ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಳೂರು: ಮಾದರಿಯಾದ ಪಾಳ್ಯಕೆರೆ ಸರ್ಕಾರಿ ಪ್ರೌಢಶಾಲೆ

ವಿಶಾಲವಾದ ಆಟದ ಮೈದಾನ: ವಿದ್ಯಾರ್ಥಿಗಳಿಗೆ ಉತ್ತಮ ಗ್ರಂಥಾಲಯ ಸೇರಿ ವಿವಿಧ ಸೌಲಭ್ಯ
Last Updated 4 ಫೆಬ್ರುವರಿ 2023, 6:24 IST
ಅಕ್ಷರ ಗಾತ್ರ

ಚೇಳೂರು: ಒಂದು ವಿಜ್ಞಾನ ಪ್ರಯೋಗಾಲಯ, 15 ಕಂಪ್ಯೂಟರ್ ಒಳಗೊಂಡ ಕೊಠಡಿ, ಉತ್ತಮ ಗ್ರಂಥಾಲಯ, ವಿಶಾಲವಾದ ಆಟದ ಮೈದಾನ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ, ದೈಹಿಕ ಶಿಕ್ಷಣ ಶಿಕ್ಷಕರಿಂದ ಪ್ರತಿನಿತ್ಯ ವ್ಯಾಯಾಮ... ಹೀಗೆ ಎಲ್ಲ ಸೌಲಭ್ಯಗಳನ್ನು ಒಳಗೊಂಡು ಯಾವುದೇ ಖಾಸಗಿ ಶಾಲೆಗಳಿಗಿಂತ ಕಮ್ಮಿಯಿಲ್ಲ ಎಂಬಂತೆ ರೂಪುಗೊಂಡಿದೆ ಪಾಳ್ಯಕೆರೆಯ ಸರ್ಕಾರ ಪ್ರೌಢಶಾಲೆ.

ಶಾಲೆಯಲ್ಲಿ ಸಿಗುತ್ತಿರುವ ಗುಣಮಟ್ಟದ ಶಿಕ್ಷಣದಿಂದಾಗಿ ಪ್ರತಿ ವರ್ಷ ಶಾಲೆಯ ದಾಖಲಾತಿ ಪ್ರಮಾಣವು ಹೆಚ್ಚಾಗುತ್ತಿದೆ. ಜತೆಗೆ ಉತ್ತಮ ಫಲಿತಾಂಶವನ್ನು ಸರ್ಕಾರಿ ಶಾಲೆ ನೀಡುತ್ತಿರುವ ಹಿನ್ನೆಲೆಯಲ್ಲಿ ಜನರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸುವಂತಾಗಿದೆ. ಜತೆಗೆ ಪಕ್ಕದ ಊರುಗಳ ಜನರು ತಮ್ಮ ಮಕ್ಕಳನ್ನು ಪಾಳ್ಯಕೆರೆ ಸರ್ಕಾರಿ ಪ್ರೌಢಶಾಲೆಗೆ ಮುಂದಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಾಠ, ಪ್ರವಚನಗಳು ಅಷ್ಟೇ ಅಲ್ಲದೆ, ಪ್ರತೀ ಶನಿವಾರ ವ್ಯಾಯಾಮ, ಯೋಗಾಸನ, ಪ್ರಾಣಾಯಾಮ, ಕವಾಯತು ಹಾಗೂ ಪ್ರತಿದಿನ ಬೆಳಗಿನ ಜಾವ ಧ್ಯಾನವನ್ನು ಸಹ ಅಭ್ಯಾಸ ಮಾಡಿಸಲಾಗುತ್ತದೆ.

ಈ ಶಾಲೆಯು ಊರಿನ ಹೊರವಲಯದಲ್ಲಿರುವುದರಿಂದ ಗಾಳಿ, ಬೆಳಕು, ಹಚ್ಚಹಸಿರಿನ ಪ್ರಶಾಂತವಾದ ವಾತಾವರಣವಿದ್ದು, ವಿದ್ಯಾರ್ಥಿಗಳ ಮನಸ್ಸನ್ನು ಉಲ್ಲಾಸಗೊಳಿಸಿ, ಓದುವಂತೆ ಉತ್ತೇಜಿಸುತ್ತದೆ. ಪ್ರತಿವರ್ಷವೂ ಎಸ್ಸೆಸ್ಸೆಲ್ಸಿಯಲ್ಲಿ ನೂರರಷ್ಟು ಫಲಿತಾಂಶ ನೀಡುತ್ತಿರುವ ಶಾಲೆಯು, ತಾಲ್ಲೂಕಿನಲ್ಲೇ ಉತ್ತಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂದು ಎಕರೆ ವಿಸ್ತೀರ್ಣದಲ್ಲಿರುವ ಶಾಲೆಯಲ್ಲಿ ಒಟ್ಟಾರೆ ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾಕೊಠಡಿ ಹೊರತುಪಡಿಸಿ ಐದು ಕೊಠಡಿಗಳಿದ್ದು, 77ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯು ವಿಶಾಲ ಆಟದ ಮೈದಾನ ಒಳಗೊಂಡಿದೆ. ಶಾಲೆಯಲ್ಲಿ ಉತ್ತಮ ಶಿಕ್ಷಕ ವರ್ಗವಿದ್ದು, ಎಲ್ಲ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಟದಟ್ಟಾಗುವಂತೆ ಹೇಳಿಕೊಡುತ್ತಾರೆ. ಪ್ರತಿ ಶುಕ್ರವಾರ ತರಗತಿ ವಿಷಯವಾರು ಗುಂಪುಗಳನ್ನು ರಚಿಸಿ ರಸಪ್ರಶ್ನೆ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ಶಿಕ್ಷಕರು ತಿಳಿಸಿದರು.

ಸಂಪರ್ಕ ರಸ್ತೆಯದ್ದೇ ಸಮಸ್ಯೆ

ಬಿಸಿಯೂಟ ತಯಾರಿಕೆಗೆ ಸುಸಜ್ಜಿತ ಅಡುಗೆಮನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಒಳಗೊಂಡಿದ್ದು, ಶಾಲೆಯ ಆವರಣವನ್ನು ಶುಚಿಯಾಗಿಟ್ಟುಕೊಳ್ಳಲಾಗಿದೆ. ಆದರೆ, ಶಾಲೆಯು ಗ್ರಾಮದ ಹೊರವಲಯದಲ್ಲಿದ್ದು, ಶಾಲೆಗೆ ಬರಲು ಸುಸಜ್ಜಿತವಾದ ರಸ್ತೆ ಸಂಪರ್ಕವೇ ಇಲ್ಲವಾಗಿದೆ.

ಮುಖ್ಯರಸ್ತೆಯಿಂದ ಶಾಲೆಗೆ ಬರಲು ಇರುವ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸಿಲ್ಲ. ಇದರಿಂದಾಗಿ ಶಾಲೆಗೆ ಬರುವ ಮಕ್ಕಳು ಪ್ರತಿನಿತ್ಯವೂ ಮಣ್ಣಿನ ರಸ್ತೆಯಲ್ಲೇ ಬರಬೇಕಿದೆ. ಮಳೆ ಬಂದರೆ, ಈ ರಸ್ತೆಯು ಕೆಸರುಗದ್ದೆಯಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ದುರಸ್ತಿಗೊಳಿಸಬೇಕಿದೆ. ಅಲ್ಲದೆ, ಶಾಲೆಯ ಆವರಣದಲ್ಲಿ ಬಯಲೇ ಆವರಿಸಿರುವುದರಿಂದ ಹಸಿರು ವಾತಾವರಣವೇ ಕಾಣುವುದಿಲ್ಲ. ಹೀಗಾಗಿ ಶಾಲೆ ಆವರಣದಲ್ಲಿ ಕೈತೋಟದ ಅವಶ್ಯಕತೆ ಎದ್ದು ಕಾಣುತ್ತಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT