ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿ.ವಿ. ಅಂತರ್‌ ಕಾಲೇಜು ದ.ವಲಯದ ಪುರುಷರ ಕಬಡ್ಡಿ ಪಂದ್ಯಾವಳಿಗೆ ಚಾಲನೆ

Last Updated 9 ಅಕ್ಟೋಬರ್ 2018, 12:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಒಂದು ಕಾಲದಲ್ಲಿ ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ ಇವತ್ತು ಕ್ರಿಕೆಟ್‌ಗೆ ಸಮನಾಗಿ ಜನಪ್ರಿಯತೆ ಗಳಿಸಿದೆ. ಆದ್ದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳು ಹೆಚ್ಚೆಚ್ಚು ಕಬಡ್ಡಿಯಲ್ಲಿ ತೊಡಗಿಸಿಕೊಂಡು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಬೇಕು’ ಎಂದು ರಾಜ್ಯ ಅಮೆಚೂರ್ ಕಬಡ್ಡಿ ಸಂಘದ ರಾಜ್ಯದ ಘಟಕದ ಅಧ್ಯಕ್ಷ ಎಂ.ಹನುಮಂತೇಗೌಡ ಹೇಳಿದರು.

ನಗರ ಹೊರವಲಯದ ಕೆ.ವಿ.ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಅಂತರ್‌ ಕಾಲೇಜು ದಕ್ಷಿಣ ವಲಯದ ಪುರುಷರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಳ್ಳಿಯ ಸೊಗಡನ್ನು ಸೂಚಿಸುವ ಕಬಡ್ಡಿ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಸಹಾಯ ಮಾಡುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಯಾವುದಾದರೊಂದು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಅದರಿಂದ ಭವಿಷ್ಯದಲ್ಲಿ ಉತ್ತಮ ಹುದ್ದೆಗಳು ಅರಸಿ ಬರುತ್ತವೆ’ ಎಂದು ತಿಳಿಸಿದರು.

‘ಕ್ರೀಡಾಪಟುಗಳನ್ನು ಯುದ್ಧ ಕಾಲದ ಅಭ್ಯಾಸ ಬಿಟ್ಟು ನಿಯಮಿತವಾಗಿ ನಿತ್ಯ ಎರಡ್ಮೂರು ಗಂಟೆ ತಮ್ಮ ಇಷ್ಟದ ಕ್ರೀಡೆಯ ತಾಲೀಮು ನಡೆಸಬೇಕು. ನಮ್ಮ ಸಂಘದ ವತಿಯಿಂದ ಕಬಡ್ಡಿ ಆಟಗಾರರಿಗೆ ನಿತ್ಯ ಕಂಠೀರವ ಕ್ರೀಡಾಂಗಣದಲ್ಲಿ ಸಾಯಂಕಾಲ 4 ರಿಂದ 8ರ ವರೆಗೆ ತರಬೇತಿ ನೀಡಲಾಗುತ್ತದೆ. ಆಸ್ತಕರು ತರಬೇತಿಯಲ್ಲಿ ಭಾಗವಹಿಸಬಹುದು’ ಎಂದರು.

ಕೆ.ವಿ.ಮತ್ತು ಪಂಚಗಿರಿ ವಿದ್ಯಾ ದತ್ತಿ ಸಂಸ್ಥೆ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಮಾತನಾಡಿ, ‘ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತಮ್ಮೊಳಗಿನ ಪ್ರತಿಭೆಯನ್ನು ಹೊರ ಹಾಕಲು ಇಂತಹ ಪಂದ್ಯಾವಳಿಗಳು ವೇದಿಕೆಯಂತಿರುತ್ತವೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ಆಟವಾಗಿದ್ದ ಕಬಡ್ಡಿ ಪ್ರೋ ಕಬಡ್ಡಿ ಲೀಗ್‌ನಿಂದಾಗಿ ಇವತ್ತು ವೃತ್ತಿಪರ ಕ್ರೀಡೆಯಾಗಿ ಬದಲಾಗಿದೆ. ಹೀಗಾಗಿ ಇವತ್ತು ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಬೇಕಾಗಿದೆ’ ಎಂದು ಹೇಳಿದರು.

ರಾಜ್ಯ ಅಮೆಚೂರ್ ಕಬಡ್ಡಿ ಸಂಘದ ಪ್ರಧಾನ ಕಾರ್ಯದರ್ಶಿ ಎ.ಮುನಿರಾಜು ಮಾತನಾಡಿ, ‘ಇವತ್ತು ಕಾಲೇಜು ನಡೆಸಿ ದುಡ್ಡು ಮಾಡುವವರೇ ಹೆಚ್ಚಾಗಿದ್ದಾರೆ. ಅಂತಹವರ ನಡುವೆ ನವೀನ್‌ಕಿರಣ್ ಅವರು ಇಂತಹ ಪಂದ್ಯಾವಳಿ ಆಯೋಜನೆ ಮೂಲಕ ಗ್ರಾಮೀಣ ಕ್ರೀಡೆಗಳ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ನಿರ್ದೇಶನಾಲಯದ ನಿರ್ದೇಶಕ ಟಿ.ಲಿಂಗರಾಜು ಮಾತನಾಡಿ, ‘ಕಬಡ್ಡಿಯಂತಹ ಗ್ರಾಮೀಣ ಪ್ರದೇಶದ ಕ್ರೀಡೆಗಳ ಪಂದ್ಯಾವಳಿ ನಡೆಸಿದಾಗ ಹಳ್ಳಿಯ ಮಕ್ಕಳನ್ನು ನೆಲಮೂಲದ ಕ್ರೀಡೆಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಪ್ರೋ ಕಬಡ್ಡಿ ಲೀಗ್‌ ಆರಂಭವಾದ ನಂತರ ಕಬಡ್ಡಿ ಹಿಂದೆಂದಿಗಿಂತಲೂ ಹೆಚ್ಚು ಜನಪ್ರಿಯತೆ ಗಳಿಸಿದೆ’ ಎಂದು ಹೇಳಿದರು.

ಕಬಡ್ಡಿ ಆಟಗಾರ ಬಿ.ಸಿ. ಸುರೇಶ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೆ.ವಿ.ಮತ್ತು ಪಂಚಗಿರಿ ವಿದ್ಯಾ ದತ್ತಿ ಸದಸ್ಯ ಮುನಿಯಪ್ಪ, ಕೆ.ವಿ.ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್. ವೆಂಕಟೇಶ್ ಉಪಸ್ಥಿತರಿದ್ದರು. ಎರಡು ದಿನಗಳ ಈ ಪಂದ್ಯಾವಳಿಯಲ್ಲಿ 41 ತಂಡಗಳು, 500ಕ್ಕೂ ಹೆಚ್ಚು ಕ್ರೀಡಾ ಪಟುಗಳು ಹಾಗೂ 45 ಜನ ತರಬೇತುದಾರರು ಭಾಗಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT