ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟದ ಕೊರತೆ; ಪ್ರತಿಭಟನೆ

ತರಬೇತಿಯಲ್ಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಆಕ್ರೋಶ
Last Updated 23 ಫೆಬ್ರುವರಿ 2021, 4:36 IST
ಅಕ್ಷರ ಗಾತ್ರ

ಚಿಂತಾಮಣಿ: ಗ್ರಾಮ ಪಂಚಾಯಿತಿ ಸದಸ್ಯರಿಗೆ ನಡೆಯುತ್ತಿರುವ ನಗರದಲ್ಲಿ ನಡೆಯುತ್ತಿರುವ ಸಾಮರ್ಥ್ಯಾಭಿವೃದ್ಧಿ ತರಬೇತಿಯಲ್ಲಿ ಉತ್ತಮ ಗುಣಮಟ್ಟ ಹಾಗೂ ಎಲ್ಲ ಸದಸ್ಯರಿಗೂ ಸಮರ್ಪಕವಾಗಿ ಊಟ ದೊರೆಯುತ್ತಿಲ್ಲ ಎಂದು ಸೋಮವಾರ ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಪೆರಮಾಚನಹಳ್ಳಿ, ಉಪ್ಪರಪೇಟೆ, ದೊಡ್ಡಗಂಜೂರು ಗ್ರಾಮ ಪಂಚಾಯತಿಗಳ ಸುಮಾರು 80 ಜನರು ಸೋಮವಾರ ತರಬೇತಿಗೆ ತರಬೇತಿಗೆ ಹಾಜರಾಗಿದ್ದರು. ತರಬೇತಿಯಲ್ಲಿ ಎರಡು ಹೊತ್ತು ಕಾಫಿ, ಟೀ, ಬಿಸ್ಕತ್ ಹಾಗೂ ಮಧ್ಯಾಹ್ನ ಊಟಕ್ಕಾಗಿ ಪ್ರತಿದಿನ ತಲಾ ₹100 ಸರ್ಕಾರದಿಂದ ನೀಡಲಾಗುತ್ತಿದೆ. ಆದರೂ ಸಮರ್ಪಕವಾಗಿ ಊಟ ದೊರೆಯುತ್ತಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಸೋಮವಾರ ಅನ್ನದ ಗುಣಮಟ್ಟ ತೀರ ಕೆಟ್ಟದಾಗಿತ್ತು. ತಿನ್ನಲು ಯೋಗ್ಯವಾಗಿರಲಿಲ್ಲ ಹಾಗೂ ಸುಮಾರು 20 ಜನರಿಗೆ ಊಟದ ಕೊರತೆಯಾಗಿದೆ. ಹೋಟೆಲ್‌ಗಳನ್ನು ಹುಡುಕಿಕೊಂಡು ಹೋಗಿ ಊಟ ಮಾಡಬೇಕಾಯಿತು. ಊಟ ಇಲ್ಲ ಎಂದು ತಿಳಿಸಿದ್ದರೆ ನಾವೇ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ನಮ್ಮ ನಮ್ಮ ಗ್ರಾಮ ಪಂಚಾಯಿತಿಗಳಲ್ಲೇ ತರಬೇತಿ ನೀಡಿದರೆ ಊಟದ ವ್ಯವಸ್ಥೆ ಮಾಡುವ ಅವಶ್ಯಕತೆಯೇ ಇರಲಿಲ್ಲ’ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಸ್ಥಳಕ್ಕೇ ಬಂದು ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ‘ಸರ್ಕಾರಿ ಕಾರ್ಯಕ್ರಮದ ನಿಮಿತ್ತ ತೆರಳಿದ್ದೆ. ತಮ್ಮ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ನಾಳೆಯಿಂದಲೇ ವ್ಯವಸ್ಥೆಯನ್ನು ಸರಿಪಡಿಸಲಾಗುವುದು’ ಎಂದು ಸದಸ್ಯರನ್ನು ಸಮಾಧಾನಪಡಿಸಿ ತರಬೇತಿಗೆ ಕಳುಹಿಸಿದರು.

‘ನೀವು ದೂರು ನೀಡಿ ಸರಿಪಡಿಸದಿದ್ದರೆ ನಮ್ಮ ಕರ್ತವ್ಯ ಲೋಪವಾಗುತ್ತದೆ. ನಾಳೆಯಿಂದಲೇ ಇಂತಹ ಸಮಸ್ಯೆ ಇರುವುದಿಲ್ಲ’ ಎಂದು ಭರವಸೆ ನೀಡಿದರು.

‘ಪ್ರತಿನಿತ್ಯ ತರಬೇತಿಗೆ ಬರುವ ಸದಸ್ಯರ ಸಂಖ್ಯೆಗಿಂತ 20-25 ಹೆಚ್ಚಿನ ಜನರಿಗೆ ಊಟದ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಆದರೂ ಈ ರೀತಿ ಆಗಿರುವುದು ನೋವಿನ ಸಂಗತಿ’ ಎಂದು ಮಂಜುನಾಥ್ ಸಹ ಅಸಮಾಧಾನ ವ್ಯಕ್ತಪಡಿಸಿದರು.

ತರಬೇತಿಗೆ ಬಂದ ಮಹಿಳಾ ಸದಸ್ಯರ ಗಂಡಂದಿರು ಹಾಗೂ ಹೊರಗಡೆಯವರು ಊಟಕ್ಕೆ ಬಂದಿದ್ದರಿಂದ ಸಮಸ್ಯೆಯಾಗಿದೆ ಎಂದು ಕೆಲವು ಅಧಿಕಾರಿಗಳು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT