ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗುವರೇ ಎಂ.ಟಿ.ಬಿ ನಾಗರಾಜ್?

‘ಇಲ್ಲಿಂದ ಆಚೆ ಆಲೋಚನೆ ಮಾಡಬೇಕು’
ಡಿ.ಎಂ.ಕುರ್ಕೆ ಪ್ರಶಾಂತ್
Published 11 ಜನವರಿ 2024, 6:03 IST
Last Updated 11 ಜನವರಿ 2024, 6:03 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎಂ.ಟಿ.ಬಿ ನಾಗರಾಜ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುವರೇ ಎನ್ನುವ ಚರ್ಚೆ ಕ್ಷೇತ್ರ ವ್ಯಾಪ್ತಿಯಲ್ಲಿ ಗರಿಗೆದರಿದೆ. 

ವಿಧಾನಸಭೆ ಚುನಾವಣೆಯ ನಂತರ ‍ಪಕ್ಷದ ವೇದಿಕೆಗಳಲ್ಲಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಾಗರಾಜ್ ಅವರು ಕಾಣಿಸಿಕೊಂಡಿಲ್ಲ. ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ನಂತರ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಉಭಯ ಮುಖಂಡರು ಮುಂದಿನ ಲೋಕಸಭಾ ಚುನಾವಣೆ ಸಮಯದಲ್ಲಿ ಪಕ್ಷ ಸಂಘಟನೆಯ ಬಗ್ಗೆ ಮಾತುಕತೆ ನಡೆಸಿದ್ದರು. ಈ ಭೇಟಿಯ ನಂತರ ಬಿಜೆಪಿ ಪಾಳಯದಲ್ಲಿ ಎಂ.ಟಿ.ಬಿ ಅವರ ಹೆಸರು ದೊಡ್ಡ ಮಟ್ಟದಲ್ಲಿಯೇ ಚರ್ಚೆಗೆ ಬಂದಿದೆ.  ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿಯೂ ಅವರು ಪಾಲ್ಗೊಂಡಿದ್ದಾರೆ. 

ನೀವು ಸಹ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೇ ಎನ್ನುವ ‘ಪ್ರಜಾವಾಣಿ’ ಪ್ರಶ್ನೆಗೆ, ‘ಇಲ್ಲಿಯವರೆಗೆ ಯಾವುದೇ ಆಲೋಚನೆ ಮಾಡಿಲ್ಲ. ಇಲ್ಲಿಂದ ಆಚೆ ಆಲೋಚನೆ ಮಾಡಬೇಕು’ ಎಂದು ಪ್ರತಿಕ್ರಿಯಿಸಿದರು. 

ಮಾಜಿ ಸಚಿವ ಡಾ.ಕೆ.ಸುಧಾಕರ್ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಮೊದಲ ಸಾಲಿನಲ್ಲಿ ಇದ್ದಾರೆ. ಬಿಜೆಪಿ ರೈತ ಮೋರ್ಚಾ ಮಾಜಿ ಉಪಾಧ್ಯಕ್ಷ ಲೋಕೇಶ್ ಗೌಡ ಮತ್ತಿತರರು ನಾವೂ ಸಹ ಟಿಕೆಟ್ ಆಕಾಂಕ್ಷಿಗಳು ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ ಸಂಪನ್ಮೂಲ, ಪಕ್ಷ ಸಂಘಟನೆ, ಪ್ರಭಾವದ ಕಾರಣದಿಂದ ಎಂ.ಟಿ.ಬಿ ನಾಗರಾಜ್ ಮತ್ತು ಸುಧಾಕರ್ ಅವರು ಹೆಸರು ಹೆಚ್ಚು ಚರ್ಚೆಯಾಗುತ್ತಿದೆ.

ಈ ಇಬ್ಬರು ಮಾಜಿ ಸಚಿವರು  ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು ಮತ್ತು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಚಿಕ್ಕಬಳ್ಳಾಪುರ ಲೋಕಸಭೆಗೆ ಒಳಪಡುತ್ತವೆ. 

ಎಂ.ಟಿ.ಬಿ ನಾಗರಾಜ್–ಸುಧಾಕರ್ ವೈಮನಸ್ಸು: ನಾಗರಾಜ್ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾಗಿದ್ದಾಗ ಮತ್ತು ಡಾ.ಕೆ.ಸುಧಾಕರ್ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾಗಿದ್ದಾಗ ಇಬ್ಬರ ನಡುವಿನ ಸಂಬಂಧ ಉತ್ತಮವಾಗಿಯೇನೂ ಇರಲಿಲ್ಲ. 

ವಿಧಾನಸಭೆ ಚುನಾವಣೆಯ ಸೋಲಿನ ನಂತರ ಈ ಮುಸುಕಿನ ಗುದ್ದಾಟ ಟ್ವೀಟರ್‌ನಲ್ಲಿ (ಎಕ್ಸ್‌) ಸ್ಫೋಟವಾಗಿತ್ತು. ಸೋಲಿನ ತರುವಾಯ ಇಬ್ಬರು  ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಸುಧಾಕರ್ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಲೋಕಸಭೆಗೆ ಅಭ್ಯರ್ಥಿಯಾಗುವರು ಎನ್ನುವ ಚರ್ಚೆ ಬಿಜೆಪಿ ಪಾಳಯದಲ್ಲಿ ಬಿರುಸಾಗಿತ್ತು. ಅವರ ಹೆಸರೇ ಹೆಚ್ಚು ಚಾಲ್ತಿಗೆ ಬರುತ್ತಿತ್ತು. ಆದರೆ ಈಗ ಎಂ.ಟಿ.ಬಿ ಅವರ ಹೆಸರು ಸಹ ಬಿರುಸು ಪಡೆದಿದೆ.

‘ಗೆಲ್ಲುವವರಿಗೆ ಟಿಕೆಟ್ ಕೊಡಿ’
‘ವಿಧಾನಸಭೆ ಚುನಾವಣೆಯ ನಂತರ ಬೇಸರವಾಗಿತ್ತು. ಎಲ್ಲಿಯೂ ಹೋಗಿಲ್ಲ. ಮನೆಯಲ್ಲಿಯೇ ಇದ್ದೆ. ಇತ್ತೀಚೆಗೆ ವಿಜಯೇಂದ್ರ ಭೇಟಿ ಮಾಡಿದ್ದರು. ಲೋಕಸಭೆ ಚುನಾವಣೆ ಬರುತ್ತಿದೆ. ಕೆಲಸ ಮಾಡಬೇಕಾಗಿದೆ ಎಂದರು. ಗೆಲ್ಲುವವರಿಗೆ ಟಿಕೆಟ್ ಕೊಡಿ ಎಂದಿದ್ದೇನೆ’ ಎಂದು ಎಂ.ಟಿ.ಬಿ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.  ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕೆ ಬೇಡವೇ ಎನ್ನುವ ಬಗ್ಗೆ ಇಲ್ಲಿಯವರೆಗೂ ತೀರ್ಮಾನ ಮಾಡಿರಲಿಲ್ಲ. ಇಲ್ಲಿಂದ ಆಚೆ ಆಲೋಚನೆ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT