ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಮಾಸ್ಕ್‌ ಕಡ್ಡಾಯಗೊಳಿಸಿದ ಶಾಲೆ

ಕೋವಿಡ್‌–19 ಸೋಂಕಿನ ಭಯ, ಮುಂಜಾಗ್ರತಾ ಕ್ರಮಕ್ಕೆ ಮುಂದಾದ ಆಡಳಿತ ಮಂಡಳಿ
Last Updated 5 ಮಾರ್ಚ್ 2020, 12:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಾರಣಾಂತಿಕ ಕೋವಿಡ್‌–19 ಸೋಂಕಿನ ಭಯ ಎಲ್ಲೆಡೆ ಆವರಿಸಿರುವ ನಡುವೆಯೇ ನಗರದ ಗುಡ್ ಶೆಫರ್ಡ್ ಶಾಲೆಯ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳಿಗೆ ಮುಖಗವಸು (ಮಾಸ್ಕ್‌) ಧರಿಸುವ ಜತೆಗೆ ಕೈಸ್ವಚ್ಛಗೊಳಿಸುವ ದ್ರಾವಣದೊಂದಿಗೆ (ಸ್ಯಾನಿಟೈಜರ್‌) ಶಾಲೆಗೆ ಬರುವಂತೆ ಸೂಚಿಸಿದೆ.

ಪರಿಣಾಮ, ಶಾಲೆಯಲ್ಲಿ ಒಂದರಿಂದ ಎಸ್ಸೆಸ್ಸೆಲ್ಸಿ ವರೆಗೆ ಓದುತ್ತಿರುವ ಸುಮಾರು 480 ವಿದ್ಯಾರ್ಥಿಗಳ ಪೈಕಿ ಬುಧವಾರದಿಂದ ಬಹುಪಾಲು ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿಕೊಂಡು, ಸ್ಯಾನಿಟೈಜರ್‌ ಜತೆಗೆ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

ಖಾಸಗಿ ಶಾಲೆಯ ಆಡಳಿತ ಮಂಡಳಿಯ ಈ ನಿರ್ಧಾರದಿಂದಾಗಿ ನಗರದಲ್ಲಿ ಮಾಸ್ಕ್‌ಗೆ ಬೇಡಿಕೆ ಹೆಚ್ಚಿದ್ದು, ನಗರದ ಬಹುತೇಕ ಔಷಧಿ ಮಳಿಗೆಗಳಲ್ಲಿನ ಮಾಸ್ಕ್‌ಗಳು ಖಾಲಿಯಾಗಿವೆ ಎಂದು ತಿಳಿದು ಬಂದಿದೆ.

‘ಮಕ್ಕಳಲ್ಲಿ ದೊಡ್ಡವರಿಗಿಂತಲೂ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆ ಕಾರಣಕ್ಕೆ ನಾವು ಶಾಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಶಾಲೆಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ, ಸ್ಯಾನಿಟೈಜರ್‌ ತೆಗೆದುಕೊಂಡು ಬರುವಂತೆ ತಿಳಿಸಿದ್ದೇವೆ. ಜತೆಗೆ ವೈಯಕ್ತಿಕ ಶುಚಿತ್ವ ಮತ್ತು ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳುವಳಿಕೆ ಮೂಡಿಸಿದ್ದೇವೆ’ ಎಂದು ಶಾಲೆಯ ಮುಖ್ಯಶಿಕ್ಷಕ ಜೆಮ್ಸ್ ಕ್ರಿಸ್ಟೋಫರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT