ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಇನ್ನೂ ಆರಂಭವಾಗದ ರಾಗಿ ನೋಂದಣಿ

13 ದಿನಗಳು ಕಳೆದರೂ ಪರಿಹಾರವಾಗದ ತಾಂತ್ರಿಕ ಸಮಸ್ಯೆ; ಸಿಬ್ಬಂದಿ ನೇಮಕವೂ ಇಲ್ಲ
ಡಿ.ಎಂ.ಕುರ್ಕೆ ಪ್ರಶಾಂತ್
Published 14 ಡಿಸೆಂಬರ್ 2023, 6:35 IST
Last Updated 14 ಡಿಸೆಂಬರ್ 2023, 6:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನೋಂದಣಿ ಮಾಡಿಕೊಳ್ಳುವುದಾಗಿ ಸರ್ಕಾರ ಘೋಷಿಸಿ 13 ದಿನಗಳು ಕಳೆದಿವೆ. ಆದರೆ ಜಿಲ್ಲೆಯಲ್ಲಿ ಇನ್ನೂ ರಾಗಿ ಖರೀದಿಗೆ ನೋಂದಣಿ ಪ್ರಕ್ರಿಯೆಗಳು ಆರಂಭವಾಗಿಯೇ ಇಲ್ಲ. ತಾಂತ್ರಿಕ ಸಮಸ್ಯೆಗಳ ಕಾರಣ ನೋಂದಣಿ ಸಾಧ್ಯವಾಗಿಲ್ಲ. ಜಿಲ್ಲೆಯ ನೋಂದಣಿ ಕೇಂದ್ರಗಳಿಗೆ ಇನ್ನೂ ಸಿಬ್ಬಂದಿಯೇ ನೇಮಕವಾಗಿಲ್ಲ. 

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳವನ್ನು ಖರೀದಿ ಏಜೆನ್ಸಿಗಳಾಗಿ ಸರ್ಕಾರವು ನಿಯೋಜಿಸಿದೆ. ಈ ಪ್ರಕಾರ ಚಿಕ್ಕಬಳ್ಳಾಪುರದಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳ ಖರೀದಿ ಏಜೆನ್ಸಿಯಾಗಿದೆ.

ನೆರೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಹಾರ ನಾಗರಿಕ ಸರಬರಾಜು ನಿಗಮವು ಖರೀದಿ ಏಜೆನ್ಸಿಯಾಗಿದ್ದು ಅಲ್ಲಿನ ನೋಂದಣಿ ಕೇಂದ್ರಗಳಿಗೆ ಈಗಾಗಲೇ ಸಿಬ್ಬಂದಿ ನೇಮಕ ಮಾಡಲಾಗಿದೆ ಎನ್ನುತ್ತವೆ ಮೂಲಗಳು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ನೋಂದಣಿ ಕೇಂದ್ರಗಳಿಗೆ ಇನ್ನೂ ಸಿಬ್ಬಂದಿ ನೇಮಕವಾಗಿಲ್ಲ. ‌ಆರು ತಾಲ್ಲೂಕುಗಳಲ್ಲಿ ನೋಂದಣಿ ಕೇಂದ್ರಗಳು ಆರಂಭವಾಗಲಿದ್ದುತಲಾ ಒಬ್ಬ ನೋಂದಣಿ ಅಧಿಕಾರಿ, ಕಂಪ್ಯೂಟರ್ ಆಪರೇಟರ್ ನೇಮಿಸಬೇಕು. ಖರೀದಿಗೆ ಅಗತ್ಯವಾದ ಉಪಕರಣಗಳು ಸಹ ಬಂದಿಲ್ಲ.

ರಾಗಿ ಖರೀದಿ ನೋಂದಣಿಗೆ ಜಾಲತಾಣದಲ್ಲಿನ ತಾಂತ್ರಿಕ ತೊಂದರೆಯ ಕಾರಣ ಇನ್ನೂ ನೋಂದಣಿ ಸಾಧ್ಯವಾಗಿಲ್ಲ. ಯಾವಾಗ ಈ ಸಮಸ್ಯೆ ಪರಿಹಾರ ಆಗುತ್ತದೆ ಎನ್ನುವ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳಿಗೂ ಖಚಿತ ಮಾಹಿತಿ ಇಲ್ಲ. ನೋಂದಣಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಈ ಹಿಂದೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟಕ್ಕೆ ರೈತರು ‘ಫ್ರೂಟ್ಸ್‌’ ಐಡಿ ಸಂಖ್ಯೆ ನೀಡಿ ನೋಂದಣಿ ಮಾಡಿಸುತ್ತಿದ್ದರು. ಆ ಸಮಯದಲ್ಲಿ ನೀಡಲಾಗುವ ನಿಗದಿತ ದಿನ ರಾಗಿ ಖರೀದಿ ಕೇಂದ್ರಕ್ಕೆ ಸರಕನ್ನು ತರಬೇಕಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಪಹಣಿಯಲ್ಲಿ(ಆರ್‌ಟಿಸಿ) ಹೆಸರು ಇರುವ ರೈತರೇ ಖರೀದಿ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಬಯೊಮೆಟ್ರಿಕ್‌ ಮೂಲಕ ರಾಗಿ ಖರೀದಿಗೆ ಹೆಸರು ನೋಂದಣಿ ಮಾಡಿಸಬೇಕಿದೆ. ಈ ಹೊಸ ನಿಯಮ ಜಾರಿಯಲ್ಲಿ ತಾಂತ್ರಿಕ ತೊಂದರೆ ಎದುರಾಗಿದೆ.

ತಾಂತ್ರಿಕ ಸಮಸ್ಯೆ ಚಿಕ್ಕಬಳ್ಳಾಪುರ ಜಿಲ್ಲೆಗಷ್ಟೇ ಸೀಮಿತವಾಗಿಲ್ಲ. ರಾಜ್ಯದಲ್ಲೇ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ ಖರೀದಿ ನೋಂದಣಿ ಪ್ರಾರಂಭಕ್ಕೆ ಅಡ್ಡಿಯಾಗಿದೆ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.

ಡಿ.1ರಿಂದ ಖರೀದಿಗೆ ಸೂಚನೆ: ನ.27ರಂದು ಜಿಲ್ಲೆಯಲ್ಲಿ ರಾಗಿ ಖರೀದಿ ಕುರಿತ ಪೂರ್ವ ಸಿದ್ಧತಾ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಡಿ.1ರಿಂದ ರಾಗಿ ಖರೀದಿಗೆ ನೋಂದಣಿ ಆರಂಭವಾಗುತ್ತದೆ ಎಂದಿದ್ದರು. ಕ್ವಿಂಟಲ್ ರಾಗಿಗೆ ಸರ್ಕಾರ ₹ 3,846 ಬೆಲೆ ಸಹ ನಿಗದಿಗೊಳಿಸಿದೆ.

ಸರ್ಕಾರದ ಆದೇಶದಂತೆ 2023-24 ನೇ ಸಾಲಿನ ಮುಂಗಾರು ಋತುವಿನಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ 8 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಗುರಿ ನಿಗದಿಪಡಿಸಲಾಗಿದೆ. ನೋಂದಣಿಗೊಂಡ ರೈತರಿಂದ 2024ರ ಜ.1 ರಿಂದ ಮಾರ್ಚ್ 31 ರವರೆಗೆ ರಾಗಿ ಖರೀದಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. 

ನಡೆಯದ ಪ್ರಚಾರ: ರಾಗಿ ಖರೀದಿ ನೋಂದಣಿಗೆ ಸಂಬಂಧಿಸಿದಂತೆ ವ್ಯಾಪಕವಾದ ಪ್ರಚಾರ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಕರಪತ್ರಗಳು, ಬ್ಯಾನರ್‌ಗಳನ್ನು ಗ್ರಾಮ ಪಂಚಾಯಿತಿಗಳ ಬಳಿ, ಮಾರುಕಟ್ಟೆ ಪ್ರಾಂಗಣ, ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಸಹಾಯವಾಣಿ ಕೇಂದ್ರ ತೆರೆಯಬೇಕು ಎಂದು ಸೂಚಿಸಿದ್ದಾರೆ. ಆದರೆ ಇನ್ನೂ ನೋಂದಣಿ ಪ್ರಕ್ರಿಯೆಯೇ ಆರಂಭವಾಗದ ಕಾರಣ ಪ್ರಚಾರ ಸಹ ನಡೆಯುತ್ತಿಲ್ಲ. ಎಲ್ಲೆಯೂ ಬ್ಯಾನರ್‌ಗಳಿಲ್ಲ. 

‘ಪರಿಹಾರವಾಗದ ತಾಂತ್ರಿಕ ಸಮಸ್ಯೆ’

‘ಸಾಫ್ಟ್‌ವೇರ್ ಇನ್ನೂ ನೀಡದ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯಷ್ಟೇ ಅಲ್ಲ ರಾಜ್ಯದ ಎಲ್ಲಿಯೂ ರಾಗಿ ಖರೀದಿಗೆ ನೋಂದಣಿ ಆರಂಭವಾಗಿಲ್ಲ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕಿ ಪಿ.ಸವಿತಾ ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲೆಯ ಆರು ತಾಲ್ಲೂಕಿನ ಖರೀದಿ ಕೇಂದ್ರಗಳಿಗೆ ಸಿಬ್ಬಂದಿ ನೇಮಕವಾಗಿಲ್ಲ.  ಸಂಬಂಧಿಸಿದ ಉಪಕರಣಗಳು ಸಹ ಬಂದಿಲ್ಲ. ಸಿಬ್ಬಂದಿ ಮತ್ತು ಉಪಕರಣಗಳು ಒಂದೆರೆಡು ದಿನಗಳಲ್ಲಿ ಬರಬಹುದು ಎಂದು ತಿಳಿಸಿದ್ದಾರೆ ಎಂದರು.

ವಾಪಸ್ಸಾಗುತ್ತಿರುವ ರೈತರು

ರಾಗಿ ಖರೀದಿ ನೋಂದಣಿ ಕೇಂದ್ರಗಳಿಗೆ ನಿತ್ಯ ಭೇಟಿ ನೀಡುತ್ತಿರುವ ರೈತರು ಹೆಸರು ನೋಂದಾಯಿಸಲು ಸಾಧ್ಯವಾಗದೆ ವಾಪಸ್ಸಾಗುತ್ತಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈ ಗೊಂದಲ ಹೆಚ್ಚಿದೆ. ಆಹಾರ ಇಲಾಖೆಯ ಕಚೇರಿಗೆ ಬಂದು ಮಾಹಿತಿ ಕೇಳುತ್ತಿದ್ದಾರೆ. ಅವರು ಕೃಷಿ ಇಲಾಖೆಯ ಕಚೇರಿಯಲ್ಲಿ ಕೌಂಟರ್ ತೆಗೆದಿದ್ದು ಅಲ್ಲಿಗೆ ಹೋಗಿ ಎಂದು ಸೂಚಿಸುತ್ತಾರೆ. ಆದರೆ ಕೃಷಿ ಇಲಾಖೆಯಲ್ಲಿ ಇನ್ನೂ ಏನೂ ಸಿದ್ದತೆಗಳು ನಡೆದಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT