ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲಕ್ಕೆ ದೇಣಿಗೆಗೆ ಹಣ ಕೊರತೆ: ದಲಿತ ಮಹಿಳೆ ಶವಸಂಸ್ಕಾರಕ್ಕೆ ಅಡ್ಡಿ!

Published 28 ಏಪ್ರಿಲ್ 2024, 19:34 IST
Last Updated 28 ಏಪ್ರಿಲ್ 2024, 19:34 IST
ಅಕ್ಷರ ಗಾತ್ರ

ಗೌರಿಬಿದನೂರು: ದೇಗುಲಕ್ಕೆ ₹25 ಸಾವಿರ ದೇಣಿಗೆ ನೀಡಲಿಲ್ಲ ಎಂದು ಪರಿಶಿಷ್ಟ ಮಹಿಳೆ ಶವಸಂಸ್ಕಾರಕ್ಕೆ ಅವಕಾಶ ನೀಡದ ಘಟನೆಯೊಂದು ಭಾನುವಾರ ಪಟ್ಟಣದಲ್ಲಿ ನಡೆದಿದೆ.

ಮೃತಳ ಸಂಬಂಧಿಕರು ₹6 ಸಾವಿರ ಸಾಲ ತಂದು ದೇವಸ್ಥಾನಕ್ಕೆ ಒಪ್ಪಿಸಿದ ನಂತರವಷ್ಟೇ ಸಮುದಾಯದ ಮುಖಂಡರು ಶವಸಂಸ್ಕಾರಕ್ಕೆ ಅವಕಾಶ ನೀಡಿದ್ದಾರೆ.

ಪಟ್ಟಣದ 26ನೇ ವಾರ್ಡ್‌ ಗೊಟಕನಾಪುರದಲ್ಲಿ ಆದಿ ಕರ್ನಾಟಕ ಸಮುದಾಯದ ಹನುಮಕ್ಕ ಮೃತಪಟ್ಟಿದ್ದರು. ಶವಸಂಸ್ಕಾರಕ್ಕೆ ಸಂಪ್ರದಾಯದಂತೆ ಗೊಟಕನಾಪುರದ ಸತ್ಯಮ್ಮ ದೇವತೆ ದೇವಸ್ಥಾನಕ್ಕೆ ₹25 ಸಾವಿರ ದೇಣಿಗೆ ನೀಡಬೇಕು ಎಂದು ಸಮುದಾಯದ ಹಿರಿಯರು ಹೇಳಿದರು.

‘ತಮ್ಮ ಬಳಿ ಹಣವಿಲ್ಲ’ ಮೃತಳ ಕುಟುಂಬದವರು ಬೇಡಿಕೊಂಡರು ಮುಖಂಡರು ಸೊಪ್ಪು ಹಾಕಲಿಲ್ಲ. ಇದರಿಂದ ಮಧ್ಯಾಹ್ನ 12ರವರೆಗೂ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಬಳಿಕ ₹ 6 ಸಾವಿರ ಹೊಂದಿಸಿ ನೀಡಿದ ಬಳಿಕವಷ್ಟೇ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಟ್ಟರು.

‘ಮೊದಲಿನಿಂದಲೂ ನಾವು ಒಗ್ಗಟ್ಟಾಗಿ ಇದ್ದೇವೆ. ವರ್ಷಗಳಿಂದ ಇದೇ ರೀತಿ, ರಿವಾಜು ಪಾಲಿಸುತ್ತಿದ್ದೇವೆ. ಈಗ ಚಂದಾ ಕೊಡದಿದ್ದರೆ ಹೇಗೆ’ ಎಂದು ಆದಿ ಕರ್ನಾಟಕ ಸಂಘದ ಮುಖಂಡ ಗಂಗಯ್ಯ ಪ್ರಶ್ನಿಸಿದರು.

‘ಹಣ ಇರುವವರು, ಇಲ್ಲದವರೂ ಇರುತ್ತಾರೆ. ಇಂತ ಮೂಢನಂಬಿಕೆ ಬಗ್ಗೆ ಇಂದಿಗೂ ಅರಿವು ಮೂಡಲಿಲ್ಲ ಎಂದರೆ ಹೇಗೆ?’ ಎಂದು ಮೃತಳ ಪುತ್ರಿ ಮಂಜುಳಾ ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

ಈ ಬೆಳವಣಿಗೆ ಕುರಿತ ವಿಡಿಯೊ ಮತ್ತು ಆಡಿಯೊ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದ್ದವು. ಅದರ ಹಿಂದೆಯೇ, ಸಮುದಾಯ ಮತ್ತು ರಾಜಕೀಯ ಮುಖಂಡರು ವಿವಾದ ತಣ್ಣಗಾಗಿಸಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT