ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಮಿನಿ ಬ್ಯಾಂಕ್

ಡಿಸಿಸಿ ಬ್ಯಾಂಕ್‌ನಿಂದ ಸೇವೆ ಶೀಘ್ರ ಆರಂಭ: ಎಚ್‌.ಎಸ್‌. ಮೋಹನರೆಡ್ಡಿ
Last Updated 18 ಫೆಬ್ರುವರಿ 2021, 4:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರಾಷ್ಟ್ರೀಯಕೃತ ಬ್ಯಾಂಕ್‍ಗಳಲ್ಲಿ ದೊರೆಯುವ ಸೌಲಭ್ಯಗಳು ಎಸ್‍ಎಫ್‌ಸಿಎಸ್‌ ಹಾಗೂ ವಿಎಸ್‌ಎಸ್‌ಎನ್‌ ಸೊಸೈಟಿಗಳಲ್ಲಿ ಒದಗಿಸಲು ಯೋಜನೆಯನ್ನು ರೂಪಿಸಿ, ಗ್ರಾಮೀಣ ಪ್ರದೇಶದಲ್ಲಿ ಮಿನಿ ಬ್ಯಾಂಕ್ ಮಾದರಿಯಲ್ಲಿ ಸೇವೆ ಒದಗಿಸಲಾಗುತ್ತದೆ’ ಎಂದು ಡಿಸಿಸಿ ಬ್ಯಾಂಕಿನ ನಿರ್ದೇಶಕ ಎಚ್.ಎಸ್.ಮೋಹನ್‌ರೆಡ್ಡಿ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಎಸ್‍ಎಫ್‌ಸಿಎಸ್‌ ಹಾಗೂ ವಿಎಸ್‌ಎಸ್‌ಎನ್‌ ಸೊಸೈಟಿಗಳಿಗೆ ಗಣಕಯಂತ್ರಗಳನ್ನು ವಿತರಿಸಿ ಮಾತನಾಡಿದರು.

‘ಗ್ರಾಮೀಣ ಪ್ರದೇಶದಲ್ಲಿರುವ ಎಸ್‍ಎಫ್‌ಸಿಎಸ್‌ ಹಾಗೂ ವಿಎಸ್‌ಎಸ್‌ಎನ್‌ ಸೊಸೈಟಿಗಳಲ್ಲಿ ವ್ಯವಸ್ಥೆಗಳನ್ನು ಪಾರದರ್ಶಕವಾಗಿರಲು ಡಿಸಿಸಿ ಬ್ಯಾಂಕ್ ಮೂಲಕ ಉಚಿತವಾಗಿ ಗಣಕಯಂತ್ರಗಳನ್ನು ನೀಡುತ್ತಿದ್ದೇವೆ. ಜನರ ಮನೆಬಾಗಿಲಿಗೆ ಬ್ಯಾಂಕಿನ ವ್ಯವಸ್ಥೆಯನ್ನು ಜಾರಿಗೊಳಿಸಲು ಈಗಾಗಲೇ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ’ ಎಂದು ಹೇಳಿದರು.

‘ಸಮಾಜದಲ್ಲಿ ಬಡವರು, ಮಹಿಳೆಯರು ಹಾಗೂ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಡಿಸಿಸಿ ಬ್ಯಾಂಕ್ ವತಿಯಿಂದ ಬಡ್ಡಿರಹಿತ ಸಾಲ ಸಹಿತ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಬಗ್ಗೆ ಜನರಲ್ಲಿ ವ್ಯಾಪಕ ಅರಿವು ಮತ್ತು ಜಾಗೃತಿ ಮೂಡಿಸುವ ಅಗತ್ಯ ಇದೆ’ ಎಂದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಮಹಿಳೆಯರಿಗೆ ಬಡ್ಡಿರಹಿತ ಸಾಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಸಹ ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಮಹಿಳೆಯರು ಸ್ವ– ಉದ್ಯೋಗಿಗಳಾಗುವುದಕ್ಕೆ ಬ್ಯಾಂಕಿನಿಂದ ಎಲ್ಲಾ ರೀತಿಯ
ನೆರವು ಒದಗಿಸಲು ಬದ್ಧರಾಗಿದ್ದೇವೆ’ ಎಂದರು.

ಮೈಲಪ್ಪನಹಳ್ಳಿ, ನಂದಿ, ದಿಬ್ಬೂರ್, ಚಿಕ್ಕಪೈಲಗುರ್ಕಿ, ವಿಎಸ್‌ಎಸ್‌ಎನ್‌ಗಳು, ಜಾತವಾರಹೊಸಹಳ್ಳಿ, ಕೊಲವನಹಳ್ಳಿ, ದೊಡ್ಡಮರಳಿ, ಕಸಬಾ ಪ್ಯಾಕ್ಸ್‌ಗಳಿಗೆ ಗಣಕಯಂತ್ರಗಳನ್ನು ವಿತರಿಸಲಾಯಿತು.

ಡಿಸಿಸಿ ಬ್ಯಾಂಕಿನ ನಿರ್ದೇಶಕ ಕೆ.ಎಸ್.ದ್ಯಾವಪ್ಪ, ಬಿ.ಆರ್.ಅಶ್ವತ್ಥಪ್ಪ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕಿ ಜಿ.ಜ್ಯೋತಿ, ಮೇಲ್ವಿಚಾರಕಿ ಕೆ.ಎ.ವಸಂತಾ, ಜಾತವಾ ಹೊಸಹಳ್ಳಿ ಎಸ್‌ಎಫ್‌ಸಿಎಸ್ ಬ್ಯಾಂಕಿನ ಅಧ್ಯಕ್ಷ ಎಲ್.ಮುನಿರೆಡ್ಡಿ, ಕಸಬಾ ಪ್ಯಾಕ್ಸ್ ಅಧ್ಯಕ್ಷ ಚನ್ನಕೃಷ್ಣಪ್ಪ, ಮೈಲಪ್ಪನಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಜಗದೀಶ್‍ರೆಡ್ಡಿ ಹಾಗೂ ವಿವಿಧ ಎಸ್ಎಫ್‌ಸಿಎಸ್ ಹಾಗೂ ವಿಎಸ್‌ಎಸ್ಎನ್ ಸೊಸೈಟಿಗಳ ಸಿಇಓಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT