ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ತಗ್ಗು ಪ್ರದೇಶ ಜಲಾವೃತ

ಬಾಗೇಪಲ್ಲಿ ತಾಲ್ಲೂಕಿನ ಅನ್ನದಾತರ ಮೊಗದಲ್ಲಿ ಸಂತಸ
Last Updated 8 ಅಕ್ಟೋಬರ್ 2021, 6:45 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಬುಧವಾರ ಸಂಜೆ ಉತ್ತಮ ಮಳೆ ಸುರಿಯಿತು. ತಗ್ಗಿನ ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಯಿತು.

ರೈತರ ಹೊಲ, ಗದ್ದೆಗಳಲ್ಲಿ ಬೆಳೆಗಳು ಇದೀಗ ತೆನೆ ಬಿಡುವ ಹಂತದಲ್ಲಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುವ ಸ್ಥಿತಿಗೆ ತಲುಪಿದ್ದವು. ಮಳೆಗಾಗಿ ರೈತರು ಕಾಯುತ್ತಿದ್ದರು. ಸಂಜೆ ಭಾರಿ ಮಳೆ ಸುರಿದಿದ್ದು ಅನ್ನದಾತರ ಮೊಗದಲ್ಲಿ ಸಂತಸ ಮೂಡಿದೆ.

ಪಟ್ಟಣದ ಮುಖ್ಯರಸ್ತೆ ಸೇರಿದಂತೆ ವಾರ್ಡ್‍ಗಳ ರಸ್ತೆಬದಿಯ ಚರಂಡಿಗಳಲ್ಲಿ ಮಳೆ ನೀರು ತುಂಬಿ ರಸ್ತೆಗಳಲ್ಲಿ ಹರಿಯಿತು. ಪಟ್ಟಣದ ವಾಲ್ಮೀಕಿ ನಗರದಿಂದ ಹರಿದು ಬಂದ ಮಳೆ ಹಾಗೂ ಚರಂಡಿ ನೀರು ಮನೆಗಳಿಗೆ ನುಗ್ಗಿದೆ. ಮಹಿಳೆಯರು, ಮಕ್ಕಳು ನೀರನ್ನು ಹೊರಹಾಕಲು ತಡರಾತ್ರಿವರೆಗೂ ಹೆಣಗಾಡಿದರು.

ಡಾ.ಎಚ್.ಎನ್. ವೃತ್ತದಲ್ಲಿ ಮಳೆ ಹಾಗೂ ಚರಂಡಿ ನೀರು ಸಮರ್ಪಕವಾಗಿ ಹರಿದುಹೋಗದೆ ಕೆರೆ ಸೃಷ್ಟಿಯಾಗಿತ್ತು. ಮೊಣಕಾಲುದ್ದಷ್ಟು ನೀರು ಸಂಗ್ರಹದಿಂದ ಜನರು ರಸ್ತೆಯಲ್ಲಿ ನಡೆಯಲು ಹರಸಾಹಸಪಟ್ಟರು.

‘ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗಿದೆ. ಇದರಿಂದ ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯವನ್ನು ಹೊರಹಾಕದೇ ಇರುವುದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಈ ಬಗ್ಗೆ ಪುರಸಭೆಯವರು ಶಾಶ್ವತವಾದ ಪರಿಹಾರ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ವೆಂಕಟರಾಮರೆಡ್ಡಿ ಒತ್ತಾಯಿಸಿದರು.

‘ರೈತರು ಬಿತ್ತನೆ ಬೀಜದ ಕಾರ್ಯ ಪೂರ್ಣಗೊಳಿಸಿದ ನಂತರ ಸೆಪ್ಟೆಂಬರ್‌ನಲ್ಲಿ ಮಳೆ ಆಗಿಲ್ಲ. ಇದರಿಂದ ತೆನೆ ಕಟ್ಟುವುದಕ್ಕೆ ತೊಂದರೆಯಾಗಿತ್ತು. ಮಳೆ ಇಲ್ಲದೆ ಬೆಳೆಗಳು ಒಣಗುವ ಹಂತ ತಲುಪಿದ್ದವು. ಹಿಂದಿನ ತಿಂಗಳು ಮಳೆಯಾಗಿದ್ದರೆ ಉತ್ತಮ ಇಳುವರಿ ಬರುತ್ತಿತ್ತು. ಇದೀಗ ಮಳೆ ಆದರೂ ಕೆಲವು ಬೆಳೆಗಳಿಗೆ ಏನೂ ಪ್ರಯೋಜನ ಇಲ್ಲ’ ಎಂದು ಸಡ್ಲವಾರಿಪಲ್ಲಿ ಗ್ರಾಮದ ರೈತ ಅಶ್ವಥ್ಥರೆಡ್ಡಿತಿಳಿಸಿದರು.

‘ತಾಲ್ಲೂಕಿನಲ್ಲಿ ಸುರಿದಿರುವ ಮಳೆಯಿಂದ ರಾಗಿ, ತೊಗರಿ ಹಾಗೂ ತಡವಾಗಿ ಬಿತ್ತನೆ ಮಾಡಿರುವ ಮುಸುಕಿನಜೋಳದ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ’ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಕೆ.ಸಿ. ಮಂಜುನಾಥ್ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT