ಬುಧವಾರ, ಜನವರಿ 22, 2020
18 °C
ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಪೊಲೀಸ್‌ ಬಿಗಿ ಬಂದೋಬಸ್ತ್‌, ಜನಜೀವನದ ಮೇಲೆ ಬೀರದ ಪರಿಣಾಮ

ಚಿಕ್ಕಬಳ್ಳಾಪುರ: ಮುಷ್ಕರಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಮತ್ತು ಜನ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಿಪಿಎಂ, ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಜನವಾದಿ ಮಹಿಳಾ ಸಂಘಟನೆ ಜಿಲ್ಲೆಯಲ್ಲಿ ಬುಧವಾರ ಜಿಲ್ಲಾ ಬಂದ್‌ ನಡೆಸಲು ತೀರ್ಮಾನಿಸಿದ್ದವು. ಆದರೆ ಬಂದ್‌ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದರು.

ಆದರೂ ಬಾಗೇಪಲ್ಲಿಯಲ್ಲಿ ಸಂಜೆ ವರೆಗೆ ಮತ್ತು ಗೌರಿಬಿದನೂರಿನಲ್ಲಿ ಮಧ್ಯಾಹ್ನದ ವರೆಗೆ ಬಹುತೇಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳ ಬಾಗಿಲು ತೆರೆಯಲಿಲ್ಲ. ವಾಹನ ಸಂಚಾರ ವಿರಳವಾಗಿತ್ತು. ಹೀಗಾಗಿ ಈ ಎರಡು ತಾಲ್ಲೂಕು ಕೇಂದ್ರಗಳಲ್ಲಿ ಸ್ವಲ್ಪ ಮಟ್ಟಿಗೆ ಬಂದ್‌ನ ಸ್ವರೂಪ ಕಂಡುಬಂತು.

ಉಳಿದಂತೆ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಗುಡಿಬಂಡೆ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆದದ್ದು ಬಿಟ್ಟರೆ ಮುಷ್ಕರ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು, ಆಟೊಗಳ ಸಂಚಾರ ಎಂದಿನಂತೆ ಕಂಡುಬಂತು. ನಗರದ ಎಲ್ಲಾ ಅಂಗಡಿ, ಮಳಿಗೆಗಳು, ಹೊಟೇಲ್‌ಗಳು ಬಾಗಿಲು ತೆರೆದಿದ್ದವು. ಪೆಟ್ರೋಲ್ ಬಂಕ್‌ಗಳು ವಹಿವಾಟು ನಡೆಸಿದವು. ಸರ್ಕಾರಿ ಕಚೇರಿಗಳು, ಅಂಚೆ ಕಚೇರಿಗಳು, ಬ್ಯಾಂಕ್‌ ಶಾಖೆಗಳು ಕಾರ್ಯ ನಿರ್ವಹಿಸಿದವು.

ಜಿಲ್ಲೆಯಲ್ಲಿ ಬುಧವಾರ ಶಾಲೆಗಳಿಗೆ ರಜೆ ಘೋಷಿಸಿರಲಿಲ್ಲ. ಹೀಗಾಗಿ, ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಮುಷ್ಕರದ ಪ್ರಯುಕ್ತ ನಗರಗಳ ಪ್ರಮುಖ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ಧಿಕ್ಕಾರ ಕೂಗಿದರು. ಪೊಲೀಸರು ಪ್ರತಿಭಟನಾಕಾರರಿಗೆ ಅಂಬೇಡ್ಕರ್ ವೃತ್ತಕ್ಕೆ ಹೊಂದಿಕೊಂಡಂತೆ ಎಂ.ಜಿ.ರಸ್ತೆಯಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಿಸಿದ್ದರು. ಬೆಳಿಗ್ಗೆ 11.45ರ ಸುಮಾರಿಗೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ‘ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ತಮ್ಮ ವೈಫಲ್ಯಗಳ ವಿರುದ್ಧ ನಡೆಯುತ್ತಿರುವ ಮುಷ್ಕರ ದಮನ ಮಾಡಲು ಹೊರಟಿವೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಮೆರೆಯುವ ಜತೆಗೆ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ. ಸಚಿವರಾದ ಆರ್.ಅಶೋಕ್ ಮತ್ತು ಸುರೇಶ್‌ ಕುಮಾರ್ ಅವರು ಮುಷ್ಕರದ ಬಗ್ಗೆ ಲಘುವಾಗಿ ಮಾತನಾಡಿ, ಮುಷ್ಕರ ನಡೆಯಲು ಬಿಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿರುವುದು ಖಂಡನೀಯ’ ಎಂದು ಹೇಳಿದರು.

‘ಮುಷ್ಕರಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ಕೂಡ ವ್ಯಕ್ತವಾಗಿದೆ. ಆದರೆ ಸರ್ಕಾರದ ಯಂತ್ರಾಂಗ, ಬಿಜೆಪಿ ಮತ್ತು ಪೊಲೀಸ್‌ ಇಲಾಖೆ ಮುಷ್ಕರ ದಮನ ಮಾಡಲು ಹೊರಟಿವೆ. ಅದರಲ್ಲಿ ಅವರು ಇವತ್ತು ಯಶಸ್ವಿಯಾಗಬಹುದು. ಆದರೆ ಇದು ಜನರ ಬದುಕಿನ ಸಮಸ್ಯೆ. ಹೀಗಾಗಿ ಮುಂದಿನ ದಿನ ಕಾರ್ಮಿಕರ ಶಕ್ತಿ ಏನು ಎಂಬುದು ಗೊತ್ತಾಗಲಿದೆ. ಶಾಂತಿಯುತವಾಗಿ ಮುಷ್ಕರ ನಡೆಸುತ್ತಿದ್ದರೆ ರಾಜ್ಯ ಸರ್ಕಾರ, ಬಿಜೆಪಿ, ಸಂಘ ಪರಿವಾರದ ಕುಮ್ಮಕ್ಕಿನಿಂದ ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಷಡ್ಯಂತ್ರ ನಡೆದಿದೆ. ಅದಕ್ಕೆ ಭಯಪಡುವುದಿಲ್ಲ. ಹೋರಾಟ ಮುಂದುವರಿಸುತ್ತೇವೆ’ ಎಂದು ತಿಳಿಸಿದರು.

ಚಿಂತಕ ಡಾ.ಅನಿಲ್‌ ಕುಮಾರ್ ಮಾತನಾಡಿ, ‘ಪ್ರಜಾತಂತ್ರ, ಜನತಂತ್ರ ವ್ಯವಸ್ಥೆಯಲ್ಲಿ ಬಂದ್, ಮುಷ್ಕರ ಎನ್ನುವುದು ಜನರ ಹಕ್ಕು. ಅದನ್ನು ದಮನಿಸಲು ಕೇಂದ್ರ ಸರ್ಕಾರ ಅನೇಕ ಕಡೆಗಳಲ್ಲಿ ರಾಜ್ಯ ಸರ್ಕಾರಗಳನ್ನು ಬಳಸಿಕೊಂಡು ಪ್ರಯತ್ನ ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ನಿಲುವು. ನಾವು ಶಾಂತಿಯುವಾಗಿ ಮೆರವಣಿಗೆ ನಡೆಸಿ, ಭಾಷಣ ಮಾಡಲು ಅವಕಾಶ ಕೊಡುತ್ತಿಲ್ಲ. ಪೊಲೀಸ್‌ ವರಿಷ್ಠಾಧಿಕಾರಿ ಭಾಸ್ಕರ್‌ ರಾವ್ ಅವರು ಸರ್ಕಾರದ ದಲ್ಲಾಳಿಯಂತೆ ಕೆಲಸ ಮಾಡುತ್ತಿದ್ದಾರೆ. ಗೃಹ ಸಚಿವರು, ಮುಖ್ಯಮಂತ್ರಿ, ಸಚಿವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ಮುಷ್ಕರಕ್ಕೆ ಪೂರ್ವಭಾವಿಯಾಗಿ ಪ್ರಚಾರ ಮಾಡಲಾಗಿತ್ತು. ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗುವುದು ಅರಿತ ಸರ್ಕಾರ ಮಾಧ್ಯಮಗಳನ್ನು ಬಳಸಿಕೊಂಡು ಬಂದ್‌ ಇಲ್ಲ ಬರೀ ಮುಷ್ಕರ ನಡೆಯಲಿದೆ. ಹೀಗಾಗಿ ಅಂಗಡಿಗಳನ್ನು ಮುಚ್ಚಬೇಡಿ ಎಂದು ಪ್ರಚಾರ ಮಾಡಿದರು. ಆದರೂ ಸಾರ್ವಜನಿಕರು ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಜಯರಾಂ ರೆಡ್ಡಿ, ಎಸ್‌ಎಫ್‌ಐ ಜಿಲ್ಲಾ ಘಟಕದ ಸಂಚಾಲಕ ಸೋಮಶೇಖರ್, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಆರ್. ಮಂಜುಳಾ, ಪದಾಧಿಕಾರಿಗಳಾದ ಲಲಿತಮ್ಮ, ಪರಿಮಳಾ, ನಾರಾಯಣಮ್ಮ, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ, ಕಾರ್ಯದರ್ಶಿ ರತ್ನಮ್ಮ, ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮುನಿತಿಮ್ಮಯ್ಯ, ಪದಾಧಿಕಾರಿಗಳಾದ ನ್ಯಾತಪ್ಪ, ರಾಮಕೃಷ್ಣಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು