ಮಂಗಳವಾರ, ಜನವರಿ 28, 2020
25 °C
ನಗರಸಭೆ ವತಿಯಿಂದ ಅಂಗವಿಕಲರಿಗೆ ತ್ರಿಚಕ್ರ ವಾಹನಗಳು ಮತ್ತು ಮನೆ ಮನೆಗೆ ಹಸಿ ತ್ಯಾಜ್ಯ ಸಂಗ್ರಹಿಸಲು ಬಿದಿರಿನ ಪೆಟ್ಟಿಗೆಗಳ ವಿತರಣೆ

ಚಿಕ್ಕಬಳ್ಳಾಪುರ; ನಗರದ ಸ್ವಚ್ಛತೆಗೆ ಪ್ರತಿಯೊಬ್ಬರ ಸಹಕಾರವಿರಲಿ: ಡಾ.ಕೆ.ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ನಗರವನ್ನು ಕೇವಲ ಅಧಿಕಾರಿಗಳಿಂದ ಮಾತ್ರವೇ ಸ್ವಚ್ಛವಾಗಿ, ಸುರಕ್ಷಿತವಾಗಿಡಲು ಸಾಧ್ಯವಿಲ್ಲ. ನಗರವನ್ನು ಅಂದವಾಗಿಟ್ಟುಕೊಳ್ಳುವಲ್ಲಿ ನಗರದಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರೊಂದಿಗೆ ಸಹಕರಿಸಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ನಗರಸಭೆಯಲ್ಲಿ ಸೋಮವಾರ ಆಯೋಜಿಸಿದ್ದ ನಗರಸಭೆ ವತಿಯಿಂದ ಅಂಗವಿಕಲರಿಗೆ ತ್ರಿಚಕ್ರ ವಾಹನಗಳು ಮತ್ತು ಮನೆ ಮನೆಗೆ ಹಸಿ ತ್ಯಾಜ್ಯ ಸಂಗ್ರಹಿಸಲು ಬಿದಿರಿನ ಪೆಟ್ಟಿಗೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಕಳೆದ ತ್ರೈಮಾಸಿಕ ಪ್ರಗತಿಯಲ್ಲಿ ಚಿಕ್ಕಬಳ್ಳಾಪುರ ನಗರಸಭೆ ದಕ್ಷಿಣ ಭಾರತದಲ್ಲಿ ನಾಲ್ಕನೆಯ ಮತ್ತು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಸ್ವಚ್ಛತೆಯ ವಿಚಾರದಲ್ಲಿ ಚಿಕ್ಕಬಳ್ಳಾಪುರ ನಗರವನ್ನು ದೇಶದಲ್ಲಿ ಮೊದಲ ನಗರವನ್ನಾಗಿ ಮಾಡುವ ದೊಡ್ಡ ಆಶಯ ಇಟ್ಟುಕೊಂಡಿದ್ದೇವೆ. ಅದನ್ನು ಕಾರ್ಯರೂಪಕ್ಕೆ ತರಲು ಆಯುಕ್ತರು ಒಬ್ಬರೇ ಕೆಲಸ ಮಾಡಿದರೆ ಸಾಲದು. ನಗರಸಭೆಯ ಪ್ರತಿಯೊಬ್ಬ ಸಿಬ್ಬಂದಿ, ಪೌರಕಾರ್ಮಿಕರು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಪ್ರಸ್ತುತ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಹಸಿ ತ್ಯಾಜ್ಯವನ್ನು ನಾಗರಿಕರು ಮನೆಯಲ್ಲಿಯೇ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಉಚಿತವಾಗಿ ಬಿದಿರಿನ ಪೆಟ್ಟಿಗೆಗಳನ್ನು ವಿತರಣೆ ಮಾಡಲಾಗುತ್ತಿದೆ. ನಾಗರಿಕರು ಹಸಿ ಕಸವನ್ನು ಮನೆಯಲ್ಲಿಯೇ ಗೊಬ್ಬರವನ್ನಾಗಿ ಪರಿವರ್ತಿಸಿಕೊಂಡು ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬಹುದು’ ಎಂದರು.

‘ಚಿಕ್ಕಬಳ್ಳಾಪುರವನ್ನು ಸುಂದರಗೊಳಿಸುವ ಕನಸನ್ನು ನಾವೆಲ್ಲ ಸೇರಿ ಸಾಕಾರಗೊಳಿಸೋಣ. ನಾನು ಮುಂಬರುವ ದಿನಗಳಲ್ಲಿ ಪ್ರತಿ ಮನೆಗೆ ಭೇಟಿ ನೀಡುತ್ತೇನೆ. ಹಸಿ ಮತ್ತು ಒಣ ಕಸ ಮನೆಯಲ್ಲಿಯೇ ಬೇರ್ಪಡಿಸಿ ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆ ಸಲಹೆ, ಸೂಚನೆ ನೀಡುವ ಕೈಪಿಡಿ ವಿತರಿಸಲಾಗುತ್ತದೆ. ಈ ಕಾರ್ಯಕ್ಕಾಗಿ ಕೆಲ ಎನ್‌ಜಿಒಗಳ ಸಹಕಾರ ಪಡೆಯುತ್ತೇವೆ. ಸದ್ಯ ತಾಲ್ಲೂಕಿನ ಪುಟ್ಟತಿಮ್ಮನಹಳ್ಳಿಯಲ್ಲಿರುವ ತಾಜ್ಯ ವಿಲೇವಾರಿ ಘಟಕದಲ್ಲಿ ವಾಸನೆ ಬರುತ್ತಿದೆ. ಅದನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಲು ಚಿಂತನೆ ನಡೆಸಿದ್ದೇವೆ’ ಎಂದು ಹೇಳಿದರು.

‘ನಗರಸಭೆಗೆ ಶೀಘ್ರದಲ್ಲಿಯೇ ಹೊಸ ಆಡಳಿತ ಮಂಡಳಿ ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ನಗರಸಭೆಯಲ್ಲಿ ತಮ್ಮ ತಂಡ ಆಯ್ಕೆಯಾದರೆ ಹೆಚ್ಚಿನ ಅಭಿವೃದ್ಧಿ ಮಾಡಲು ಅನುಕೂಲವಾಗುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿವೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ನಾಗರಿಕರು ಬಿಜೆಪಿ ಬೆಂಬಲಿತ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು. ಅಭಿವೃದ್ಧಿ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಮುಖಂಡರಾದ ಕೆ.ವಿ.ನಾಗರಾಜ್, ಅಪ್ಪಾಲು ಮಂಜು, ಮರಳಕುಂಟೆ ಕೃಷ್ಣಮೂರ್ತಿ, ಮುನಿಕೃಷ್ಣ, ಜಯಮ್ಮ, ಶ್ರೀನಿವಾಸ್, ಕೇಶವ, ನಾಗರತ್ನ ಯತೀಶ್, ಗಜೇಂದ್ರ, ಸುಬ್ರಹ್ಮಣ್ಯಾಚಾರಿ, ಮಹಾಕಾಳಿ ಬಾಬು, ರಮೇಶ್, ಯತೀಶ್, ರಾಮ್ ಕುಮಾರ್, ಮಂಜುನಾಥ್, ಸಂತೋಷ್, ಮೊಬೈಲ್ ಬಾಬು, ದೇ.ಸ.ನಂಜಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ನಗರಸಭೆ ಆಯುಕ್ತ ಡಿ.ಲೋಹಿತ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು