹ್ಮಣರಹಳ್ಳಿಯ ಪರಿಶಿಷ್ಟ ಜಾತಿಯ ವೆಂಕಟಲಕ್ಷ್ಮಿ ಅವರ ವಿವಾಹ ನ.3 ರಂದು ನಿಶ್ಚಯವಾಗಿತ್ತು. ಮಳೆಗಾಲ ಆಗಿರುವುದರಿಂದ ಮನೆಯ ಮುಂದೆ ಮದುವೆ ಮಾಡಲು ಕಷ್ಟ ಆಗುತ್ತದೆ ಎಂದು ಮುಜರಾಯಿ ಇಲಾಖೆಗೆ ಸೇರಿದ ಪಟ್ಟಣದ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಕಲ್ಯಾಣ ಮಂಟಪ ಕಾಯ್ದಿರಿಸಲು ವಧುವಿನ ಸಹೋದರ ಆವುಲಕೊಂಡಪ್ಪ ದೇವಾಲಯದ ಸಮಿತಿ ವ್ಯವಸ್ಥಾಪಕ ಮಾಚಾವಲಹಳ್ಳಿ ವೆಂಕಟರಾಯಪ್ಪ ಅವರನ್ನು ಸಂಪರ್ಕಿಸಿದ್ದರು.

ಆದರೆ ನ.3ರಂದು ಕಲ್ಯಾಣ ಮಂಟಪನ್ನು ಯಾರು ಕಾಯ್ದಿರಿಸದಿದ್ದರೂ ನ.3ರಂದು ಬೇರೊಂದು ವಿವಾಹ ನಿಗದಿ ಆಗಿದೆ ಎಂದು ಸುಳ್ಳು ಹೇಳಿದ್ದರು. ನ.3ರಂದು ದೇವಾಲಯ ಹೊರ ಭಾಗದಲ್ಲಿ ವೆಂಕಟಲಕ್ಷ್ಮಿ ಮತ್ತು ಮಹೇಶ್ ವಿವಾಹ ನಡೆಸಲಾಗಿತ್ತು. ಅಂದು ಕಲ್ಯಾಣ ಮಂಟಪ ಖಾಲಿ ಇತ್ತು. ಟ್ರಸ್ಟ್‌ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ವಧುವಿನ ಸಹೋದರ ಆವುಲಕೊಂಡಪ್ಪ
ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದರು.

ಟ್ರಸ್ಟ್ ವ್ಯವಸ್ಥಾಪಕರಿಗೆ ಕಾರಣ ಕೇಳಿ ತಹಶೀಲ್ದಾರರು ನೋಟಿಸ್ ನೀಡಿದ್ದರು. ಕಂದಾಯ ನಿರೀಕ್ಷಕ ಲಕ್ಷ್ಮಿನಾರಾಯಣ ಎರಡೂ ಕಡೆಯವರಿಂದ ಹೇಳಿಕೆ ಪಡೆದು ತಹಶೀಲ್ದಾರ್‌ಗೆ ವರದಿ ಸಲ್ಲಿಸಿದ್ದರು. ಟ್ರಸ್ಟ್ ವ್ಯವಸ್ಥಾಪಕರು ದುರುದ್ದೇಶದಿಂದ ಸಭಾಂಗಣ ನೀಡಲು ನಿರಾಕರಿಸಿದ್ದಾರೆ ಎನ್ನುವುದನ್ನು ವರದಿ ನೀಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿ, ‘ಕಾನೂನು ಅನ್ವಯ ಟ್ರಸ್ಟ್ ವ್ಯವಸ್ಥಾಪಕರ ಮೇಲೆ ಪ್ರಕರಣ ದಾಖಲಿಸಲು ಗುಡಿಬಂಡೆ ಠಾಣೆಗೆ ವರದಿ ನೀಡಲಾಗಿದೆ. ಇದರ ಜತೆಗೆ ಮುಂದಿನ ಕ್ರಮಕ್ಕಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೂ ವರದಿ
ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ಸಂತ್ರಸ್ತರು ದೇವಾಸ್ಥಾನದ ಟ್ರಸ್ಟ್‌ ವ್ಯವಸ್ಥಾಪಕರ ವಿರುದ್ಧ ದೂರು ನೀಡಿದ್ದರು. ತಹಶೀಲ್ದಾರ್‌ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಿಸಿಕೊಳ್ಳಲು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದೇಗುಲ ವ್ಯವಸ್ಥಾಪಕರ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ನಾಗರಾಜ್‌ ತಿಳಿಸಿದ್ದಾರೆ.

‘ಈಗಾಗಲೇ ಟ್ರಸ್ಟ್ ವ್ಯವಸ್ಥಾಪಕರ ಮೇಲೆ ದೂರು ದಾಖಲಾಗಿದೆ. ನಮ್ಮ ಸಂಘಟನೆಯಿಂದ ಸೋಮವಾರ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು’ ಎಂದು ದಲಿತ ಮುಖಂಡ ಜಿ.ವಿ.ಗಂಗಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT