ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಅಪಪ್ರಚಾರ; ಕಾಂಗ್ರೆಸ್‌ಗೆ ತಿರುಗುಬಾಣ–ಡಾ.ಕೆ.ಸುಧಾಕರ್‌

ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ–‘ಪ್ರಜಾವಾಣಿ’ ಸಂದರ್ಶನದಲ್ಲಿ ನೂತನ ಸಂಸದ ಡಾ.ಕೆ.ಸುಧಾಕರ್‌
Published : 15 ಜೂನ್ 2024, 4:48 IST
Last Updated : 15 ಜೂನ್ 2024, 4:48 IST
ಫಾಲೋ ಮಾಡಿ
Comments
ಮಾಜಿ ಸಚಿವ ಡಾ.ಕೆ.ಸುಧಾಕರ್ ಈಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ. 1.63 ಲಕ್ಷ ಮುನ್ನಡೆಯೊಂದಿಗೆ ಗೆಲುವು ಸಾಧಿಸಿರುವ ಅವರಿಂದ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜನರು ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದಾರೆ. ನೂತನ ಸಂಸದರ ಜೊತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.
ಪ್ರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಮಟ್ಟದ ಲೀಡ್ ದೊರೆಯುತ್ತದೆ ಎನ್ನುವ ಲೆಕ್ಕಾಚಾರ ಮತ್ತು ವಿಶ್ವಾಸ ನಿಮಗೆ ಇತ್ತೇ?

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕ್ಷೇತ್ರದಾದ್ಯಂತ ಪ್ರವಾಸ ಮಾಡುತ್ತಿದ್ದಾಗ ಜನರ ಸ್ಪಂದನೆ ಅತ್ಯುತ್ತಮವಾಗಿತ್ತು. ಆದ್ದರಿಂದ ಗೆಲುವು ಸುನಿಶ್ಚಿತ ಎಂಬ ವಿಶ್ವಾಸ ಇತ್ತು. ಆದರೆ ನಮ್ಮ ನಿರೀಕ್ಷೆಗೂ ಮೀರಿ ದಾಖಲೆಯ ಲೀಡ್ ದೊರೆತಿದೆ. ಕಾಂಗ್ರೆಸ್ ಪಕ್ಷ ನನ್ನ ಮೇಲೆ ಮಾಡಿದ ಅಪಪ್ರಚಾರ, ಸುಳ್ಳು ಆಪಾದನೆಗಳು ತೇಜೋವಧೆಯ ಪ್ರಯತ್ನಗಳು ಅವರಿಗೇ ತಿರುಗುಬಾಣ ಆಗಿದೆ. ಕ್ಷೇತ್ರದ ಜನರು ನನ್ನ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ನಾನು ಆಭಾರಿ. ಈಗ ಅವರ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.

ಪ್ರ

ನಿಮ್ಮ ಗೆಲುವಿಗೆ ಪ್ರಮುಖ ಕಾರಣಗಳು ಏನು ಎಂದು ವಿಶ್ಲೇಷಿಸುತ್ತೀರಿ?

ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವನಾಗಿ ನಾನು ಮಾಡಿದ ಕೆಲಸ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಉಸ್ತುವಾರಿ ಸಚಿವನಾಗಿ ಮಾಡಿದ ಅಭಿವೃದ್ಧಿಯ ಕೆಲಸಗಳನ್ನು ಜನರು ಗುರುತಿಸಿದ್ದಾರೆ. ನಾನು ಸಚಿವನಾಗಿದ್ದ ವೇಳೆ ಎರಡೂ ಜಿಲ್ಲೆಯ ಜನಸಾಮಾನ್ಯರಿಗೆ ಸ್ಪಂದಿಸಿದ್ದೇನೆ. ಆ ಅಭಿಮಾನದ ಕಾರಣದಿಂದ ಮತದಾರರು ನನ್ನ ಬೆಂಬಲಿಸಿದ್ದಾರೆ. ನನ್ನನ್ನ ಆಯ್ಕೆ ಮಾಡಿದರೆ ಕ್ಷೇತ್ರಕ್ಕೆ ಒಬ್ಬ ಕ್ರಿಯಾಶೀಲ ಸಂಸದ ಸಿಗಬಹುದು ಎನ್ನುವ ನಂಬಿಕೆಯಿಂದ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಿದ್ದಾರೆ.  ಮೇಲಾಗಿ ಈ ದೇಶಕ್ಕೆ ಒಂದು ಗಟ್ಟಿಯಾದ ನಾಯಕತ್ವ ಬೇಕು. ಅದಕ್ಕಾಗಿ ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಜನರು ನಿರ್ಧಾರ ಮಾಡಿದ್ದರು. ಜೊತೆಗೆ ಜೆಡಿಎಸ್ ಪಕ್ಷದೊಂದಿಗಿನ ಮೈತ್ರಿ, ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬೆಂಬಲ ನನಗೆ ಇನ್ನಷ್ಟು ಶಕ್ತಿ ತುಂಬಿತು.

ಪ್ರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನಿಮ್ಮ ಅಭಿವೃದ್ಧಿಯ ಮುನ್ನೋಟಗಳು ಏನು?

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಎಲ್ಲ ರಂಗಗಳಲ್ಲೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ರಾಜ್ಯದಲ್ಲಿ, ದೇಶದಲ್ಲಿ ಮಾದರಿ ಕ್ಷೇತ್ರವಾಗಬೇಕು ಎನ್ನುವುದು ನನ್ನ ಕನಸು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ನಗರದಿಂದ 100 ಕಿ.ಮೀ ಅಂತರದಲ್ಲಿ ಇವೆ. ಇಲ್ಲಿ ಸೂಕ್ತವಾದ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಕೈಗಾರಿಕೆಗಳಿಗೆ ಉತ್ತೇಜನ ನೀಡಿದರೆ, ಬೆಂಗಳೂರಿಗೆ ಪರ್ಯಾಯವಾಗಿ ನವ ಬೆಂಗಳೂರು ನಗರ ನಿರ್ಮಿಸುವ ಸಾಧ್ಯತೆ ಇದೆ. ಇದರಿಂದ ಬೆಂಗಳೂರಿನ ಜನ ದಟ್ಟಣೆ, ಒತ್ತಡವೂ ಕಡಿಮೆ ಆಗುತ್ತದೆ. ಈ ಭಾಗದ ಅಭಿವೃದ್ಧಿಯೂ ಆಗುತ್ತೆ. ಇಲ್ಲಿನ ರೈತರಿಗೆ ನೀರು, ಯುವಕರಿಗೆ ಕೌಶಲ ಮತ್ತು ಉದ್ಯೋಗ, ಬಡವರು ಮತ್ತು ಮಹಿಳೆಯರಿಗೆ ಗುಣಮಟ್ಟದ ಜೀವನ ಇವಿಷ್ಟನ್ನ ಕಲ್ಪಿಸುವುದೇ ನನ್ನ ಗುರಿ.

ಪ್ರ

ಬಯಲು ಸೀಮೆಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನೀರಿನ ಹಾಹಾಕಾರ ಹೆಚ್ಚಿದ. ಈ ಸಮಸ್ಯೆ ಪರಿಹಾರಕ್ಕೆ ನಿಮ್ಮ ಯೋಜನೆಗಳು ಏನು? ಗಡಿಭಾಗದ ಆಂಧ್ರಪ್ರದೇಶದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ನೀರನ್ನು ಜಿಲ್ಲೆಗೆ ಹರಿಸುವುದಾಗಿ ಭರವಸೆ ನೀಡಿದ್ದೀರಿ. ಇದು ಯಾವ ರೀತಿಯಲ್ಲಿ ಸಾಧ್ಯವಾಗಲಿದೆ?

ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆ ತರುವುದು ನನ್ನ ಪ್ರಥಮ ಆದ್ಯತೆ. ಅದಕ್ಕೆ ನನ್ನದೇ ಆದ ಒಂದು ಪರಿಕಲ್ಪನೆ ಇದೆ. ಅದರ ಬಗ್ಗೆ ಸೂಕ್ತ ಸಂದರ್ಭದಲ್ಲಿ ಮಾಹಿತಿ ನೀಡುತ್ತೇನೆ.

ಪ್ರ

ವಿಧಾನಸಭೆ ಚುನಾವಣೆಯಲ್ಲಿನ ಸೋಲು ನಿಮ್ಮನ್ನು ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡುವಂತೆ ಮಾಡಿತು?

ಪ್ರತಿಯೊಂದು ಚುನಾವಣೆಯೂ ವಿಭಿನ್ನ. ಆಯಾ ಸಂದರ್ಭದ ಚುನಾವಣಾ ವಿಷಯಗಳು, ರಾಜಕೀಯ ಸಮೀಕರಣಗಳು ಬೇರೆ ಬೇರೆ ಆಗಿರುತ್ತವೆ. ವಿಧಾನಸಭೆ ಚುನಾವಣೆಯಲ್ಲಿ ನನಗಾದ ಹಿನ್ನೆಡೆಯಿಂದ ಬೇಸರವಾದುದು ಖಂಡಿತ ಸತ್ಯ. ಆದರೆ ನಂತರದ ದಿನಗಳಲ್ಲಿ ಅಲ್ಲಿನ ಜನರೇ ನನ್ನ ಬಳಿ ಬಂದು ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದೂ ಸತ್ಯ. ಜನರು ಒಬ್ಬ ಕ್ರಿಯಾಶೀಲ ಜನಪ್ರತಿನಿಧಿಯನ್ನು ಕಳೆದುಕೊಳ್ಳಲು ಎಂದಿಗೂ ಬಯಸುವುದಿಲ್ಲ. ಅಧಿಕಾರದಲ್ಲಿ ಇದ್ದಾಗ ನಾವು ಮಾಡುವ ಒಳ್ಳೆಯ ಕೆಲಸಗಳು ನಮ್ಮನ್ನು ಒಂದಲ್ಲ ಒಂದು ದಿನ ಖಂಡಿತ ಕೈಹಿಡಿಯುತ್ತದೆ. ಜನ ನಮ್ಮ ಸೇವೆಯನ್ನು ಖಂಡಿತ ಗುರುತಿಸುತ್ತಾರೆ. ಇದು ನಾನು ಕಲಿತಿರುವ ಪಾಠ.

ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್
ಪ್ರ

ಬಾಗೇಪಲ್ಲಿ, ಚಿಕ್ಕಬಳ್ಳಾಪುರದಲ್ಲಿ ಕೈಗಾರಿಕೀಕರಣ ಬೆಳೆದಿಲ್ಲ. ದೇವನಹಳ್ಳಿಯಲ್ಲಿ ಕೈಗಾರಿಕೆಗೆ ಭೂಮಿ ಸ್ವಾಧೀನ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಹೀಗೆ ಕೈಗಾರಿಕೀಕರಣದ ವಿಚಾರವಾಗಿ ನಿಮ್ಮ ಆಲೋಚನೆಗಳು ಏನು?

ಮುಂದಿನ ಐದು ವರ್ಷಗಳ ಕಾಲ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಕೈಗಾರಿಕಾ ಅಭಿವೃದ್ಧಿ ಆಗಲಿದೆ. ಎಚ್‌.ಡಿ. ಕುಮಾರಸ್ವಾಮಿ ಅವರು ಈಗ ಕೇಂದ್ರ ಸರ್ಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿದದ್ದಾರೆ. ಇದರಿಂದ ನಮಗೆ ಇನ್ನಷ್ಟು ಅನುಕೂಲ ಆಗಲಿದೆ.
ಭೂಸ್ವಾಧೀನದ ವಿಚಾರ ಬಂದಾಗ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಒಂದಿಂಚು ಭೂಮಿಯೂ ಸ್ವಾಧೀನವಾಗುವುದಿಲ್ಲ. ಕೈಗಾರಿಕಾ ಅಭಿವೃದ್ದಿ ಮತ್ತು ಕೃಷಿ ಇವೆರಡೂ ಪರಸ್ಪರ ವಿರುದ್ಧವಲ್ಲ. ಕೃಷಿ ಉತ್ಪನ್ನಗಳ ಮೌಲ್ಯ ವೃದ್ಧಿ ಆದಾಗ ಮಾತ್ರ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಥನೆ ಆಗಬೇಕಾದರೆ ಕೈಗಾರಿಕೆಗಳು ಅಗತ್ಯ. ಕೃಷಿ, ಕೈಗಾರಿಕೆ ಇವೆರಡನ್ನೂ ಒಟ್ಟಿಗೆ ಬೆಳೆಸಬೇಕು ಎನ್ನುವುದು ನನ್ನ ಅಭಿಪ್ರಾಯ.

ಪ್ರ

ನೀವು ಬಿಡುಗಡೆ ಮಾಡಿರುವ ವಿಕಸಿಕ ಚಿಕ್ಕಬಳ್ಳಾಪುರ ‍ಪ್ರಣಾಳಿಕೆಯ ಎಲ್ಲ ಭರವಸೆಗಳನ್ನು ಈಡೇರಿಸುವಿರಾ?

ನಾನು ಈಗಾಗಲೇ ಹೇಳಿರುವಂತೆ ನನ್ನ ಪ್ರಣಾಳಿಕೆ ನನಗೆ ಭಗವದ್ಗೀತೆ ಇದ್ದಂತೆ. ಅದರಲ್ಲಿ ನಾನು ನೀಡಿರುವ ಭರವಸೆಗಳನ್ನು ಈಡೇರಿಸಲು ನನ್ನ ಶಕ್ತಿ ಮೀರಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. 

ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್
ಪ್ರ

ಶಾಸಕರಾಗಿದ್ದ ವೇಳೆ ಸುಧಾಕರ್ ದ್ವೇಷದ ರಾಜಕಾರಣ ಮಾಡಿದರು. ಈಗಲೂ ಅದನ್ನು ಮುಂದುವರಿಸುತ್ತಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ?

ನಾನು ಖಂಡಿತ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಅದರ ಮೇಲೆ ನನಗೆ ನಂಬಿಕೆಯೂ ಇಲ್ಲ. ನಾನು ಕಷ್ಟಪಟ್ಟು ಹೋರಾಟ ಮಾಡಿ ತಂದ ವೈದ್ಯಕೀಯ ಶಿಕ್ಷಣ ಕಾಲೇಜಿನ ಕಾಮಗಾರಿಯನ್ನು ಪೂರ್ಣಗೊಳಿಸದೆ ಹಾಗೆ ಬಿಟ್ಟಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗಾಗಿ ತಂದಿದ್ದ ಪ್ರತ್ಯೇಕ ಹಾಲು ಒಕ್ಕೂಟವನ್ನು ಅಧಿಕಾರಕ್ಕೆ ಬಂದ ಕೂಡಲೇ ರದ್ದು ಮಾಡಿದ್ದಾರೆ. ಈಗ ನೀವೇ ಹೇಳಿ ದ್ವೇಷ ರಾಜಕಾರಣ ಮಾಡುತ್ತಿರುವುದು ಯಾರು ಎಂದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT