ಶುಕ್ರವಾರ, ಜನವರಿ 24, 2020
27 °C
ಮಂಚನಬಲೆಯ ಬಿಜಿಎಸ್‌ ವಿದ್ಯಾನಿಕೇತನ ಶಾಲೆಯಲ್ಲಿ ಮಾತೃಭೋಜನ ಕಾರ್ಯಕ್ರಮ

ಧನ್ಯತೆಯಲ್ಲಿ ಮಿಂದ ಮಾತೃ ಹೃದಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಹಬ್ಬದ ಸಡಗರದೊಂದಿಗೆ ಗಿಜಿಗುಟ್ಟುತ್ತಿದ್ದ ಆ ಚಪ್ಪರದ ಒಳಗೆ ಪಂಕ್ತಿಯಲ್ಲಿ ಕುಳಿತ ಮಕ್ಕಳ ಎದುರು ಎಲೆಯಲ್ಲಿ ತರಹೇವಾರಿ ಭಕ್ಷ ಭೋಜನಗಳು ಆವರಿಸಿಕೊಂಡಿದ್ದವು. ವಿವಿಧ ಬಗೆಯ ತಿಂಡಿ ತಿನ್ನಿಸುಗಳನ್ನು ಸಂತಸದಿಂದಲೇ ಸಹಪಾಠಿಗಳೊಂದಿಗೆ ಮೆಲ್ಲುತ್ತಿದ್ದವರ ಮೊಗದಲ್ಲಿ ಸಂತಸದ ಲಾಸ್ಯವಾಡುತ್ತಿತ್ತು. ಜಾತ್ಯತೀತೆಯ ದೋತ್ಯಕವಾಗಿ ನಡೆದ ಮಕ್ಕಳು ಭೋಜನವನ್ನು ಕಣ್ತುಂಬಿಕೊಂಡ ಹೆತ್ತವರ ಮೊಗದಲ್ಲಿ ಅನೂಹ್ಯ ಆನಂದ ಕಂಡುಬಂತು.

ತಾಲ್ಲೂಕಿನ ಮಂಚನಬಲೆಯ ಬಿಜಿಎಸ್‌ ವಿದ್ಯಾನಿಕೇತನ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾತೃಭೋಜನ ಕಾರ್ಯಕ್ರಮದಲ್ಲಿ ಕಂಡ ದೃಶ್ಯವಿದು. ಮಕ್ಕಳಿಗಾಗಿ ಪೋಷಕರು ತರಕಾರಿ ಪಲಾವ್, ಕೇಸರಿ ಬಾತ್, ಉಪ್ಪಿಟ್ಟು, ಚಿತ್ರಾನ್ನ, ಮೊಸರನ್ನ, ಅನ್ನ ಸಾಂಬಾರ್ ಸೇರಿದಂತೆ ವಿವಿಧ ಬಗೆಯ ಅಡುಗೆ ಸಿದ್ಧಪಡಿಸಿಕೊಂಡು ಬಂದಿದ್ದರು. ಅವರಿವರೆನ್ನದೆ ಎಲ್ಲರೂ ಬಡಿಸಿದ ಊಟವನ್ನು ಸವಿದ ಮಕ್ಕಳ ಮೊಗದಲ್ಲಿ ಸಂತಸ ಮನೆ ಮಾಡಿದರೆ, ಊಣ ಬಡಿಸಿದ ತಾಯಂದಿರಲ್ಲಿ ಧನ್ಯತೆಯ ಭಾವ ಕಂಡುಬಂತು.

ಪುಟಾಣಿಗಳಿಗೆ ಕೈತುತ್ತು ತಿನ್ನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳನಾಥ ಸ್ವಾಮೀಜಿ, ‘ಮಕ್ಕಳಿಗೆ ತಾಯಂದಿರು ಕೈ ತುತ್ತು ತಿನಿಸುವ ಮೂಲಕ ಮಾತೃತ್ವದ ಸಂಕೇತವನ್ನು ಎತ್ತಿ ಹಿಡಿಯಬೇಕು. ಮಕ್ಕಳನ್ನು ದೇವರಂತೆ ಕಾಣುವ ಪೋಷಕರು ಪ್ರೀತಿಯಿಂದ ಉತ್ತಮ ಸಂಸ್ಕಾರವನ್ನು ಹೇಳಿಕೊಡಬೇಕು’ ಎಂದು ಹೇಳಿದರು.

‘ಪೋಷಕರು ಮಕ್ಕಳ ಅಗತ್ಯತೆಗಳನ್ನು ಅರಿತು ಜಾಗೃತಿ ವಹಿಸಿ ಉತ್ತಮ ಊಟ, ಬಟ್ಟೆ ಕೊಡಿಸಬೇಕು. ಮಕ್ಕಳ ಜೀವನಕ್ಕೆ ಬೇಕಾದ ಸಂಸ್ಕಾರಯುತ ಮೌಲ್ಯಗಳನ್ನು ಹೇಳಿಕೊಡಬೇಕು. ಇದರಿಂದ ಮಕ್ಕಳ ಮುಂದಿನ ಭವಿಷ್ಯವೂ ಉಜ್ವಲವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಪ್ರೀತಿ, ವಾತ್ಸಲ್ಯ ತುಂಬಿದರೆ ಜೀವನ ಪೂರ್ತಿ ಪೋಷಕರನ್ನು ಮಮತೆಯಿಂದ ಕಾಣುತ್ತಾರೆ. ಜತೆಗೆ ಭಾರತೀಯ ಸಂಸ್ಕೃತಿ ಉಳಿಸುವಂತಹ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಪೋಷಕರಿಂದ ದೂರ ಉಳಿಯುತ್ತಿರುವುದು ಆತಂಕದ ಸಂಗತಿ. ಮಕ್ಕಳು ಮತ್ತು ಪೋಷಕರ ಇದರಿಂದ ಅನೇಕ ಸಮಸ್ಯೆಗಳನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ. ಜತೆಗೆ ಮುಂದಿನ ಭವಿಷ್ಯವೂ ಹಾಳಾಗುತ್ತದೆ. ಆದ್ದರಿಂದ ಪೋಷಕರು ಆರಂಭದಲ್ಲೆ ಎಚ್ಚರ ವಹಿಸಿ ಮಕ್ಕಳ ಆಸೆಗಳನ್ನು ಈಡೇರಿಸಲು ಮುಂದಾಗಿ’ ಎಂದು ತಿಳಿಸಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ‘ಬರೀ ಪುಸ್ತಕ ಓದಿನಿಂದ ಮಕ್ಕಳು ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಅವುಗಳು ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತ. ಉತ್ತಮ ಜೀವನ ಸಾಗಿಸಲು ಬೇಕಾಗಿರುವುದು ಪ್ರೇರಣಾದಾಯಕ ಅಂಶಗಳು ಮತ್ತು ಜೀವನ ಮೌಲ್ಯಗಳನ್ನು ತಿಳಿಸಿಕೊಡಲು ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಶಾಲೆಯಲ್ಲಿ ಕಲಿಸುವ ಪಾಠದಿಂದಲೇ ಮಕ್ಕಳ ಭವಿಷ್ಯ ಅರ್ಥಪೂರ್ಣವಾಗದು. ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸುವಂತಹ ಚಟುವಟಿಕೆಗಳನ್ನು ಶಾಲೆಗಳಲ್ಲಿ ರೂಪಿಸಬೇಕು. ಜತೆಗೆ ಪೋಷಕರು ತಮ್ಮ ಮಗುವಿನ ಭಾವನೆ ಅರಿತು ಅವರ ಆಸೆಗಳನ್ನು ಈಡೇರಿಸಲು ಸಹಕರಿಸಬೇಕು’ ಎಂದು ಹೇಳಿದರು.

ಪ್ರಗತಿಪರ ರೈತ ಮಹಿಳೆ ಮಂಜುಳಾ ಚಿಕ್ಕಂಜಿನಪ್ಪ, ಮುಖ್ಯ ಶಿಕ್ಷಕರಾದ ಜಿ.ವಿ.ಗಂಗಾಧರ್, ಬೋರಯ್ಯ, ಸಿ.ಎಸ್.ನಾರಾಯಣಸ್ವಾಮಿ, ಹಿರಿಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಶಿಕ್ಷಕರಾದ ವಿಜಯ್ ಕುಮಾರ್, ಮಹದೇವ್, ಮುನಿರಾಜು, ವೆಂಕಟೇಶಪ್ಪ, ಎಂ.ಎಚ.ರಾಜು, ಸದಾಶಿವ ರೆಡ್ಡಿ, ರಾಜಣ್ಣ, ವೆಂಕಟೇಶ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)