ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಗ್ರಾಹಕರ ನೆರವಿಗೆ ‘ಅಂಚೆ ಮಿತ್ರ’

ಲಾಕ್‌ಡೌನ್‌ ಸಮಯದಲ್ಲಿ ಸಾರ್ವಜನಿಕರ ನೆರವಿಗೆ ಮುಂದಾದ ಅಂಚೆ ಇಲಾಖೆ, ಆನ್‌ಲೈನ್‌ ಕೋರಿಕೆ ಮೂಲಕ ವಿವಿಧ ಸೇವೆ ಪಡೆಯಲು ಅವಕಾಶ
Last Updated 21 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮನೆಯಿಂದ ಹೊರಗೆ ಹೆಜ್ಜೆ ಇಡಲು ಬಿಡದ ಲಾಕ್‌ಡೌನ್‌ನಿಂದಾಗಿ ಹೇಗಪ್ಪಾ ಕೋರಿಯರ್‌ ಮಾಡುವುದು? ಅಂಚೆ ಕಚೇರಿಗೆ ಹೋಗಿ ಟಪಾಲ್‌, ಪಾರ್ಸೆಲ್‌ಗಳು ಕಳುಹಿಸುವುದು? ಅಂಚೆ ಇಲಾಖೆಯ ಉಳಿತಾಯ ಖಾತೆಯಲ್ಲಿರುವ ಹಣ ಹಿಂಪಡೆಯುವುದು? ಎಂಬ ಚಿಂತೆಯಲ್ಲಿದ್ದೀರಾ?

ಹೌದು, ಎಂದಾದರೆ ಚಿಂತೆ ಮಾಡಬೇಡಿ. ’ಅಂಚೆ ಮಿತ್ರ‘ನ ಸಹಾಯದಿಂದ ಮನೆಯಲ್ಲಿಯೇ ಕುಳಿತು ನಿಮಗೆ ಬೇಕಾದ ಅಂಚೆ ಇಲಾಖೆಯ ವಿವಿಧ ಸೇವೆಗಳನ್ನು ಆನ್‌ಲೈನ್‌ ಮೂಲಕ ವಿನಂತಿ ಸಲ್ಲಿಸಿ ಪಡೆಯಬಹುದು! ಅಚ್ಚರಿ ಎನಿಸಿದರೂ ಇದು ನಿಜ.

ದೇಶದಾದ್ಯಂತ ಕೊರೊನಾ ಸೃಷ್ಟಿಸಿದ ಭೀತಿ ಮತ್ತು ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದಾಗಿ ಜನರು ಅನುಭವಿಸುತ್ತಿರುವ ಕಷ್ಟಗಳನ್ನು ಅರಿತು, ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯು ಇತ್ತೀಚೆಗೆ ’ಅಂಚೆ ಮಿತ್ರ‘ ಎಂಬ ಅಪ್ಲಿಕೇಶನ್‌ ರೂಪಿಸಿದೆ.

ನೀವು ಈ ಸೇವೆ ಪಡೆಯಬೇಕಾದರೆ ಅಂಚೆ ಇಲಾಖೆಯ www.karnatakapost.gov.in ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿರುವ ’ಅಂಚೆ ಮಿತ್ರ‘ ಲಿಂಕ್‍ ಕ್ಲಿಕ್ಲಿಸುವ ಮೂಲಕ ಅಂಚೆ ಮಿತ್ರ ಅಪ್ಲಿಕೇಶನ್‌ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿರುವ ಸೇವಾ ವಿನಂತಿಗಳು ಎಂಬ ವಿಭಾಗ ಪ್ರವೇಶಿಸಿ ವೈದ್ಯಕೀಯ ಸೇವೆ ಹಾಗೂ ವಿಶೇಷ ತುರ್ತು ಅಗತ್ಯ ಸೇವೆಗಳನ್ನು ಪಡೆದುಕೊಳ್ಳಬಹುದು.

ಏನೆಲ್ಲ ಸೇವೆಗಳು ಲಭ್ಯ?
’ಅಂಚೆ ಮಿತ್ರ‘ ತಂತ್ರಾಂಶದ ಮೂಲಕ ನೀವು ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಲು, ರೆಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ರವಾನಿಸಲು, ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ ಪ್ರಿಮಿಯಂ ಪಾವತಿಸಲು, ಅಂಚೆ ಕಚೇರಿ ಉಳಿತಾಯ ಖಾತೆಗೆ ಮನಿ ಆರ್ಡರ್‌ ಮೊತ್ತ ಜಮೆ ಮಾಡಲು, ಖಾತೆಯಲ್ಲಿರುವ ಹಣ ಹಿಂಪಡೆಯಲು ವಿನಂತಿಸಬಹುದು.

’ಅಂಚೆ ಮಿತ್ರ‘ ತಂತ್ರಾಂಶದಲ್ಲಿ ನಿಮಗೆ ಬೇಕಾದ ಯಾವುದೇ ಸೇವೆಯ ವಿನಂತಿ ಸಲ್ಲಿಸುವಾಗ ನಿಮ್ಮ ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆ, ಅಗತ್ಯ ಮಾಹಿತಿ ಕಡ್ಡಾಯವಾಗಿ ನಮೂದಿಸಬೇಕು. ಬಳಿಕ ನಿಮ್ಮ ಈ ಕೋರಿಕೆಯ ಮೆರೆಗೆ ಅಂಚೆ ಇಲಾಖೆ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ನೀವು ಕೇಳಿದ ಸೇವೆ ಒದಗಿಸುತ್ತಾರೆ. ಈ ಸೇವೆ ಪಡೆಯಲು ನೀವು ಯಾವುದೇ ಹೆಚ್ಚುವರಿ ಹಣ ಪಾವತಿಸುವ ಅಗತ್ಯವಿಲ್ಲ.

ಇಷ್ಟೆ ಅಲ್ಲದೆ ನೀವು ಈ ತಂತ್ರಾಂಶದ ಮೂಲಕ ನಿಮಗೆ ಬಹುದಾಗಿದ್ದ ಪತ್ರ, ಪಾರ್ಸೆಲ್ ನಿರೀಕ್ಷಿಸುತ್ತಿರುವ ಬಗ್ಗೆ ಇಲಾಖೆ ಗಮನಕ್ಕೆ ತರಬಹುದು. ನಿಮ್ಮ ವಿನಂತಿಯ ಸ್ಥಿತಿಯನ್ನು ಪರಿಶೀಲಿಸುವ ಸೌಲಭ್ಯ ಕೂಡ ಒದಗಿಸಲಾಗಿದೆ.

ಮಾವಿನ ಹಣ್ಣು ಖರೀದಿಸಬಹುದು!
‘ಅಂಚೆ ಮಿತ್ರ‘ ಅಪ್ಲಿಕೇಶನ್‌ ಮೂಲಕ ಗ್ರಾಹಕರು ಮಾವಿನ ಹಣ್ಣುಗಳನ್ನು ಸಹ ಮನೆಯಲ್ಲಿಯೇ ಕುಳಿತು ಖರೀದಿಸಹುದಾಗಿದೆ. ಬೆಳೆಗಾರರಿಂದ ಖರೀದಿಸಿದ ಮಾವಿನ ಹಣ್ಣುಗಳನ್ನು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಅಂಚೆ ಸೇವೆ ಮುಖಾಂತರ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಿದ್ದು, ಸದ್ಯ ಈ ಸೇವೆ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದೆ.

ನೆನಪಿರಲಿ ಆ್ಯಪ್‌ ಅಲ್ಲ ಅಪ್ಲಿಕೇಶನ್‌
ಕರ್ನಾಟಕ ಅಂಚೆ ವೃತ್ತವು ’ಅಂಚೆ ಮಿತ್ರ‘ ಹೆಸರಿನಲ್ಲಿ ಯಾವುದೇ ಮೊಬೈಲ್ ಆ್ಯಪ್‌ ಅಭಿವೃದ್ಧಿಪಡಿಸಿಲ್ಲ. ವೆಬ್ ಅಪ್ಲಿಕೇಶನ್ ಮಾತ್ರ ಅಭಿವೃದ್ಧಿಪಡಿಸಿದೆ. ಆದ್ದರಿಂದ, ಸಾರ್ವಜನಿಕರು ಇದೇ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವ ನಕಲಿ ಆ್ಯಪ್‌ಗಳನ್ನು ಈ ಸೇವೆಗಳಿಗಾಗಿ ಬಳಸದಂತೆ ಅಂಚೆ ಇಲಾಖೆ ಗ್ರಾಹಕರಿಗೆ ವಿನಂತಿಸಿದೆ. ’ಅಂಚೆ ಮಿತ್ರ‘ ಅಪ್ಲಿಕೇಶನ್ ಅನ್ನು https://karnatakapost.gov.in/AncheMitra ಲಿಂಕ್‌ ಮೂಲಕ ಮಾತ್ರ ಪ್ರವೇಶಿಸಿ ಬಳಕೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT