ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದಗಾನಹಳ್ಳಿ ಶಾಲೆಗಿಲ್ಲ ಚೆಂದದ ಸೌಲಭ್ಯ: ಮಳೆ ಬಂದರೆ ಸೋರುವ ಶಿಥಿಲ ಕೊಠಡಿಗಳು

ಶಿವಕುಮಾರ್ ಎನ್.ವಿ
Published 10 ಜೂನ್ 2024, 7:30 IST
Last Updated 10 ಜೂನ್ 2024, 7:30 IST
ಅಕ್ಷರ ಗಾತ್ರ

ಸಾದಲಿ: ಮೂಲ ಸೌಲಭ್ಯಗಳ ಕೊರತೆಯ ಕಾರಣದಿಂದ ಪೋಷಕರು ಸರ್ಕಾರಿ ಶಾಲೆಗಳಿಂದ ವಿಮುಖವಾಗುತ್ತಿದ್ದಾರೆ. ಈ ಶಾಲೆಗಳಿಂದ ಮಕ್ಕಳನ್ನು ದಾಖಲಿಸಲು ಮುಂದಾಗುತ್ತಿಲ್ಲ. ಅಲ್ಲೊಂದು ಇಲ್ಲೊಂದು ಶಾಲೆಗಳು ಮಾತ್ರ ಮೂಲಸೌಕರ್ಯಗಳನ್ನು ಹೊಂದಿವೆ. 

ಹೀಗೆ ಸೌಲಭ್ಯಗಳಿಲ್ಲದೆ ನರಳುತ್ತಿದೆ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದಗಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಮೂರು ಕೊಠಡಿಗಳು ಮತ್ತು ಅಡುಗೆಕೋಣೆ ಇದ್ದು ಎಲ್ಲಾ ಕೊಠಡಿಗಳು ಶಿಥಿಲವಾಗಿವೆ. ಮಳೆ ಬಂದಾಗ ಸೋರುತ್ತಿದೆ. ನೀರು ಸೋರುತ್ತಿರುವ ಕೊಠಡಿಯಲ್ಲಿಯೇ ಮಕ್ಕಳಿಗೆ ಪಾಠಗಳು ನಡೆಯುತ್ತಿವೆ.

ಅಡುಗೆಕೋಣೆಯು ಸೋರುತ್ತಿದೆ. ಕೋಣೆಯಲ್ಲಿ ನೀರು ನಿಂತಿದೆ. ಗೋಡೆಗಳು ಬೀಳುವ ಸ್ಥಿತಿಯಲ್ಲಿವೆ. ಅದರಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದೆ. ಶಾಲೆಯ ಆವರಣದಲ್ಲಿ ಶೌಚಾಲಯ ಇಲ್ಲದೆ ಮಕ್ಕಳು ಶೌಚಾಲಯಕ್ಕೆ ಹೋಗಲು ಪರದಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಚಂದಗಾನಹಳ್ಳಿ ಶಾಲೆಯನ್ನು ಚಂದಗಾಣಿಸಬೇಕು ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಅವರದ್ದು ಅರಣ್ಯ ರೋದನ ಎನಿಸಿದೆ. 

ಶಾಲೆಯಲ್ಲಿ 14 ಮಕ್ಕಳು ಕಲಿಯುತ್ತಿದ್ದಾರೆ. ಮಳೆ ಬಂದಾಗ ಪಾಠಕ್ಕೆ, ಬಿಸಿಯೂಟಕ್ಕೆ ಸಮಸ್ಯೆ ಆಗುತ್ತಿದೆ.

‘ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಗಳು ಸೋರುತ್ತಿವೆ. ತರಗತಿಗಳನ್ನು ಇಲ್ಲಿ ನಡೆಸಲು ಅನನುಕೂಲವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದಷ್ಟು ಬೇಗ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಗ್ರಾಮದ ನಿವಾಸಿ ನಾಗೇಶ್ ಆಗ್ರಹಿಸುವರು.

‘ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಗಳು, ಅಡುಗೆ ಕೋಣೆ ಸೋರುತ್ತಿದ್ದು ಗೋಡೆಗಳು ಮಳೆಗೆ ನೆನೆದು ಬೀಳುವ ಹಂತದಲ್ಲಿವೆ. ಶಾಲೆಯ ಆವರಣದಲ್ಲಿ ಶೌಚಾಲಯದ ಕೊರತೆ ಇದೆ. ಮಕ್ಕಳು ಶೌಚಾಲಯಕ್ಕೆ ಹೋಗಲು ಪರದಾಡುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ನಾರಾಯಣಸ್ವಾಮಿ ತಿಳಿಸಿದರು.

‘ನಾನು ಹಿಂದೆ ಚಂದಗಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದೆ. ಕೊಠಡಿಗಳ ಸಮಸ್ಯೆ ಇರುವುದು ನಿಜ. ಆದರೆ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಅದನ್ನು ದುರಸ್ತಿ ಮಾಡುವಷ್ಟು ಹಣ ಇಲ್ಲ. ನಾನು ಗ್ರಾಮ ಪಂಚಾಯಿತಿಯಿಂದ ಶೌಚಾಲಯ ದುರಸ್ತಿ ಮಾಡಿಸುತ್ತೇನೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ತಿಳಿಸಿದರು.

ಶಾಲೆಯಲ್ಲಿನ ಮೂಲ ಸೌಲಭ್ಯಗಳ ಕುರಿತು ಸುಮಾರು ಒಂದು ವರ್ಷದಿಂದ ಗ್ರಾಮ ಪಂಚಾಯಿತಿಯ ಸಭೆಗಳಲ್ಲಿ ತಿಳಿಸುತ್ತಿದ್ದೇನೆ ಆದರೆ ಇದುವರೆಗೂ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ಶಾಲೆಯ ಮುಖ್ಯ ಶಿಕ್ಷಕ ವೆಂಕಟರಮಣಪ್ಪ ತಿಳಿಸಿದರು.

ಸೂಕ್ತ ಸೌಲಭ್ಯಗಳು ಇಲ್ಲದ ಕಾರಣ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಮುಂದಾಗುತ್ತಿಲ್ಲ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಚಂದಗಾನಹಳ್ಳಿ ಶಾಲೆಯ ಸ್ಥಿತಿ ನೀಡಿದರೆ ಈ ಯೋಜನೆಗಳು ಆಭಾಸವಾಗಿ ಕಾಣುತ್ತವೆ.

ಸಾದಲಿ ಹೋಬಳಿಯ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ಚಂದಗಾನಹಳ್ಳಿ ಗ್ರಾಮದ ಸರ್ಕಾರಿ ಶಾಲೆ 
ಸಾದಲಿ ಹೋಬಳಿಯ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ಚಂದಗಾನಹಳ್ಳಿ ಗ್ರಾಮದ ಸರ್ಕಾರಿ ಶಾಲೆ 

ಪರಿಶೀಲಿಸಿ ವರದಿ ಸಲ್ಲಿಕೆ

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ದುರಸ್ತಿಗೆ ಬಂದಿರುವ ಮತ್ತು ಶಿಥಿಲವಾಗಿರುವ ಶಾಲೆಗಳ ಪಟ್ಟಿ ಮಾಡಲು ಶಾಸಕರು ತಿಳಿಸಿದ್ದಾರೆ ಅದರಂತೆ ಸೋಮವಾರ ಚಂದಗಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ನಂತರ ವರದಿ ಸಲ್ಲಿಸುತ್ತೇನೆ. ನರೇಂದ್ರಕುಮಾರ್ ಕ್ಷೇತ್ರ ಶಿಕ್ಷಣಾಧಿಕಾರಿ ಶಿಡ್ಲಘಟ್ಟ ಯಾರೂ ಗಮನಹರಿಸಿಲ್ಲ ಶಾಲೆಯ ಕೊಠಡಿಗಳು ಶೌಚಾಲಯ ಮತ್ತು ಅಡುಗೆಕೋಣೆ ದುರಸ್ತಿ ಮಾಡಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿಗೆ ತಿಳಿಸಲಾಗಿತ್ತು. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದರು. ಆದರೆ ಇದುವರೆಗೂ ಯಾರು ಇತ್ತ ಗಮನ ಹರಿಸುತ್ತಿಲ್ಲ. ಶಾಲೆ ಪ್ರಾರಂಭವಾಗಿ ಒಂದು ವಾರ ಕಳೆದಿದೆ. ಮಳೆ ಬಂದಾಗ ಶಾಲೆ ಸೋರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಶಾಲೆ ಕಟ್ಟಡಗಳು ದುರಸ್ತಿಮಾಡಿಸಿ ಕೊಡಬೇಕು. ಅಶೋಕ್ ಎಸ್‌ಡಿಎಂಸಿ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT