ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಪ್ರಕರಣ ದಾಖಲಿಸದೆ ಕಳ್ಳರನ್ನು ಬಿಟ್ಟರು!

ಆರೋಪಿಗಳನ್ನು ಬಂಧಿಸಿ, ಲಾರಿ ಜಪ್ತಿ ಮಾಡಿದರೂ ಎಫ್‌ಐಆರ್‌ ದಾಖಲಿಸದ ಗ್ರಾಮಾಂತರ ಠಾಣೆ ಎಸ್‌ಐ, ಭ್ರಷ್ಟಾಚಾರದ ಶಂಕೆ
Last Updated 6 ಮೇ 2020, 3:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಟೈರ್‌ ಕಳ್ಳತನವನ್ನೇ ಕಾಯಕ ಮಾಡಿಕೊಂಡ ಆರೋಪಿಗಳನ್ನು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದ ಗ್ರಾಮಾಂತರ ಠಾಣೆ ಪೊಲೀಸರು ದೊಡ್ಡ ಮೊತ್ತದ ಲಂಚ ಪಡೆದು ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ ಎಂಬ ಆರೋಪ ಇಲಾಖೆ ವಲಯದಲ್ಲೇ ವ್ಯಕ್ತವಾಗುತ್ತಿದೆ.

ಟೈರ್‌ ಕಳ್ಳತನ ಪ್ರಕರಣವೊಂದರಲ್ಲಿ ಏಪ್ರಿಲ್‌ 1 ರಂದು ಲಾರಿಯೊಂದನ್ನು (KA-40,A-8858) ವಶಕ್ಕೆ ಪಡೆದ ಪೊಲೀಸರು, ಒಂದು ತಿಂಗಳು ಲಾರಿ ತಮ್ಮ ಸುರ್ಪದಿಯಲ್ಲಿದ್ದರೂ ಎಫ್‌ಐಆರ್‌ ದಾಖಲಿಸದೆ ಇರುವುದು ಆರೋಪಗಳಿಗೆ ಪುಷ್ಟಿ ನೀಡುವಂತಿದೆ.

ಈ ನಡುವೆ ಗ್ರಾಮಾಂತರ ಠಾಣೆ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸಿ ತಂದು, ಠಾಣೆಯಲ್ಲಿ ನಾಲ್ಕು ದಿನ ಇಟ್ಟುಕೊಂಡು ಯಾವುದೇ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ’ಪ್ರಜಾವಾಣಿ‘ಗೆ ಲಭ್ಯವಾಗಿದೆ.

ಏನಿದು ಪ್ರಕರಣ?

ತಾಲ್ಲೂಕಿನ ಮರಸನಹಳ್ಳಿ ನಿವಾಸಿ ಅಶೋಕ್‌ ಎಂಬುವರು ತಮ್ಮ ಲಾರಿಯ ಟೈರ್‌ಗಳು ಕಳ್ಳತನವಾಗಿರುವ ಬಗ್ಗೆ ಮಾರ್ಚ್‌ ತಿಂಗಳ ಎರಡನೇ ವಾರದಲ್ಲಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಮುಖ ಆರೋಪಿ, ಲಾರಿ ಚಾಲಕ ರಾಮಗಾನಪರ್ತಿ ನಿವಾಸಿ ಶ್ರೀನಿವಾಸ್‌ ಮತ್ತು ಪೈಲಗುರ್ಕಿ, ರಾಮದೇವನಗುಡಿ, ಹೊಸಹೂಡ್ಯ ಮೂಲದ ರಮೇಶ್‌, ರಾಮಾಂಜಿ, ಶಾಂತಮೂರ್ತಿ ಎಂಬುವರನ್ನು ಬಂಧಿಸಿ, ಠಾಣೆಗೆ ಕರೆತಂದಿದ್ದರು ಎನ್ನಲಾಗಿದೆ.

ಆರೋಪಿಗಳನ್ನು ಪೊಲೀಸರು ನಾಲ್ಕು ದಿನ ಗ್ರಾಮಾಂತರ ಠಾಣೆಯಲ್ಲಿ ಇರಿಸಿಕೊಂಡು, ಮಾರ್ಚ್‌ 23 ರಂದು ಯಾವುದೇ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಆರೋಪಿಗಳಿಂದ ದೊಡ್ಡ ಮೊತ್ತದ ಹಣ ಗ್ರಾಮಾಂತರ ಠಾಣೆಯ ಸಿಬ್ಬಂದಿ ಸಂದಾಯವಾಗಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ.

ಬಳಿಕ ಕಳ್ಳತನಕ್ಕೆ ಆರೋಪಿಗಳು ಬಳಸುತ್ತಿದ್ದ ವರದನಾಯಕನಹಳ್ಳಿ ನಿವಾಸಿ ಸಂತೋಷಗೌಡ ಅವರಿಗೆ ಸೇರಿದ ಲಾರಿಯನ್ನು ಗ್ರಾಮಾಂತರ ಠಾಣೆ ಕಾನ್‌ಸ್ಟೆಬಲ್‌ ಹರೀಶ್‌ ಅವರು ಏಪ್ರಿಲ್ 1 ರಂದು ಜಪ್ತಿ ಮಾಡಿದ್ದರು.

ಲಾರಿಯ ಮೇಲಾಗಲಿ, ಅದರ ಮಾಲೀಕನ ಮೇಲಾಗಲಿ ಒಂದು ತಿಂಗಳಿಂದ ಪೊಲೀಸರು ಪ್ರಕರಣ ದಾಖಲಿಸದೆ, ಆ ಲಾರಿಯನ್ನು ಸೋಮವಾರದವರೆಗೂ (ಮೇ 4) ನಗರ ಪೊಲೀಸ್‌ ಠಾಣೆ ಆವರಣದಲ್ಲಿ ನಿಲ್ಲಿಸಿಕೊಂಡಿರುವುದು ಭ್ರಷ್ಟಾಚಾರದ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ಕಳ್ಳರನ್ನು ಹಿಡಿದರೂ ಯಾವುದೇ ಕ್ರಮ ಜರುಗಿಸದೆ ಬಿಟ್ಟು ಕಳುಹಿಸಿರುವ ಪೊಲೀಸ್‌ ಅಧಿಕಾರಿಗಳ ನಡೆ ಇದೀಗ ಸಂಶಯಕ್ಕೆ ಎಡೆ ಮಾಡಿ, ಇಲಾಖೆಯ ವಲಯದಲ್ಲಿಯೇ ಚರ್ಚೆ ಹುಟ್ಟು ಹಾಕಿದೆ.

ರಾಜೀ ಸಂಧಾನದ ಕಥೆ

ಈ ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸ್‌ ಠಾಣೆಯ ಎಸ್‌ಐ ಚೇತನಗೌಡ ಮತ್ತು ಮೂರು ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಪಾತ್ರವಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಈ ಬಗ್ಗೆ ಚೇತನಗೌಡ ಅವರನ್ನು ಪ್ರಶ್ನಿಸಿದರೆ, 'ಮರಸನಹಳ್ಳಿ ನಿವಾಸಿ ಅಶೋಕ್‌ ಎಂಬುವರುಟೈರ್‌ ಕಳ್ಳತನದ ಬಗ್ಗೆ ನೀಡಿದ ದೂರಿನ ಮೇಲೆ ಲಾರಿ ಚಾಲಕ ರಾಮಗಾನಪರ್ತಿ ನಿವಾಸಿ ಶ್ರೀನಿವಾಸ್‌ ಅವರನ್ನು ಬಂಧಿಸಿದ್ದೆವು. ಕದ್ದ ಟೈರ್‌ ಅಳವಡಿಸಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದೆವು. ದೂರುದಾರರು ಮತ್ತು ಆರೋಪಿ ರಾಜೀ ಸಂಧಾನ ಮಾಡಿಕೊಂಡ ಕಾರಣಕ್ಕೆ ಪ್ರಕರಣ ದಾಖಲಿಸಿಲ್ಲ‘ ಎಂದು ತಿಳಿಸಿದರು.

‘ಇಂತಹ ಪ್ರಕರಣಗಳಲ್ಲಿ ರಾಜೀ ಸಂಧಾನಕ್ಕೆ ಅವಕಾಶವಿದೆಯೇ’ ಎಂಬ ಪ್ರಶ್ನೆಗೆ ಎಸ್‌ಐ, ‘ಕಾನೂನಿನಲ್ಲಿ ಅವಕಾಶವಿಲ್ಲ. ಮಾನವೀಯತೆ ದೃಷ್ಟಿಯಿಂದ ಬಿಟ್ಟಿದ್ದೇವೆ’ ಎಂದು ಸಮಜಾಯಿಷಿ ನೀಡಿದರು.

ಮುಚ್ಚಿ ಹಾಕಲು ಸಚಿವರ ಪ್ರಭಾವ

ಗ್ರಾಮಾಂತರ ಠಾಣೆ ಸಿಬ್ಬಂದಿ ನಡೆಸಿದ್ದಾರೆ ಎನ್ನಲಾಗಿದೆ ಅಕ್ರಮ ಇಲಾಖೆ ವಲಯದಲ್ಲಿಯೇ ಚರ್ಚೆಗೆ ಎಡೆ ಮಾಡುತ್ತಿದ್ದಂತೆ ಡಿವೈಎಸ್ಪಿ ರವಿಶಂಕರ್‌ ಅವರು ಈ ಪ್ರಕರಣ ಕುರಿತಂತೆ ವಿಚಾರಣೆಗೆ ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಪ್ರಭಾವಿ ಸಚಿವರೊಬ್ಬರು ಪ್ರಕರಣ ಮುಚ್ಚಿ ಹಾಕುವಂತೆ ಒತ್ತಡ ಹೇರಿದ್ದರು ಎಂದು ತಿಳಿದು ಬಂದಿದೆ.

***

ಇದು ಇಲಾಖೆಯ ಆಂತರಿಕ ವಿಚಾರ. ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗೆ ವರದಿ ನೀಡಿದ್ದೇವೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುತ್ತೇವೆ.

-ರವಿಶಂಕರ್, ಡಿವೈಎಸ್ಪಿ

***

ಕಳ್ಳತನ ಪ್ರಕರಣದಲ್ಲಿ ದೂರು ದಾಖಲಿಸದೆ ಕರ್ತವ್ಯಲೋಪ ತೋರಿದ ಪ್ರಕರಣದ ತನಿಖೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ.

-ಜಿ.ಕೆ.ಮಿಥುನ್ ಕುಮಾರ್, ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT