ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Election 2023 | ಚಿಕ್ಕಬಳ್ಳಾಪುರದಲ್ಲಿ ತ್ರಿಕೋನ ಸ್ಪರ್ಧೆ ಸಾಧ್ಯತೆ

ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿ ಡಾ.ಕೆ.ಸುಧಾಕರ್
Last Updated 31 ಜನವರಿ 2023, 1:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿನಿಧಿಸುತ್ತಿರುವ ಕಾರಣ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗಮನ ಸೆಳೆಯುವ ಪ್ರಮುಖ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರವೂ ಒಂದಾಗಲಿದೆ.

ಕ್ಷೇತ್ರದ ರಾಜಕೀಯ ಹಿನ್ನೋಟ ಗಮನಿಸಿದರೆ ಇಲ್ಲಿ ಹೆಚ್ಚು ಬಾರಿ ಗೆಲುವು ಸಾಧಿಸಿರುವ ದಾಖಲೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗಿದ್ದವು. ಕ್ಷೇತ್ರದಲ್ಲಿ ನಗಣ್ಯ ಎನಿಸಿದ್ದ ಬಿಜೆಪಿಗೆ ಸುಧಾಕರ್ ಪ್ರವೇಶದ ಮೂಲಕ ಬಲ ಬಂದಿದೆ. ಈ ಎಲ್ಲ ದೃಷ್ಟಿಯಿಂದ ಮುಂದಿನ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯ ಸಾಧ್ಯತೆಯೇ ಹೆಚ್ಚಿದೆ.

ಚಿಕ್ಕಬಳ್ಳಾಪುರ 1978ರಿಂದ 2008ರವರೆಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. 2008ರ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾಯಿತು. ಆ ತರುವಾಯ ಇಲ್ಲಿ ಡಾ.ಕೆ.ಸುಧಾಕರ್ ಪ್ರಾಬಲ್ಯ ಮೆರೆದಿದ್ದಾರೆ. ಉಪಚುನಾವಣೆ ಸೇರಿದಂತೆ ಮೂರು ಬಾರಿ ಗೆಲುವು ಸಾಧಿಸಿರುವ ಅವರು, 2023ರಲ್ಲಿ ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆ ಹೊಂದಿದ್ದಾರೆ. ತಮ್ಮ ಆಡಳಿತದಿಂದ ಮಾತ್ರ ಕ್ಷೇತ್ರ ಅಭಿವೃದ್ಧಿಯಾಗಿದೆ ಎಂದು ಪ್ರತಿಪಾದಿಸುತ್ತ ‘ಮತಬೇಟೆ’ ನಡೆಸುತ್ತಿದ್ದಾರೆ.

ಜೆಡಿಎಸ್‌ನಿಂದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರು ಅಭ್ಯರ್ಥಿ. ಮೀಸಲಾತಿ ತೆರವಾದ ನಂತರ ನಡೆದ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಚ್ಚೇಗೌಡರು‌, ನಂತರದ ಎರಡು ಚುನಾವಣೆಗಳಲ್ಲಿ ಸೋತರು. 2023ರಲ್ಲಿ ಈ ಇಬ್ಬರು ಮೂರನೇ ಬಾರಿಗೆ ಎದುರಾಳಿಗಳಾಗಿ ಅಖಾಡಕ್ಕೆ ಇಳಿಯಲಿದ್ದಾರೆ.

ಕಾಂಗ್ರೆಸ್‌ನಲ್ಲಿ ಇನ್ನೂ ಅಭ್ಯರ್ಥಿಯ ಗೊಂದಲ ಮುಂದುವರಿದಿದೆ. ಸ್ಥಳೀಯರೊ ಹೊರಗಿನವರೊ ಎನ್ನುವ ಬಿರುಸು ಪಕ್ಷದಲ್ಲಿ ಚರ್ಚೆಯಲ್ಲಿದೆ. ‌ಕೆಪಿಸಿಸಿ ಸದಸ್ಯ ವಿನಯ್ ಎನ್.ಶ್ಯಾಮ್, ಮುಖಂಡರಾದ ಯಲುವಳ್ಳಿ ರಮೇಶ್, ಕೆ.ಎನ್.ರಘು, ಗಂಗರೇಕಾಲುವೆ ನಾರಾಯಣಸ್ವಾಮಿ, ಲಾಯರ್ ನಾರಾಯಣಸ್ವಾಮಿ ಪಕ್ಷದ ವೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದಾರೆ. ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಪರವಾಗಿ ಅವರ ಬೆಂಬಲಿಗರು ಅರ್ಜಿ ನೀಡಿದ್ದಾರೆ. ಒಗ್ಗೂಡಿ ಮುನ್ನಡೆಯುವ ಸವಾಲು ಕಾಂಗ್ರೆಸ್‌ಗಿದೆ. ಹೊರಗಿನ ಅಭ್ಯರ್ಥಿಗೆ ಮಣೆ ಹಾಕಿದರೆ ಕಾಂಗ್ರೆಸ್‌ನ ಒಂದು ಗುಂಪು ಜೆಡಿಎಸ್‌ನತ್ತ ಮುಖ ಮಾಡಲು ಸಿದ್ಧವಾಗಿದೆ ಎನ್ನುತ್ತವೆ ಖಚಿತ ಮೂಲಗಳು.

ಬಲ ಹೆಚ್ಚಿಸಿದ ಉಪಚುನಾವಣೆ: 2018ರ ಚುನಾವಣೆಯವರೆಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಬೆಂಬಲ ಇರಲಿಲ್ಲ. ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಸುಧಾಕರ್ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ ಸಚಿವರಾದರು. ನಂತರ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಈಗ ಇದೆಲ್ಲವೂ ಇತಿಹಾಸ. ಆದರೆ ಬಿಜೆಪಿ, ಸುಧಾಕರ್ ಮೂಲಕ ಕ್ಷೇತ್ರದಲ್ಲಿ ಅರಳಿದೆ. ಉಪಚುನಾವಣೆ ಕ್ಷೇತ್ರದ ರಾಜಕೀಯ ಲೆಕ್ಕಾಚಾರಗಳನ್ನು ಬದಲಿಸಿದೆ. ಪ್ರಭಾವಿ ಮುಖಂಡರ ಪಕ್ಷಾಂತರ ದೊಡ್ಡ ಮಟ್ಟದಲ್ಲಿಯೇ ಆಗಿದೆ. ಹಣ, ಜಾತಿ, ಪ್ರಭಾವ, ಅಧಿಕಾರ–ಈ ಎಲ್ಲವೂ ಇಲ್ಲಿ ಕೆಲಸ ಮಾಡಿವೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗೆ ತನ್ನದೇ ಕಾರ್ಯಕರ್ತರ ಪಡೆ ಮತ್ತು ಬಲವಿದೆ. ಇದಕ್ಕೆ ಜಾತಿಗಳ ಹಿನ್ನೆಲೆಯೂ ಇದೆ. ಪ್ರತಿ ಚುನಾವಣೆಯ ಸಮಯದಲ್ಲಿ ಇಲ್ಲಿ ಜಾತಿ ಕಾದ ಹೆಂಚಿನಂತೆ ಆಗುತ್ತದೆ. ಅಭಿವೃದ್ಧಿಯ ಚರ್ಚೆಯ ಜತೆಗೆ ಮತಗಳನ್ನು ಒಗ್ಗೂಡಿಸಲು ಮತ್ತು ಮತ ವಿಭಜನೆಗೆ ‘ಜಾತಿ’ ಪ್ರಮುಖ ಅಸ್ತ್ರವೂ ಆಗುತ್ತದೆ.

ಒಕ್ಕಲಿಗರು ಮತ್ತು ಪರಿಶಿಷ್ಟ ಜಾತಿಯ ಮತದಾರರು ಸಮ ಪ್ರಮಾಣದಲ್ಲಿರುವ ಕ್ಷೇತ್ರದಲ್ಲಿ ಬಲಿಜಿಗ ಸಮುದಾಯವೂ ಗಣನೀಯವಾಗಿದೆ. ಪರಿಶಿಷ್ಟ ಪಂಗಡ, ಕುರುಬರು ಮತ್ತು ಮುಸ್ಲಿಮರು ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ.

ಅಭಿವೃದ್ಧಿಯ ವಿಷಯ, ನಾಯಕರ ಒಳ ಬೇಗುದಿ, ಪಕ್ಷಾಂತರ, ಜಾತಿಗಳ ಧ್ರುವೀಕರಣ, ಹರಿಯುವ ಹಣ ಹೊಳೆ, ಭ್ರಷ್ಟಾಚಾರ, ಮತದಾರರ ಖರೀದಿ, ಸಜ್ಜನ ವ್ಯಕ್ತಿತ್ವ, ಪ್ರಾಮಾಣಿಕತೆ–ಹೀಗೆ ನಾನಾ ವಿಷಯಗಳು 2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ‘ದಾಳ’ಗಳಾಗುತ್ತವೆ.

***

ಮತದಾರರ ಸಂಖ್ಯೆ

ಪುರುಷರು: 1,00,902
ಮಹಿಳೆಯರು: 1,03,321

ಒಟ್ಟು: 2,04,223

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT