ಸೋಮವಾರ, ಅಕ್ಟೋಬರ್ 3, 2022
20 °C
ಸಮಸ್ಯೆ ನಡುವೆಯೂ ಸರ್ಕಾರಿ ಶಾಲೆಗೆ ‘ಸ್ವಚ್ಛತಾ ಶಾಲೆ’ ಪ್ರಶಸ್ತಿ ಗರಿ

ಚಿಂತಾಮಣಿ: ಮಾದರಿಯಾದ ಜಂಗಮಶೀಗೇಹಳ್ಳಿ ಶಾಲೆ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನ ಕೈವಾರ ಹೋಬಳಿಯ ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಗಮಶೀಗೇಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಹಲವಾರು ಸಮಸ್ಯೆಗಳ ನಡುವೆಯೂ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಈ ಬಾರಿ ಕರ್ನಾಟಕ ಸ್ವಚ್ಛ ವಿದ್ಯಾಲಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಗ್ರಾಮ ಪಂಚಾಯಿತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತವಾರಿ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ನಡೆಯುತ್ತಿದೆ. 1 ರಿಂದ 7ನೇ ತರಗತಿಯವರೆಗೆ 51 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 4 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ ದೂರದಲ್ಲಿದ್ದರೂ ಶಾಲೆಯ ಮಕ್ಕಳು ಹಾಗೂ ಪರಿಸರ ಸದಾ ಚಟುವಟಿಕೆಯಿಂದ ಕೂಡಿರುತ್ತದೆ.

ಶಾಲೆಯ ಆವರಣದಲ್ಲಿ ಹಾಗೂ ಸುತ್ತಮುತ್ತಲು ಸ್ವಚ್ಛತೆಗೆ ಆದ್ಯತೆ ನೀಡಿ ಸ್ವಚ್ಛತೆಯ ಶಾಲೆಯನ್ನಾಗಿ ರೂಪಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್‌ನಿಂದ ‘ಸ್ವಚ್ಛತಾ ಶಾಲೆ’ ಪ್ರಶಸ್ತಿ ಲಭಿಸಿದೆ. ಮಕ್ಕಳಿಗೆ ಪ್ರತಿನಿತ್ಯ ಪರಿಸರ ಮತ್ತು ನೀರಿನ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಮಕ್ಕಳಿಗೆ ಶಾಲಾ ಹಂತದಲ್ಲಿ ಪರಿಸರ ಮತ್ತು ನೀರಿನ ಮಹತ್ವದ ಅರಿವು ಮೂಡಿಸಿದರೆ ಅದು ಅವರಲ್ಲಿ ಶಾಶ್ವತವಾಗಿರುತ್ತದೆ ಎನ್ನುವುದು ಶಿಕ್ಷಕರ ಅಭಿಪ್ರಾಯ.

ರೋಟರಿ ಕ್ಲಬ್ ವತಿಯಿಂದ ಶಾಲೆಗೆ ಬಣ್ಣ ಬಳಿದು ಮಕ್ಕಳಿಗೆ ಆಕರ್ಷಣೀಯವಾಗುವಂತೆ ಮಾಡಲಾಗಿದೆ. ದಾನಿಗಳ ನೆರವಿನಿಂದ ಕುಡಿಯುವ ನೀರಿನ ಫಿಲ್ಟರ್, ಸಂಪ್‌, ನೀರಿನ ಮೋಟಾರ್ ಅಳವಡಿಸಲಾಗಿದೆ.
ಶಾಲೆಯ ಮಕ್ಕಳಿಗೆ ಮತ್ತು ಗಿಡಗಳಿಗೆ ನೀರಿನ ಸಮಸ್ಯೆ ಇಲ್ಲ. ಶೌಚಾಲಯವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಇರುವ ಆಟದ ಮೈದಾನದಲ್ಲಿ ಮಕ್ಕಳು ಆಟಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ.

ಎಲ್ಲ ರಾಷ್ಟ್ರೀಯ ಹಬ್ಬಗಳನ್ನು ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗ್ರಾಮದ ಮುಖಂಡರು ಭಾಗವಹಿಸಿ ಸಹಕಾರ ನೀಡುತ್ತಾರೆ. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಗ್ರಾಮದ ಸಾರ್ವಜನಿಕರಿಗೂ ರಂಗೋಲಿ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ವಿಜೇತರಾದವರಿಗೆ ಗ್ರಾಮಸ್ಥರು ಬಹುಮಾನಗಳನ್ನು ವ್ಯವಸ್ಥೆ ಮಾಡುತ್ತಾರೆ. ಗ್ರಾಮಸ್ಥರು ಮತ್ತು ಶಿಕ್ಷಕರು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವುದಕ್ಕೆ ಈ ಶಾಲೆ ನಿದರ್ಶನವಾಗಿದೆ.

ಈ ಗ್ರಾಮದಲ್ಲಿ ಶಿಕ್ಷಕರು, ಶಾಲೆ, ಮತ್ತು ಗ್ರಾಮಸ್ಥರಿಗೂ ಉತ್ತಮ ಬಾಂಧವ್ಯವಿದೆ. ಗ್ರಾಮಸ್ಥರಲ್ಲಿ ನಮ್ಮೂರ ಶಾಲೆ ಎನ್ನುವ ಅಭಿಮಾನವಿದೆ. ಹೀಗಾಗಿ ಶಿಕ್ಷಕರಿಗೆ ಹೆಚ್ಚಿನ ಸಹಕಾರ ನೀಡಿ ಪ್ರೋತ್ಸಾಹಿಸುತ್ತಾರೆ. ಸಹ ಶಿಕ್ಷಕ ಜಿ.ನರಸಿಂಹಯ್ಯ, ಜೆ.ಆರ್.ಸುಧಾಕರ, ಸೂರ್ಯಕಲಾ ಅವರು ಹೊಂದಾಣಿಕೆಯಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

ಶಾಲೆಯಲ್ಲಿ ಶಿಕ್ಷಕರು ಪಾಠ ಪ್ರವಚನಗಳ ಜತೆಗೆ ರಸಪ್ರಶ್ನೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಕ್ತಿಗೀತೆಗಳ ಗಾಯನ ಮುಂತಾದ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ. ಚಟುವಟಿಕೆ ಆಧಾರಿತ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆಯುತ್ತವೆ. ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ, ಕ್ರೀಡಾಕೂಟದಲ್ಲಿ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.

ಶಾಲೆಯು ಇರುವ ಇತಿಮಿತಿಗಳಲ್ಲಿ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದರೂ ಸಮಸ್ಯೆಗಳು ಕಾಡುತ್ತಿವೆ. ಶಾಲೆಗೆ ಈಗಿರುವ ಕಲ್ಲುಗಳ ಆವರಣ ಶಿಥಿಲವಾಗಿದೆ. ನೂತನ ಆವರಣದ ನಿರ್ಮಾಣ ಅಗತ್ಯವಾಗಿದೆ. 2 ಕೊಠಡಿಗಳು ಶಿಥಿಲಗೊಂಡಿದ್ದು ಅವುಗಳ ದುರಸ್ತಿ ಆಗಬೇಕಾಗಿದೆ. ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್, ಜ್ಞಾನಾರ್ಜನೆಗಾಗಿ ಟಿ.ವಿ, ಕಂಪ್ಯೂಟರ್, ಪ್ರಾಜೆಕ್ಟರ್ ಬೇಕಾಗಿದೆ. ನಲಿ-ಕಲಿಗೆ ಬೇಕಾಗಿರುವ ಪೀಠೋಪಕರಣ, ವಿಜ್ಞಾನ ಕ್ಲಬ್‌ಗೆ ಅಗತ್ಯವಾದ ಉಪಕರಣ ದೊರೆತರೆ ಮಕ್ಕಳು ಕಲಿಕೆ ಮತ್ತಷ್ಟು ಪರಿಣಾಮಕಾರಿಯಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು