ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಕೋವಿಡ್-19ಗೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ

ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕೊಠಡಿ ಉದ್ಘಾಟನೆ
Last Updated 19 ಜೂನ್ 2020, 13:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರಾಜ್ಯದಲ್ಲಿ ಕೋವಿಡ್ ಕಾಯಿಲೆಯನ್ನು ಸಮರ್ಪಕವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಒದಗಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಮಾರ್ಗಸೂಚಿ ಕೂಡ ಸಿದ್ಧಪಡಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರ ನೂತನ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಶೇ 90ರಷ್ಟು ಜನರಲ್ಲಿ ಯಾವುದೇ ರೀತಿಯ ಕಾಯಿಲೆಯ ಲಕ್ಷಣಗಳು ಕಾಣಿಸದಿರುವುದು, ಕೋವಿಡ್‌ ಕೂಡ ಅಷ್ಟಾಗಿ ದುಷ್ಪರಿಣಾಮ ಬೀರದಿರುವುದು ನಮಗೆ ಸಮಾಧಾನ ತಂದಿದೆ. ಆದರೂ, 60 ವರ್ಷ ದಾಟಿದವರು, ಮಕ್ಕಳು, ಇತರೆ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಜೋಪಾನವಾಗಿ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಇತರ ರೋಗಗಳು ಇದ್ದವರಿಗೆ ಕೊರೊನಾ ಸೋಂಕು ತಗುಲಿದರೆ ಸಾಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಅಂತಹವರಿಗೆ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕು. ಕೋವಿಡ್‌ ಮೇಲೆ ನಿರಂತರ ನಿಗಾ ನಿಟ್ಟು ಹೊಸ ಹೊಸ ಮಾರ್ಗಸೂಚಿ ನೀಡುತ್ತಿದ್ದೇವೆ. ಕೋವಿಡ್‌ ಸೋಂಕಿತರಿಗಾಗಿಯೇ ವಿಶೇಷ ಕಾಳಜಿ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ’ ಎಂದರು.

‘ಈ ಹಿಂದೆ ಎಚ್‌ಐವಿ ಬಂದಾಗ ದೇಶದಲ್ಲಿ ಅದರ ಬಗ್ಗೆ ಅರಿವು ಮೂಡಿಸಲು ಎರಡು ವರ್ಷ ಬೇಕಾಯಿತು. ಆದರೆ, ಕೋವಿಡ್‌ ವಿಚಾರದಲ್ಲಿ ದೀಪ ಅಂಟಿಸುವುದು, ಜನತಾ ಕರ್ಪ್ಯೂ, ಲಾಕ್‌ಡೌನ್‌ನಂತಹ ಕ್ರಮಗಳ ಮೂಲಕ ಪ್ರಧಾನಿ ಅವರು ಬೇಗ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಹೇಗೆ ಆರೋಗ್ಯಯುತವಾಗಿರಬೇಕು ಎಂದು ಜನರು ತಿಳಿದುಕೊಳ್ಳಬೇಕು’ ಎಂದು ಹೇಳಿದರು.

‘ಭಾರತ ಶಾಂತಿ ಬಯಸುತ್ತದೆ. ನಾವು ಎಂದಿಗೂ ಬೇರೆ ರಾಷ್ಟ್ರಗಳ ಮೇಲೆ ಕಾಲು ಕೆರೆದು ಹೋಗಿಲ್ಲ. ಆದರೆ, ಚೀನಾ ಮತ್ತು ಪಾಕಿಸ್ತಾನ ಪದೇ ಪದೇ ನಮ್ಮ ಭೂಮಿ ಅತಿಕ್ರಮಣ ಮಾಡಲು ಹವಣಿಸುತ್ತಿವೆ. ಇದನ್ನು ಉಗ್ರವಾಗಿ ಖಂಡಿಸುವೆ. ಹುತಾತ್ಮರ ಕುಟುಂಬಗಳ ಜತೆಗೆ ಇಡೀ ದೇಶದ ಜನತೆ, ಸರ್ಕಾರವಿದೆ’ ಎಂದು ತಿಳಿಸಿದರು.

ಬಳಿಕ ಸಚಿವರು ತಾಲ್ಲೂಕಿನ ಅಂಗಟ್ಟ ಕೆರೆಗೆ ಭೇಟಿ ನೀಡಿ ಎಚ್‌.ಎನ್.ವ್ಯಾಲಿ ಯೋಜನೆ ಅಡಿ ಕೆರೆ ಹರಿಸುತ್ತಿರುವ ಸಂಸ್ಕರಿತ ನೀರನ್ನು ವೀಕ್ಷಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಜಿಲ್ಲಾಧಿಕಾರಿ ಆರ್.ಲತಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿ಼ಯಾ ತರನ್ನಮ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT